ಕಾರವಾರ: ರಾಷ್ಟ್ರೀಯ ಹೆದ್ದಾರಿ 63ರ ಅಕ್ಕಪಕ್ಕದ ಗ್ರಾಮಗಳಾದ ಚೆಂಡಿಯಾ, ಅರಗಾ ಮತ್ತಿತರ ಕಡೆ ಮಳೆಯಿಂದ ಜಲಾವೃತವಾಗಿ ಜನತೆಗೆ ತೊಂದರೆಯಾಗುವುದನ್ನು ಗಮನಿಸಿದ ಶಾಸಕಿ ರೂಪಾಲಿ ಎಸ್. ನಾಯ್ಕ ಬುಧವಾರ ಸ್ಥಳಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಕಂಪನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸರಾಗವಾಗಿ ನೀರು ಹರಿದು ಹೋಗುವಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಕಾರವಾರ ಸಮೀಪದ ಚೆಂಡಿಯಾ ಗ್ರಾಪಂ ವ್ಯಾಪ್ತಿಯ ಅರಗಾ, ಚೆಂಡಿಯಾ ಗ್ರಾಮದ ಹೆದ್ದಾರಿ ಪಕ್ಕದ ಸ್ಥಳಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೋಗವಿರ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ವೀಕ್ಷಿಸಿದರು.
ಹೆದ್ದಾರಿಯಲ್ಲಿ ಮುಂದಾಲೋಚನೆ ಇಲ್ಲದ ವಿವಿಧ ಕಾಮಗಾರಿಗಳಿಂದ ಗುಡ್ಡದ ಮೇಲಿನಿಂದ ಹರಿದುಬರುವ ನೀರು ಸರಾಗವಾಗಿ ಸಮುದ್ರಕ್ಕೆ ಹರಿದು ಹೋಗದಂತಾಗಿದ್ದು, ಕೃತಕ ನೆರೆಯ ಸಮಸ್ಯೆ ಸೃಷ್ಟಿಸಿದೆ. ಇದರಿಂದ ಜನತೆ ತೊಂದರೆಗೊಳಗಾಗಿದ್ದಾರೆ. ಯಾವುದೇ ಕಾರಣಕ್ಕೂ ಮಳೆ ನೀರು ನಿಂತು ಮನೆಗಳಿಗೆ ಹೋಗದಂತೆ ನೋಡಿಕೊಳ್ಳಬೇಕು. ಸರಾಗವಾಗಿ ನೀರು ಸಮುದ್ರಕ್ಕೆ ಹರಿದು ಹೋಗಬೇಕು. ಹೆದ್ದಾರಿ ಕಾಮಗಾರಿಗಳಿಂದ ಜನತೆ ಯಾಕೆ ತೊಂದರೆ ಅನುಭವಿಸಬೇಕು. ಸ್ಥಳೀಯರಿಗೆ ತೊಂದರೆ ಆಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕರು ಕೆಂಡಾಮಂಡಲರಾದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಮಸ್ಯೆಯಿಂದ ಗಣಪತಿ ವಿಸರ್ಜನೆಗೂ ಸಮಸ್ಯೆ ಆದಾಗ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದೆ. ನಂತರ ಸಚಿವರಿಂದ ಆದೇಶ ಬಂದ ಮೇಲೆ ಕಾಮಗಾರಿ ನಡೆಸಲು ಒಪ್ಪಿದ್ದಾರೆ. ಹಿಂದೆ ತಾವು ತಾಪಂ ಅಧ್ಯಕ್ಷರಾಗಿದ್ದಾಗ ನೌಕಾನೆಲೆ ಕಾಮಗಾರಿಯಿಂದ ನೀರು ತುಂಬುತ್ತಿತ್ತು. ನಂತರ ನಾನು ಖುದ್ದಾಗಿ ತೆರಳಿ ಪರಿಶೀಲಿಸಿ ಮನವರಿಕೆ ಮಾಡಿಕೊಟ್ಟಿದ್ದರಿಂದ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲಾಯಿತು. ಈಗ ಮತ್ತೆ ಈ ಪ್ರದೇಶದ ಜನತೆ ಬವಣೆ ಅನುಭವಿಸುವಂತಾಗಿದೆ. ಪ್ರತಿ ಮಳೆಗಾಲದಲ್ಲೂ ಜನತೆ ತೊಂದರೆ ಅನುಭವಿಸಬೇಕು ಅಂದರೆ ಏನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಸೀಬರ್ಡ್ ನಿರಾಶ್ರಿತರು ಇಲ್ಲಿ ಬಂದು ಮನೆ ಕಟ್ಟಿಕೊಂಡಿದ್ದಾರೆ. ಅವರು ಮೊದಲೇ ತೊಂದರೆಯಲ್ಲಿದ್ದಾರೆ. ಇಂತಹ ಬಡ ಜನತೆಗೆ ಏಕೆ ತೊಂದರೆ ಕೊಡುತ್ತೀರಿ. ಐಆರ್‌ಬಿ ಇಷ್ಟು ದೊಡ್ಡ ಕಂಪನಿ ಎಂದು ಹೇಳಿಕೊಳ್ಳುತ್ತೀರಿ. ಆದರೆ ಏಕೆ ಹೀಗೆ ಮಾಡುತ್ತೀರಿ. ಕ್ಷೇತ್ರದ ಜನರಿಗೆ ತೊಂದರೆ ಆಗುವುದನ್ನು ಯಾವುದೆ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇಲ್ಲಿನ ಅವಾಂತರಗಳ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಈ ಹಿಂದೆ ರಸ್ತೆ ಇದ್ದಾಗ ನೀರು ತುಂಬುತ್ತಿರಲಿಲ್ಲ. ಈಗ ಯಾಕೆ ತುಂಬುತ್ತಿದೆ. ಇಂತಹ ರಸ್ತೆ ಮಾಡಿ ಏನು ಪ್ರಯೋಜನ. ಜನರಿಗೆ ತೊಂದರೆ ಉಂಟುಮಾಡುವುದಾದರೆ ರಸ್ತೆಯೇ ಬೇಡ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜೂನ್ ತಿಂಗಳ ಎರಡೇ ಎರಡು ಮಳೆಗೆ ನೀರು ನಿಂತು ಇಷ್ಟೊಂದು ಸಮಸ್ಯೆ ಆಗಿದೆ. ಮಳೆಗಾಲ ಮುಂದೆ 3-4 ತಿಂಗಳು ಇದೆ. ಜನತೆ ಹೇಗೆ ಕಳೆಯಬೇಕು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಗುಡ್ಡದ ಮೇಲಿನಿಂದ ದೊಡ್ಡ ಹಳ್ಳದಲ್ಲಿ ನೀರು ಬರುತ್ತಿದೆ. ಮಳೆ ಬಂದಾಗ ಎಷ್ಟು ಪ್ರಮಾಣದಲ್ಲಿ ನೀರು ಬರುತ್ತದೆ ಎನ್ನುವುದನ್ನು ದೊಡ್ಡ ಹಳ್ಳದ ನೀರು ಹರಿದುಹೋಗುವಂತೆ ಮಾಡಬೇಕು. ಗುಡ್ಡದ ಮೇಲಿನಿಂದ ಬರುವ ನೀರು ಎಷ್ಟು ಪ್ರಮಾಣದಲ್ಲಿ ಬರಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ರಸ್ತೆ ಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಯನ್ನು ನಿರ್ಮಾಣ ಮಾಡಿ ನೀರು ಹೋಗಲು ಅನುಕೂಲ ಕಲ್ಪಿಸಬೇಕು. ಐದು ದಿನಗಳ ಒಳಗಾಗಿ ಎಲ್ಲವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಐಆರ್‌ಬಿ ಕಚೇರಿಗೆ ಜನರು ಮುತ್ತಿಗೆ ಹಾಕುತ್ತಾರೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಎನ್.ಎಫ್. ನರೋನ, ಗ್ರಾಪಂ ಅಧ್ಯಕ್ಷ ಜಿತೇಶ್ ಅಗೇìಕರ, ಉಪಾಧ್ಯಕ್ಷೆ ಕಲ್ಪನಾ ನಾಯ್ಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತರ ನವೀನ್‌ಕುಮಾರ, ಐಆರ್‌ಬಿ ಕಂಪನಿಯ ಪ್ರತಿನಿಧಿಗಳಾದ ಪ್ರಮೋದ ಸಾವಲ್ಕರ, ಮನಿಷ, ಸದಸ್ಯರು, ಸಾರ್ವಜನಿಕರು ಇದ್ದರು.