ಹುಬ್ಬಳ್ಳಿ: ಸಿಬಿಎಸ್ ಇ 10ನೇ ತರಗತಿಯ ಪರೀಕ್ಷೆ ಬರೆದು ನಂತರ ತಂದೆಯ (ಸಚಿವ ದಿ.ಸಿಎಸ್ ಶಿವಳ್ಳಿ) ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ರೂಪಾ ಶಿವಳ್ಳಿ ಸಿಬಿಎಸ್ ಇ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ.
ಕಳೆದ ತಿಂಗಳು ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಅಂದು ಪುತ್ರಿ ರೂಪಾ ಭಾರವಾದ ಹೆಜ್ಜೆ ಹಾಕುತ್ತ, ಕಣ್ಣೀರುಗರೆಯುತ್ತಲೇ ಸಿಬಿಎಸ್ ಇ ಹತ್ತನೇ ತರಗತಿಯ ಇಂಗ್ಲಿಷ್ ಪರೀಕ್ಷೆ ಬರೆದು, ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಳು.
ತಂದೆಯನ್ನು ಕಳೆದುಕೊಂಡ ನೋವಿನಲ್ಲೂ ಪರೀಕ್ಷೆ ಬರೆದಿದ್ದ ರೂಪಾ ಇಂಗ್ಲಿಷ್ ಪತ್ರಿಕೆಯಲ್ಲಿ ಶೇ.65ರಷ್ಟು ಅಂಕ ಪಡೆದಿದ್ದಾಳೆ. ಅಂತೂ ಶೇ.76ರಷ್ಟು ಅಂಕ ಗಳಿಸುವ ಮೂಲಕ ರೂಪಾ ಶಿವಳ್ಳಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ತಾಯಿ, ಕುಟುಂಬಸ್ಥರು, ಗೆಳೆಯರು ಶುಭ ಹಾರೈಸಿದ್ದಾರೆ.
ತುಂಬಾ ಚಲೋ ಬರೆದಿದ್ದೆ, ಆದ್ರೆ ಇಂಗ್ಲಿಷ್ ನಲ್ಲಿ ಮಾರ್ಕ್ಸ್ ಕಡಿಮೆ ಬಂದ್ ಬಿಡ್ತು..ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಳ್ಳುವುದಾಗಿ ರೂಪಾ ಶಿವಳ್ಳಿ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.