Advertisement

ಪ್ಲಾಸ್ಟಿಕ್‌ ಬಳಸಿ ರನ್‌ವೇ ನಿರ್ಮಾಣ

12:59 AM Aug 08, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ಯಾರಿಗೂ ಬೇಡವಾಗಿರುವ ನಿಷೇಧಿತ ಪ್ಲಾಸ್ಟಿಕ್‌ನಿಂದ ಲೋಹದ ಹಕ್ಕಿಗಳ ಹಾರಾಟಕ್ಕೆ ಪಥ ನಿರ್ಮಾಣವಾಗಲಿದೆ! ಆ ಮೂಲಕ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೂ ಸಹಕಾರಿಯಾಗಲಿದೆ.

Advertisement

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ (ಬಿಐಎಎಲ್‌)ವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಹಾಗೂ ವಿಮಾನ ನಿಲ್ದಾಣದ ವಿವಿಧ ರಸ್ತೆಗಳ ಕಾಮಗಾರಿಗಳಲ್ಲಿ ನಿಷೇಧಿತ ಮತ್ತು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ ಬಳಸಿಕೊಳ್ಳಲು ನಿರ್ಧರಿಸಿದೆ. ಇದಕ್ಕೆ ಬಿಬಿಎಂಪಿಯ ಒಣತ್ಯಾಜ್ಯ ಸಂಗ್ರಹ ಕೇಂದ್ರಗಳಲ್ಲಿ ಸಂಗ್ರಹವಾದ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ ಮತ್ತು ಇಷ್ಟು ದಿನ ನಗರದ ವಿವಿಧೆಡೆ ಬಿಬಿಎಂಪಿ ವಶಪಡಿಸಿಕೊಂಡಿರುವ ನಿಷೇಧಿತ ಪ್ಲಾಸ್ಟಿಕ್‌ ಬಳಕೆಯಾಗಲಿದೆ.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಇದಕ್ಕೆ ಅನುಗುಣವಾಗಿ ಬಿಐಎಎಲ್‌ ಸಂಸ್ಥೆಯು ರಸ್ತೆಗಳ ಅಭಿವೃದ್ಧಿಗೆ ಮುಂದಾಗಿದೆ. ಈ ಎಲ್ಲಾ ರಸ್ತೆಗಳನ್ನು ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕೆ 50 ಸಾವಿರ ಕೆ.ಜಿ (50 ಟನ್‌) ಪ್ಲಾಸ್ಟಿಕ್‌ ಅಗತ್ಯವಿದ್ದು, ಬಿಬಿಎಂಪಿ ಸಹಕಾರ ನೀಡಬೇಕು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮದ ಉಪಾಧ್ಯಕ್ಷ ವೆಂಕಟರಾಮನ್‌ ಅವರು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.

ಈಗಾಗಲೇ ಬಿಬಿಎಂಪಿಯ 166 ವಾರ್ಡ್‌ಗಳಲ್ಲಿ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳಿವೆ. ಇಲ್ಲಿ ಸಂಗ್ರಹವಾದ ಒಣ ತ್ಯಾಜ್ಯವನ್ನು ಪುನರ್‌ ಬಳಕೆ ಮಾಡುವುದಕ್ಕೆ ಬಿಬಿಎಂಪಿ ಚಿಂತನೆ ನಡೆಸಿತ್ತು. ಅದೇ ರೀತಿಯಲ್ಲಿ ಬಿಬಿಎಂಪಿ ನಿಷೇಧಿತ ಪ್ಲಾಸ್ಟಿಕ್‌ ಆಂದೋಲನದ ಅಂಗವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 2015ರಿಂದ ಇಲ್ಲಿಯವರೆಗೆ 23 ಸಾವಿರಕ್ಕೂ ಹೆಚ್ಚು ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲಾಗಿದ್ದು, ಇದರ ಸಂಗ್ರಹ ಬಿಬಿಎಂಪಿಗೂ ತಲೆನೋವಾಗಿತ್ತು.

ಇತ್ತೀಚಿನ ದಿನಗಳಲ್ಲಿ ನಡೆದ ಬೃಹತ್‌ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್‌ ವಶ ಕಾರ್ಯಾಚರಣೆಯಿಂದ ಸಂಗ್ರಹವಾದ ಪ್ಲಾಸ್ಟಿಕ್‌ ಅನ್ನು ಪರಿಸರಕ್ಕೆ ಹಾನಿಯಾಗದಂತೆ ವಿಲೇವಾರಿ ಮಾಡುವ ಜವಾಬ್ದಾರಿಯೂ ಬಿಬಿಎಂಪಿಯ ಮೇಲಿತ್ತು. ಈಗ ಬಿಐಎಎಲ್‌ ರಸ್ತೆಗಳಿಗೆ ತ್ಯಾಜ್ಯ ಪ್ಲಾಸ್ಟಿಕ್‌ ಬಳಕೆ ಮಾಡಲು ಮುಂದೆ ಬಂದಿರುವುದು ಅದಕ್ಕೂ ಪರಿಹಾರ ಸಿಗಲಿದೆ. ಇಂಡಿಯನ್‌ ರೋಡ್‌ ಕಾಂಗ್ರೆಸ್‌ ನಿಯಮಗಳನ್ವಯ ಪ್ಲಾಸ್ಟಿಕ್‌ ತ್ಯಾಜ್ಯವನ್ನು ರಸ್ತೆಗಳ ನಿರ್ಮಾಣಕ್ಕೆ ಬಳಸಬಹುದಾಗಿದೆ. ಪಾಲಿಕೆಯಲ್ಲಿ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್‌ ಸಿಮೆಂಟ್‌ ಕಾರ್ಖಾನೆಗಳ ಇಂಧನಕ್ಕೆ ಬಳಸಿಕೊಳ್ಳಲಾಗುತ್ತಿದೆ.

Advertisement

ಬಿಬಿಎಂಪಿ ವಿವಿಧ ಒಣತ್ಯಾಜ್ಯ ಸಂಗ್ರಹ ಕೇಂದ್ರಗಳಲ್ಲಿ ಸಂಗ್ರಹವಾಗಿರುವ ಮತ್ತು ನಿಷೇಧಿತ ಪ್ಲಾಸ್ಟಿಕ್‌ ಮುಟ್ಟುಗೋಲು ಕಾರ್ಯಾಚರಣೆಯಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್‌ ಅನ್ನು ಬಿಐಎಎಲ್‌ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಬೇಕಾದ ಸಿದ್ಧತೆಗಳನ್ನು ಬಿಬಿಎಂಪಿಯ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ. ಬಿಐಎಎಲ್‌ ಸಹ ರಸ್ತೆಗಳ ನಿರ್ಮಾಣಕ್ಕೆ ತ್ಯಾಜ್ಯ ಪ್ಲಾಸ್ಟಿಕ್‌ ಬಳಸುವುದಕ್ಕೆ ಅಗತ್ಯವಿರುವ ಪರೀಕ್ಷೆಗಳನ್ನು ಮಾಡಿಕೊಳ್ಳುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬಿಐಎಎಲ್‌ನ ಟರ್ಮಿನಲ್‌-2 ಸೇರಿದಂತೆ ವಿವಿಧ ರಸ್ತೆಗಳು ತ್ಯಾಜ್ಯ ಪ್ಲಾಸ್ಟಿಕ್‌ನಿಂದ ನಿರ್ಮಾಣವಾಗಲಿವೆ.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next