ಬೆಂಗಳೂರು: “ಸುಧೀರ್ ಅವರ ಕನಸಿನ ಕಲಾ ಸಂಘವನ್ನು ಉಳಿಸಿಕೊಳ್ಳಲು ಸಲುವಾಗಿಯೇ ನಾನು ನನ್ನ ಮನೆ, ಸೈಟು ಹಾಗೂ ಕೈಯಲ್ಲಿದ್ದ ಒಂದಿಷ್ಟು ಹಣ ಕಳೆದುಕೊಂಡೆ. ಆದರೂ ಎದೆ ಗುಂದದೆ ಮುನ್ನೆಡೆದೆ’ ಎಂದು ಹಿರಿಯ ವೃತ್ತಿರಂಗಭೂಮಿ ಕಲಾವಿದೆ ಮಾಲತಿ ಸುಧೀರ್ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶನಿವಾರ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ತಾವು ಸಾಗಿಬಂದ ಬದುಕಿನ ಹಾದಿಯನ್ನು ಮೆಲುಕು ಹಾಕಿದರು.
ವೃತ್ತಿರಂಗಭೂಮಿ ಕಲಾವಿದರಿಗೊಂದು ಬದುಕು ಕಟ್ಟಿಕೊಡಲು ಸಲುವಾಗಿ ಸುಧೀರ್ ಅವರು “ಕರ್ನಾಟಕ ಕಲಾ ವೈಭವ ಸಂಘ’ಕ್ಕೆ ಜೀವ ನೀಡಿದರು. ಇದು ಸ್ಥಾಪನೆ ಮಾಡಿದ ಒಂದು ವರ್ಷದಲ್ಲೇ ಸುಧೀರ್ ಅವರು ನಮ್ಮನ್ನ ಆಗಲಿದರು. ಹೀಗಾಗಿ ಅವರ ಕನಸಿನ ಕಲಾ ಸಂಘವನ್ನು ಉಳಿಸಿಕೊಳ್ಳಲು ಸಾಕಷ್ಟು ತೊಂದರೆಗಳನ್ನು ಅನುಭವಿಸಿದೆ. ಲಕ್ಷಾಂತರ ರೂ.ಕಳೆದುಕೊಂಡೆ. ನಾಟಕ ಕಂಪನಿಯೊಂದನ್ನು ಮಹಿಳೆ ಮುನ್ನಡೆಸಿಕೊಂಡು ಹೋಗುವುದು ಅಂದರೆ ಸುಲಭದ ಮಾತಲ್ಲ ಎಂದು ಹೇಳುತ್ತಲೇ ಅವರ ಕಣ್ಣುಗಳು ತೇವಗೊಂಡವು.
ಸುಧೀರ್ ಅವರೊಂದಿಗಿನ ಮುನಿಸು: ಸಿನಿಮಾದಲ್ಲಿ ಹೆಸರು ಮಾಡಿದ್ದ ಸುಧೀರ್ ಅವರು ನಾಲ್ವತ್ತು ಮಂದಿ ವೃತ್ತಿರಂಗಭೂಮಿ ಕಲಾವಿದರಿಗೆ ಒಳಿತಾಗಲಿ ಎಂಬ ಕಾರಣಕ್ಕಾಗಿ ನಾಟಕ ಕಂಪನಿ ಹುಟ್ಟುಹಾಕಿದರು. ಆ ವೇಳೆ ನನಗೆ ನಾಟಕಗಳಲ್ಲಿ ಅಭಿನಯಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಅವರೊಂದಿಗೆ ನಾನು ಮುನಿಸಿಕೊಂಡಿದ್ದೆ. ಹಾಗಾಗಿಯೇ ಆ ನಾಟಕ ಕಂಪನಿಯತ್ತ ನಾನು ಮುಖ ಮಾಡಲೇ ಇಲ್ಲ. ಆದರೆ ಆ ನಾಟಕ ಕಂಪನಿಗೆ ನನ್ನನ್ನೇ ಅವರು ಮಾಲಕಿಯನ್ನಾಗಿ ಮಾಡಿದ್ದಾರೆ ಎಂಬುವುದು ಸುಧೀರ್ ಅವರು ನಿಧನರಾದ ನಂತರ ದಿನಗಳಲ್ಲಿ ಗೊತ್ತಾಯಿತು ಎಂದು ಕಣ್ಣೀರು ಹಾಕಿದರು.
ಹುಬ್ಬಳ್ಳಿಯಲ್ಲಿರುವಾಗಲೇ ಮದುವೆ: ನಮ್ಮೂರು ಹುಬ್ಬಳ್ಳಿ, ತಾಯಿ ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ಸಣ್ಣ ಉದ್ಯೋಗದಲ್ಲಿದ್ದರು. ನಾನು ಎಸ್‌ಎಸ್‌ಎಸ್‌ಎಲ್‌ಸಿ ವರೆಗೆ ಓದಿದೆ. ಆದರೆ ಇಂಗ್ಲಿಷ್, ಮತ್ತು ಗಣಿತದಲ್ಲಿ ಫೇಲಾದ ಹಿನ್ನೆಲೆಯಲ್ಲಿ ಅಲ್ಲಿಗೆ ಶಿಕ್ಷಣ ನಿಲ್ಲಿಸಿದೆ. ನಾನು ನೃತ್ಯ ಚೆನ್ನಾಗಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹುಬ್ಬಳಿಯಲ್ಲಿ ಟೆಂಟ್ ಹಾಕಿದ್ದ ಮಿನುತಾರೆ ಕಲ್ಪನ ಅವರು ತಮ್ಮ ನಾಟಕದ ಕಂಪನಿಗೆ ಸೇರಿಸಿಕೊಂಡರು. ಆ ಕಂಪನಿಯಲ್ಲೇ ಪಾತ್ರ ಮಾಡುತ್ತಿದ್ದ ಸುಧೀರ್ ನನ್ನ ಮದುವೆಯಾದರು ಎಂದು ನಾಟಕ ಕಂಪನಿಯ ಜೀವನ ಮೆಲುಕು ಹಾಕಿದರು. ಈಗ ಚಿತ್ರ ನಿರ್ದೇಶಕ ತರುಣ್ ಸುಧೀರ್ ಮತ್ತು ನಂದಕಿಶೋರ್ ಮಕ್ಕಳೊಂದಿಗೆ ಜೀವನ ಕಳೆಯುತ್ತಿದ್ದಾನೆ. ಅವರು ಕೂಡ ನಿರ್ದೇಶದ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ ಎಂದರು.
ಸರ್ಕಾರ ಕಾರ್ಯಕ್ರಮ ರೂಪಿಸಬೇಕು: ವೃತ್ತಿ ರಂಗಭೂಮಿ ಕ್ಷೇತ್ರ ಇಂದು ಅಪಾಯದಲ್ಲಿದೆ. ಅಲ್ಲಿ ಟ್ಯಾಲೆಂಟ್ ಇದ್ದವರಿದ್ದಾರೆ. ಆದರೆ ಅವರಲ್ಲಿ ಬಹುತೇಕರು ವಿದ್ಯಾವಂತರಿಲ್ಲ. ಆ ಹಿನ್ನೆಲೆಯಲ್ಲಿ ಅವರಿಗೆ ಒಂದು ಬದುಕು ಕಟ್ಟಿಕೊಳ್ಳಲು ಸಲುವಾಗಿ ಸರ್ಕಾರ ಹೊಸ ಕಾರ್ಯಕ್ರಮ ರೂಪಿಸಬೇಕು. ವೃತ್ತಿ ರಂಗಭೂಮಿ ಉಳಿಸಲು, ಹವ್ಯಾಸಿ ರಂಗಭೂಮಿಯೊಂದಿಗೆ ಸಂಬಂಧ ಬೆಸೆಯಬೇಕು ಎಂದು ಮನವಿ ಮಾಡಿದರು.
ಜಿರಳೆಗೆ ಸುಧೀರ್ ಹೆದರುತ್ತಿದ್ದರು: ಸುಧೀರ್ ಅವರು ಖಳನಾಯಕನ ಪಾತ್ರದಲ್ಲಿ ಭಯ ಹುಟ್ಟಿಸುತ್ತಿದ್ದರು. ಆದರೆ ಅವರು ಸಣ್ಣ ಜಿರಳೆಗೂ ಸ್ವತಃಅದೇ ಸುಧೀರ್ ಭಯಬೀಳುತ್ತಿದ್ದರು. ಸುಧೀರ್ ಅಪ್ಪಟ ಮಾನವೀಯತೆ ಮನುಷ್ಯರಾಗಿದ್ದರು. ಖಳನಾಯಕ ಪಾತ್ರಗಳಲ್ಲಿ ಕುಡಿಯುವ ಸನ್ನಿವೇಶಗಳಲ್ಲಿ ಪಾತ್ರಗಳ ಪರಕಾಯ ಪ್ರವೇಶ ಮಾಡುತ್ತಿದ್ದರು. ಆದರೆ ಅವರು ಎಂದೂ ಕುಡಿಯುತ್ತಿರಲ್ಲಿ. ನಾಯಿ ಮತ್ತು ಜಿರಳೆಗೆ ಭಯಪಡುತ್ತಿದ್ದರು ಎಂದು ಹಿರಿಯ ಚಿತ್ರ ನಟ ಸುಧೀರ್ ಅವರ ಬದುಕಿನ ಒಳ ನೋಟಗಳನ್ನು ಮಾಲತಿ ಸುಧೀರ್ ಬಿಚ್ಚಿಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಇದ್ದರು.