Advertisement

ಜೂಲನ್ ವಿದಾಯ ಪಂದ್ಯದಲ್ಲಿ ವಿವಾದ: ದೀಪ್ತಿ ಶರ್ಮಾ ವಿರುದ್ಧ ಆಂಗ್ಲರ ಕೋಪ; ಆಗಿದ್ದೇನು?

09:49 AM Sep 25, 2022 | Team Udayavani |

ಲಂಡನ್: ಭಾರತ ಮತ್ತು ಇಂಗ್ಲೆಂಡ್ ವನಿತೆಯರ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಶನಿವಾರ ಲಾರ್ಡ್ಸ್ ನಲ್ಲಿ ನಡೆಯಿತು. ಭಾರತದ ಲೆಜೆಂಡರಿ ಬೌಲರ್ ಜೂಲನ್ ಗೋಸ್ವಾಮಿ ಅವರ ಅಂತಿಮ ಅಂತಾರಾಷ್ಟ್ರೀಯ ಪಂದ್ಯವೆಂಬ ಕಾರಣಕ್ಕೆ ಈ ಪಂದ್ಯ ಮಹತ್ವ ಪಡೆದಿತ್ತು. ಆದರೆ ಅಂತ್ಯದಲ್ಲಿ ದೀಪ್ತಿ ಶರ್ಮಾ ಮಾಡಿದ ರನೌಟ್ ಕಾರಣದಿಂದ ವಿವಾದವೇ ಉಂಟಾಗಿದೆ.

Advertisement

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 45.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 43.3 ಓವರ್ ಗಳಲ್ಲಿ 153 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ತಂಡ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.

ಆಗಿದ್ದೇನು?

ಇಂಗ್ಲೆಂಡ್ ಗೆಲುವಿಗೆ ಏಳು ಓವರ್ ಗಳಲ್ಲಿ 18 ರನ್ ಅಗತ್ಯವಿತ್ತು. ಆದರೆ ಇದ್ದಿದ್ದು ಕೊನೆಯ ಒಂದು ವಿಕೆಟ್ ಮಾತ್ರ. ದೀಪ್ತಿ ಶರ್ಮಾ ಚೆಂಡೆಸೆಯಲು ಬಂದರು. ಮೊದಲ ಎಸೆತದಲ್ಲಿ ಸಿಂಗಲ್ ರನ್. ನಂತರದ ಎರಡು ಎಸೆತಗಳು ಡಾಟ್. ನಾಲ್ಕನೇ ಬೌಲ್ ಎಸೆಯಲು ಬಂದಾಗ ನಾನ್ ಸ್ಟ್ರೈಕ್ ನಲ್ಲಿದ್ದ ಶಾರ್ಲೋಟ್ ಡೀನ್ ಕ್ರೀಸ್ ಬಿಟ್ಟು ಹೋಗಿದ್ದನ್ನು ಗಮನಿಸಿದ ದೀಪ್ತಿ ರನೌಟ್ ಮಾಡಿದರು. ಮೈದಾನದ ಅಂಪೈರ್ ಗಳು ಮೂರನೇ ಅಂಪೈರ್ ಗೆ ಮನವಿ ಮಾಡಿದರು. ದೀಪ್ತಿ ಔಟ್ ಮಾಡುವಾಗ ಡೀನ್ ಕ್ರೀಸ್ ಹತ್ತಿರದಲ್ಲೂ ಇರಲಿಲ್ಲ. ಅಂಪೈರ್ ಔಟ್ ನೀಡಿದರು. ಭಾರತ ಪಂದ್ಯ ಜಯಿಸಿತು.

Advertisement

ಆದರೆ ಪಂದ್ಯದ ಬಳಿಕ ಇಂಗ್ಲೆಂಡ್ ನ ಕೆಲ ಆಟಗಾರರು, ಮಾಧ್ಯಮಗಳು ದೀಪ್ತಿ ಶರ್ಮಾ ಮತ್ತು ಭಾರತ ತಂಡದ ವಿರುದ್ಧ ತಿರುಗಿ ಬಿದ್ದಿವೆ. ‘ಮಂಕಡಿಂಗ್’ ಮಾಡಿ ಭಾರತ ಕ್ರೀಡಾ ಸ್ಪೂರ್ತಿ ಮರೆತಿದೆ ಎಂದು ಹಲವರು ಹೇಳಿದ್ದಾರೆ. ಮಂಕಡಿಂಗನ್ನು ‘ನ್ಯಾಯಯುತ ರನೌಟ್’ ಎಂದು ಅದೇ ಇಂಗ್ಲೆಂಡ್ ನ ಎಂಸಿಸಿ ತನ್ನ ನಿಯಮಗಳ ಪುಸ್ತಕಕ್ಕೆ ಸೇರಿಸಿದೆ. ಆದರೆ ಕೆಲವು ಮಾಜಿ ಇಂಗ್ಲಿಷ್ ಕ್ರಿಕೆಟಿಗರು ಮತ್ತು ಮಾಧ್ಯಮಗಳ ರೂಲ್ ಬುಕ್‌ ನಲ್ಲಿ ಇನ್ನೂ ಇದು ‘ಮಂಕಡಿಂಗ್’ ಆಗಿರುವುದು ಮಾತ್ರ ವಿಪರ್ಯಾಸ.

ಈ ಬಗ್ಗೆ ಟ್ವೀಟ್ ಮಾಡಿರುವ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್, ‘ಮಂಕಡ್‌ ನ ಚರ್ಚೆಯು ನನಗೆ ನಿಜವಾಗಿಯೂ ಆಸಕ್ತಿದಾಯಕವಾಗಿದೆ. ಎರಡೂ ಕಡೆಯಿಂದ ಹಲವು ಅಭಿಪ್ರಾಯಗಳಿವೆ. ನಾನು ವೈಯಕ್ತಿಕವಾಗಿ ಈ ರೀತಿಯಾಗಿ ಪಂದ್ಯವನ್ನು ಗೆಲ್ಲಲು ಇಷ್ಟಪಡುವುದಿಲ್ಲ’ ಎಂದಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ನಾಯಕಿ ಹರ್ಮನ್ ಅವರು ಬೌಲರ್ ದೀಪ್ತಿ ಬೆಂಬಲಕ್ಕೆ ನಿಂತರು. “ಇದು (ರನೌಟ್) ಆಟದ ಭಾಗವಾಗಿದೆ, ನಾವೇನೋ ಹೊಸದನ್ನು ಮಾಡಿದ್ದೇವೆ ಎಂದು ನನಗನಿಸುವುದಿಲ್ಲ. ಇದು ನಿಮ್ಮ ಅರಿವನ್ನು ತೋರಿಸುತ್ತದೆ, ಬ್ಯಾಟರ್‌ಗಳು ಏನು ಮಾಡುತ್ತಿದ್ದರು?. ನಾನು ನನ್ನ ಆಟಗಾರರಿಗೆ ಬೆಂಬಲ ನೀಡುತ್ತೇನೆ, ಅವಳು ನಿಯಮಗಳ ಹೊರತಾಗಿ ಏನನ್ನೂ ಮಾಡಿಲ್ಲ” ಎಂದರು.

“ವೆಲ್ ಡನ್ ದೀಪ್ತಿ ಶರ್ಮಾ. ನೀವು ಸರಿಯಾಗಿ ಮಾಡಿದ್ದೀರಿ. ಯಾರೂ ನಿಮಗೆ ಬೇರೆ ರೀತಿಯಲ್ಲಿ ಹೇಳಲು ಬರಲು ಬಿಡಬೇಡಿ. ಟೀಮ್ ಇಂಡಿಯಾದ ಇಂಗ್ಲಿಷ್ ನೆಲದಲ್ಲಿ ಕ್ಲೀನ್ ಸ್ವೀಪ್‌ ನ ರುಚಿ ಸಿಹಿಯಾಗಿದೆ. ಅದ್ಭುತವಾಗಿದೆ” ಎಂದು ಮಾಜಿ ಕ್ರಿಕೆಟರ್‌, ಕಮೆಂಟೇಟರ್ ಆಕಾಶ್ ಚೋಪ್ರಾ ಹೇಳಿಕೊಂಡಿದ್ದಾರೆ.

ಪಾಕಿಸ್ತಾನಿ ಪತ್ರಕರ್ತ ಮಝೆರ್ ಅರ್ಷದ್ ಅವರು “ಇದು ಕಾನೂನುಬದ್ಧ ಔಟ್. ಇಲ್ಲಿ ಆಟದ ಮನೋಭಾವಕ್ಕೆ ವಿರುದ್ಧವಾದ ಏಕೈಕ ವಿಷಯವೆಂದರೆ ಬ್ಯಾಟರ್ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿರುವುದು. ವೆಲ್ ಡನ್ ದೀಪ್ತಿ ಶರ್ಮಾ.” ಎಂದು ಬರೆದುಕೊಂಡಿದ್ದಾರೆ.

ಮಾಜಿ ಆಟಗಾರ ವೀರೆಂದ್ರ ಸೆಹವಾಗ್ ಅವರು ಇಂಗ್ಲೆಂಡ್ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದಿದ್ದು, ‘ಬಡಪಾಯಿಯಂತೆ ಸೋತ ಕೆಲವು ಇಂಗ್ಲೀಷ್ ಹುಡುಗರನ್ನು ನೋಡಲು ತಮಾಷೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹೊಸ ಎಂಸಿಸಿ ನಿಯಮಗಳನ್ನು ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next