ಬೆಂಗಳೂರು: ದಿನಕ್ಕೊಂದು ಭ್ರಷ್ಟಾಚಾರ ಮಾಡಿ, ಬ್ಯಾಂಕ್‌ಗಳನ್ನು ಲೂಟಿ ಮಾಡಿ ಓಡಿ ಹೋಗು ಎನ್ನುವುದು ನರೇಂದ್ರ ಮೋದಿ ಸರ್ಕಾರದ ಹೊಸ ಘೋಷ ವಾಕ್ಯ ಎಂದು ಎಐಸಿಸಿ ಮಾಧ್ಯಮ ಘಟಕದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಗಳಲ್ಲಿ ಸಾರ್ವಜನಿಕರು ಇಟ್ಟ ಹಣವನ್ನು
ಬಂಡವಾಳ ಶಾಹಿಗಳು ಲೂಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಸಹಕರಿಸಿದ ಆರೋಪ ಎದುರಿಸುತ್ತಿದ್ದಾರೆ. ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಆಘಾತಕಾರಿ ಮಟ್ಟಕ್ಕೆ ಇಳಿಯುತ್ತಿದ್ದರೂ ಪ್ರಧಾನ ಮಂತ್ರಿ ಮೌನ ವಹಿಸಿದ್ದಾರೆ ಎಂದು ದೂರಿದರು.
ದೇಶದಲ್ಲಿ ಮೋದಿ ಅಧಿಕಾರಾವಧಿಯಲ್ಲಿಯೇ ಬ್ಯಾಂಕ್ ಆಪ್ ಬರೋಡ,ಫೋರೆಕ್ಸ್ ಹಗರಣ, ನೀರವ್ ಮೋದಿ, ಲಲಿತ್ ಮೋದಿ, ಕನಿಷ್ಕಾ ಗೋಲ್ಡ್ ಹಗರಣ ಸೇರಿ 61,036 ಕೋಟಿ ರೂ. ಸಾರ್ವಜನಿಕರ ಹಣ ಲೂಟಿಯಾಗಿದೆ. ಸಾವಿರಾರು ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಹಾರಿ ಹೋಗುವವರ ಮೇಲೆ ಯಾವುದೇ ನಿಯಂತ್ರಣ ಹೇರಲು ಆರ್‌ಬಿಐ ವಿಫಲವಾಗಿದೆ. ಇದರಿಂದ ಬ್ಯಾಂಕ್‌ಗಳ ಮೇಲೆ ಸಾರ್ವಜನಿಕರ ವಿಶ್ವಾಸ ಕಡಿಮೆಯಾಗುತ್ತಿದೆ. ಇದನ್ನು ನೋಡಿದರೆ, ಲೂಟಿಕೋರರನ್ನು ಪ್ರಧಾನಿಯೇ ಕ್ಷಿಸುತ್ತಿದ್ದಾರೆಂಬ ಅನುಮಾನ ಕಾಡುತ್ತಿದೆ ಎಂದರು.
ನ್ಯಾಯಾಂಗ ತನಿಖೆಯಾಗಲಿ
ಸಿಬಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಪರೀಕ್ಷಾ ಮಾಫಿಯಾ ಕೈವಾಡವಿದೆ. ಇದರಲ್ಲಿ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಇದರ ಜವಾಬ್ದಾರಿ ಹೊರಬೇಕು. ಈ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಸುರ್ಜೆವಾಲಾ ಆಗ್ರಹಿಸಿದರು.
ಕೇಂದ್ರ ಸರ್ಕಾರ ದೇಶದ ಜನತೆಯ ವಿಶ್ವಾಸವನ್ನು ಕಳೆದು ಕೊಂಡಿದ್ದು, ಲೋಕಸಭೆಯಲ್ಲಿಯೂ ವಿಶ್ವಾಸ ಕಳೆದುಕೊಂಡಿದ್ದು, ಪ್ರತಿಪಕ್ಷಗಳು ಮಂಡಿಸುತ್ತಿರುವ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ದೊರೆಯದಂತೆ ಸಂಸತ್ತಿನಲ್ಲಿ ಗದ್ದಲ ಎಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ದೇಶದ ಇತಿಹಾಸದಲ್ಲಿ ಆಡಳಿತ ಪಕ್ಷವೇ ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿ ಕಲಾಪ ನಡೆಯದಂತೆ ನೋಡಿಕೊಳ್ಳುತ್ತಿರುವುದು ಇದೇ ಮೊದಲು. ಎನ್‌ಡಿಎ ಅಂಗ ಪಕ್ಷಗಳಾಗಿರುವ ಟಿಡಿಪಿ, ಬಿಜೆಡಿ, ಶಿವಸೇನೆ ಬಿಜೆಪಿಯಿಂದ ದೂರ ಸರಿಯುತ್ತಿವೆ. ಹೀಗಾಗಿ ಬಿಜೆಪಿಗೆ ಆತಂಕ ಶುರುವಾಗಿದೆ ಎಂದು ಹೇಳಿದರು.