Advertisement

ವದಂತಿ ಉತ್ಪಾದಿಸೋ ಕಾರ್ಖಾನೆ ಸಕ್ರಿಯ

08:15 AM Jan 31, 2018 | |

ಬೆಂಗಳೂರು: ಅಸಾದುದ್ದೀನ್‌ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಜತೆ ಹೊಂದಾಣಿಕೆ ಕುರಿತು ಬಿಜೆಪಿ ಚರ್ಚೆ ನಡೆಯುತ್ತಿದೆ ಎಂಬ ಸುದ್ದಿಯನ್ನು ಅಲ್ಲಗಳೆದಿರುವ ಬಿಜೆಪಿ ವಕ್ತಾರ ಎಸ್‌.ಸುರೇಶ್‌ ಕುಮಾರ್‌, ಇತ್ತೀಚೆಗೆ ರಾಜ್ಯದಲ್ಲಿ ವದಂತಿ ಉತ್ಪಾದಿಸುವ ಕಾರ್ಖಾನೆ ಬಹಳ ಸಕ್ರಿಯವಾಗಿದ್ದು, ಈ ಸುದ್ದಿ ಆ ಕಾರ್ಖಾನೆಯ ಉತ್ಪನ್ನ ಎಂದು ಹೇಳಿದ್ದಾರೆ. 

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಂದಾಣಿಕೆ ಕುರಿತಂತೆ ಓವೈಸಿ ಜತೆ ಮಾತುಕತೆ ಆಗಿಲ್ಲ,
ಮಾತುಕತೆ ಆಡುವ ಇಚ್ಛೆಯೂ ನಮಗಿಲ್ಲ. ಹೀಗಿರುವಾಗ ಕೆಲವು ವಿಜ್ಞಾನಿಗಳು ತಾವೇ ಸಂಶೋಧಿಸಿದ ಈ ವಿಚಾರದ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಇದು ನೂರಕ್ಕೆ ನೂರು ಸುಳ್ಳು ಸುದ್ದಿ ಎಂದರು. ಬಿಜೆಪಿ ಚುನಾವಣಾ ಸ್ಟಾರ್‌ ಪ್ರಚಾರಕರ ಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ ಎಂಬ ವರದಿಗಳನ್ನೂ ನಿರಾಕರಿಸಿದ ಅವರು, ಇನ್ನೂ ಸ್ಟಾರ್‌ ಪ್ರಚಾರಕರ ಪಟ್ಟಿಯೇ ಬಿಡುಗಡೆಯಾಗಿಲ್ಲ. ಅಸಮಾಧಾನದ ಮಾತೆಲ್ಲಿ ಬಂತು ಎಂದು ಪ್ರಶ್ನಿಸಿದರು.

ಯಾರೋ ದುರುದ್ದೇಶವಿಟ್ಟುಕೊಂಡು ಇಂತಹ ವದಂತಿಗಳನ್ನು ಸೃಷ್ಟಿಸಿದ್ದಾರೆ. ಬಿಜೆಪಿಯಲ್ಲಿ ಗೊಂದಲ ನಿರ್ಮಾಣ ಅಥವಾ ಪಕ್ಷದ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶ ಅವರದ್ದಿರಬಹುದು ಎಂದರು. ಗೃಹ ಸಚಿವ ರಾಮಲಿಂಗಾರೆಡ್ಡಿ ಅವರೇ ಓವೈಸಿ ಮತ್ತು ಬಿಜೆಪಿ ಮಧ್ಯೆ ಮಾತುಕತೆಯಾಗಿದ್ದು ನಿಜ ಎಂದು ಹೇಳಿದ್ದಾರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಗೃಹ  ಸಚಿವರ ಬಗ್ಗೆ ನನಗೆ ಅನುಕಂಪವಿದೆ. ಗೌರಿ ಲಂಕೇಶ್‌ ಹತ್ಯೆಯಾದ ಕೆಲವೇ ದಿನಗಳ ನಂತರ ಹತ್ಯೆ ಮಾಡಿದವರು ಸಿಕ್ಕಿದ್ದಾರೆ. ಎಲ್ಲ ಮಾಹಿತಿ ಇದೆ. ಶೀಘ್ರದಲ್ಲೇ ಬಂಧನಕ್ಕೆ ಒಳಪಡಿಸುತ್ತೇವೆ ಎಂದಿದ್ದರು. ಪರಿಸ್ಥಿತಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಇದುವರೆಗೂ ಹಂತಕರ ಸುಳಿವು ಸಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.

ದಾಖಲೆ ಇದ್ದರೆ ಬಿಡುಗಡೆ ಮಾಡಲಿ 
ತುಮಕೂರು: ಓವೈಸಿ ಜತೆ ರಾಜ್ಯದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಬಗ್ಗೆ ಗೃಹ ಸಚಿವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಸವಾಲು ಹಾಕಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರಿಗೆ ತಾಕತ್ತಿದ್ದರೆ ದಾಖಲೆ ಬಿಡುಗಡೆ ಮಾಡಲಿ, ಆಗ ಮಾತ್ರ ಅವರು ಯೋಗ್ಯರು ಎಂದು ಹೇಳಿದರು.  ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ವರು ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಾರೆ. ವೀರಶೈವ ಲಿಂಗಾಯತ, ಮಹದಾಯಿ ವಿವಾದ ಸೃಷ್ಟಿಸಿದರು, ಒಂದೊಂದು ಕಾಲದಲ್ಲಿ ಒಂದೊಂದು ವಿವಾದ ಹುಟ್ಟು ಹಾಕುವುದು ಇವರ ಕೆಲಸ ಎಂದರು. ಕಾಂಗ್ರೆಸ್‌ನವರು ಈಗ ಧರ್ಮ ಧರ್ಮದ ನಡುವೆ ವಿವಾದ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಮುಸಲ್ಮಾನರು
ಯಾರ ಸ್ವತ್ತೂ ಅಲ್ಲ ಎಂದು ಹೇಳಿದರು. ಸಿ.ಟಿ. ರವಿಗೆ ಕೊಲೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ನನಗೂ ಕೊಲೆ ಬೆದರಿಕೆ ಬಂದಿತ್ತು. ಮುಖ್ಯಮಂತ್ರಿ, ಗೃಹ ಸಚಿವರ ಗಮನಕ್ಕೆ ತಂದಿದ್ದೆ. ಅವರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರು. 

ಯಡಿಯೂರಪ್ಪ ನಿರಾಕರಣೆ
ದಾವಣಗೆರೆ: ಯಾವುದೇ ಅಲ್ಪಸಂಖ್ಯಾತರ ಸಂಘಟನೆಯೊಂದಿಗೆ ಒಳ ಅಥವಾ ಹೊರ ಒಪ್ಪಂದವಾಗಲಿ ಇಲ್ಲವೇ ಇಲ್ಲ ಎನ್ನುವ ಮೂಲಕ ಬಿಜೆಪಿ ಓವೈಸಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬುದನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಮಂಗಳವಾರ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓವೈಸಿ ನೇತೃತ್ವದ ಪಕ್ಷದೊಂದಿಗೆ ಯಾವುದೇ ರೀತಿಯ ಒಳ ಒಪ್ಪಂದ ಇಲ್ಲವೇ ಇಲ್ಲ ಎಂಬುದಾಗಿ ರಾಷ್ಟ್ರೀಯ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷನಾಗಿ ನಾನು ಸಹ ಅದನ್ನೇ ಸ್ಪಷ್ಟಪಡಿಸುತ್ತಿದ್ದೇನೆ ಎಂದರು. 

Advertisement

ಒಳ ಒಪ್ಪಂದ ಹೊಸ ವಿಚಾರವೇನಲ್ಲ: ರೆಡ್ಡಿ
ಬೆಂಗಳೂರು: ಎಸ್‌ಡಿಪಿಐ ಮತ್ತು ಪಿಎಫ್ಐ ಜೊತೆಗೆ ಕಾಂಗ್ರೆಸ್‌ ಪಕ್ಷ ಹೊಂದಾಣಿಕೆ ಮಾಡಿಕೊಂಡ ಬಗ್ಗೆ ಆಧಾರರಹಿತ  ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ಮುಖಂಡರು ದಾಖಲೆಗಳಿದ್ದರೆ ರಾಜ್ಯದ ಜನತೆ ಮುಂದಿಡಲಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಡಿಪಿಐ ಮತ್ತು ಪಿಎಫ್ಐ ಜೊತೆ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆಯವರ ಆರೋಪಗಳನ್ನು ತಳ್ಳಿ ಹಾಕುತ್ತ, ಆಧಾರರಹಿತ ಆರೋಪಗಳನ್ನು ಮಾಡುವುದು ಬಿಜೆಪಿಯವರ
ಜಾಯಮಾನ ಎಂದರು. ಬಿಜೆಪಿ ಮತ್ತು ಓವೈಸಿ ಪರಸ್ಪರ ಒಳ ಒಪ್ಪಂದ ಮಾಡಿಕೊಂಡಿದ್ದು ಹೊಸ ವಿಚಾರವೇನಲ್ಲ. ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶ ಚುನಾವಣೆಗಳಲ್ಲಿ ಅದು ಸ್ಪಷ್ಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸವಣೂರು ಗ್ರಾಮ ಪಂಚಾಯಿತಿಯಲ್ಲಿ ಪಿಎಫ್ಐ ಜೊತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಸದಸ್ಯ ಉಪಾಧ್ಯಕ್ಷ ಆಗಿದ್ದು ನಮ್ಮ ಬಳಿ ದಾಖಲೆ ಇದೆ. ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವಲ್ಲಿ ನಿಸ್ಸೀಮರಾಗಿರುವ ಬಿಜೆಪಿಯವರು, ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಹಾಗೊಂದು ವೇಳೆ ಕಾಂಗ್ರೆಸ್‌ ಪಕ್ಷ ಹೊಂದಾಣಿಕೆ ಮಾಡಿಕೊಂಡಿದ್ದರೆ ದಾಖಲೆಗಳನ್ನು ಕೊಡಲಿ ಎಂದು ರಾಮಲಿಂಗಾರೆಡ್ಡಿ  ಬಿಜೆಪಿಯವರಿಗೆ ಸವಾಲು ಹಾಕಿದರು.

ರಾಜ್ಯದಲ್ಲಿ ಬಿಜೆಪಿ-ಎಐಎಂಐಎಂ ಪಕ್ಷ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಸಿಎಂ ಹಾಗೂ ಗೃಹ ಸಚಿವರು ಹೇಳುತ್ತಿದ್ದು ಈ ಬಗ್ಗೆ ಅಗತ್ಯ ದಾಖಲೆ ಬಿಡುಗಡೆ ಮಾಡ ಬೇಕು. ರಾಜಕೀಯವಾಗಿ ಎರಡು ವೈರುಧ್ಯ ಹೊಂದಿರುವ ಪಕ್ಷಗಳು ಒಳಒಪ್ಪಂದ ಮಾಡಿಕೊಂಡಿರುವ ಬಗ್ಗೆ ದಾಖಲೆಗಳಿದ್ದರೆ ಗೃಹಸಚಿವ ರಾಮಲಿಂಗಾರೆಡ್ಡಿ ಬಿಡುಗಡೆ ಮಾಡಲಿ.
 ●ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next