Advertisement

ಒತ್ತುವರಿ ಕಾಫಿ ತೋಟ ಗುತ್ತಿಗೆಗೆ ನಿಯಮ; ಎಕ್ರೆಗೆ 2 ಸಾವಿರ ರೂ. ನಿಗದಿ

10:58 PM Dec 19, 2022 | Team Udayavani |

ಬೆಳಗಾವಿ: ಮಲೆನಾಡು ಭಾಗದಲ್ಲಿ ಸರಕಾರಿ ಜಾಗದಲ್ಲಿರುವ ಕಾಫಿ ತೋಟ ಒತ್ತುವರಿಯನ್ನು ಸಕ್ರಮಗೊಳಿಸಿ ಗುತ್ತಿಗೆಗೆ ನೀಡಲು ರಾಜ್ಯ ಸರಕಾರ ನಿಯಮಾವಳಿ ಸಿದ್ಧಪಡಿಸಿದೆ. ಒಂದು ಎಕ್ರೆಗೆ ವರ್ಷಕ್ಕೆ ಎರಡು ಸಾವಿರ ರೂ.ಯಂತೆ 30 ವರ್ಷಗಳ ಲೀಸ್‌ ಮೊತ್ತವನ್ನು ಮೊದಲೇ ಕಟ್ಟಿಸಿಕೊಳ್ಳಲು ನಿರ್ಧರಿಸಲಾಗಿದೆ.

Advertisement

ಸುಮಾರು ಒಂದು ಲಕ್ಷ ಎಕ್ರೆ ಸಕ್ರಮವಾಗಲಿದ್ದು, ರಾಜ್ಯದ ಬೊಕ್ಕಸಕ್ಕೆ 400 ಕೋಟಿ ರೂ.ವರೆಗೆ ಆದಾಯವೂ ಸಂಗ್ರಹವಾಗಲಿದೆ.

ಇಪ್ಪತ್ತು ಎಕ್ರೆವರೆಗಿನ ಒತ್ತುವರಿ ಸಕ್ರಮಕ್ಕೆ ತೀರ್ಮಾನಿಸಿದ್ದು, 1ರಿಂದ 5 ಎಕರೆ ಒತ್ತುವರಿ ಪ್ರಮಾಣವೇ ಶೇ.80ರಷ್ಟು ಇದೆ. ಸಣ್ಣ ಮತ್ತು ಅತಿ ಸಣ್ಣ ರೈತರೇ ಹೆಚ್ಚಾಗಿದ್ದಾರೆ ಎಂದು ಹೇಳಲಾಗಿದೆ. ರೈತರಿಗೆ ಕಾಫಿ ತೋಟ ಗುತ್ತಿಗೆ ನೀಡುವ ಸಂಬಂಧ ಇದೇ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ.

ಪ್ರಮಾಣಪತ್ರ
ಕಾಫಿ ತೋಟ ಒತ್ತುವರಿ ಸಕ್ರಮಕ್ಕೆ ಪ್ರತ್ಯೇಕ ನಮೂನೆ ಸಿದ್ಧಪಡಿಸಲಾಗುತ್ತಿದ್ದು, ಮೊದಲು ಒತ್ತುವರಿ ಮಾಡಿಕೊಂಡಿರುವ ರೈತ ಪ್ರಮಾಣಪತ್ರ ನೀಡಬೇಕು. ಎಷ್ಟು ಎಕ್ರೆ ಒತ್ತುವರಿ ಎಂಬುದನ್ನು ತಿಳಿಸಬೇಕು. ಅನಂತರ ಆ ಜಮೀನು ಗುತ್ತಿಗೆ ಆಧಾರದಲ್ಲಿ ಪಡೆಯಲು ಅರ್ಜಿ ಸಲ್ಲಿಸಬೇಕು. ಸರಕಾರ ನಿಗದಿಪಡಿಸುವ ಮೊತ್ತವನ್ನು ಒಮ್ಮೆಲೇ ಪಾವತಿಸಬೇಕು. 30 ವರ್ಷಗಳಿಗೆ ಮಾತ್ರ ಸದ್ಯಕ್ಕೆ ಗುತ್ತಿಗೆಗೆ ನೀಡಲು ತೀರ್ಮಾನಿಸಲಾಗಿದ್ದು, ಇನಂತರ ಆಗಿನ ಪರಿಸ್ಥಿತಿ ನೋಡಿಕೊಂಡು ಮುಂದುವರಿಯಲು ನಿರ್ಧರಿಸಲಾಗಿದೆ.

ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಈಗಾಗಲೇ ಒಂದು ಲಕ್ಷ ಎಕ್ರೆ ಕಾಫಿ ತೋಟ ಒತ್ತುವರಿ ಗುರುತಿಸಲಾಗಿದೆ. ಕಾಫಿ ತೋಟದ ಮಧ್ಯೆ ಸರಕಾರಿ ಜಾಗ ಇದ್ದು, ಅಲ್ಲಿ ಒತ್ತುವರಿ ಮಾಡಿ ತೋಟ ಮಾಡಲಾಗಿದೆ.
ಮಲೆನಾಡು ಭಾಗದ ಜನಪ್ರತಿನಿಧಿಗಳ ಜತೆ ಈ ಬಗ್ಗೆ ಹಲವು ಸುತ್ತಿನ ಸಭೆ ನಡೆದು ನಿಯಮಾವಳಿ ರೂಪುರೇಷೆ ಚರ್ಚಿಸಲಾಗಿದ್ದು, ಅನಂತರವೇ ಮಸೂದೆ ಮಂಡಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

Advertisement

ಸೇಂದಿವನವೂ ಕೃಷಿಗೆ ಬಳಕೆ
ಈ ನಡುವೆ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿರುವ ಸೇಂದಿವನ ಜಾಗ ರೈತರಿಗೆ ಉಳುಮೆ ಮಾಡಲು ಸಾಗುವಳಿ ಚೀಟಿ ನೀಡಲು ಸರಕಾರ ಮುಂದಾಗಿದ್ದು, ಈ ವಿಚಾರವೂ ಭೂ ಕಂದಾಯ ತಿದ್ದುಪಡಿ ಮಸೂದೆಯಲ್ಲಿ ಸೇರಿದೆ.

ಈ ಹಿಂದೆ ಸೇಂದಿವನಎಂದು ಗುರುತಿಸಲಾಗಿದ್ದ ಜಾಗ ಸರಕಾರದ ಸುಪರ್ದಿಯಲ್ಲಿದ್ದು, ಅಲ್ಲಿ ಕೃಷಿ ಚುಟುವಟಿಕೆ ನಡೆಸುತ್ತಿರುವ ರೈತರಿಗೆ ಶಾಶ್ವತವಾಗಿ ಸಾಗುವಳಿಚೀಟಿ ನೀಡುವುದು ಸರಕಾರದ ಉದ್ದೇಶವಾಗಿದಸೆ ಎಂದು ಹೇಳಲಾಗಿದೆ.

ಮಲೆನಾಡು, ಕರಾವಳಿ ಭಾಗದಲ್ಲಿ 50 ಸಾವಿರ ಎಕ್ರೆಗೂ ಹೆಚ್ಚು ಸೇಂದಿವನದ ಜಾಗ ಇದೆ. ಅಲ್ಲಿ ರೈತರು ಕೃಷಿ ಚಟುವಟಿಕೆ ಮಾಡುತ್ತಿದ್ದು, ಈಗ ಆ ಜಾಗವನ್ನು ರೈತರಿಗೆ ಬಿಟ್ಟುಕೊಟ್ಟು ಬಗರ್‌ಹುಕುಂ ಅಡಿ ಸಾಗುವಳಿ ಚೀಟಿ ನೀಡಲು ನಿಯಮಾವಳಿ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಾಫಿ ತೋಟ ಒತ್ತುವರಿ ಸಕ್ರಮಗೊಳಿಸಿ ಗುತ್ತಿಗೆಗೆ ನೀಡುವುದರಿಂದ ಸುಮಾರು 40ರಿಂದ 50 ಸಾವಿರ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಈ ಭಾಗದ ರೈತರ ಮನವಿ ಮೇರೆಗೆ ಸರಕಾರ ಇದಕ್ಕೆ ಮುಂದಾಗಿದೆ. ಗುತ್ತಿಗೆ ನೀಡುವುದರಿಂದ ಸರಕಾರಕ್ಕೂ ಆದಾಯ ಸಿಗಲಿದೆ.
– ಆರ್‌.ಅಶೋಕ್‌, ಕಂದಾಯ ಸಚಿವ

-ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next