ಹೊಸದಿಲ್ಲಿ: ಕೇಂದ್ರ ಎನ್ ಡಿಎ ಸರಕಾರವು ”ಯುಪಿಎಯ 10 ವರ್ಷಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತದದ ತುಲನಾತ್ಮಕ ಶ್ವೇತಪತ್ರ ಬಿಡುಗಡೆ ಮಾಡಿದೆ.ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಸಂಜೆ ಸಂಸತ್ತಿನಲ್ಲಿ ಶ್ವೇತಪತ್ರವನ್ನು ಮಂಡಿಸಿದರು. ”ಪಿತ್ರಾರ್ಜಿತವಾಗಿ ಪಡೆದ ಆರೋಗ್ಯಕರ ಆರ್ಥಿಕತೆಯನ್ನು ಯುಪಿಎ ಸರಕಾರವು 10 ವರ್ಷಗಳಲ್ಲಿ ನಿಷ್ಕ್ರಿಯಗೊಳಿಸಿತ್ತು” ಎಂದು ಆರೋಪಿಸಿದೆ.
ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ವಿರುದ್ಧದ ಸಮರದಲ್ಲಿ, ಕೇಂದ್ರ ಸರಕಾರವು 2014 ರಲ್ಲಿ ಅಧಿಕಾರದಿಂದ ಹೊರಬಂದ ಯುಪಿಎ ಸರಕಾರವು “ಸಾರ್ವಜನಿಕ ಹಣಕಾಸಿನ ದುರ್ಬಳಕೆ ಮತ್ತು ದೂರದೃಷ್ಟಿಯ ನಿರ್ವಹಣೆ ಮತ್ತು ಸ್ಥೂಲ ಆರ್ಥಿಕ ಅಡಿಪಾಯ ದುರ್ಬಲಗೊಳಿಸಿದೆ ಎಂದು ಆರೋಪಿಸಿದೆ.
ರಾಜ್ಯಸಭಾ ಅಧಿಕಾರಾವಧಿ ಮುಗಿಸಿದ ದಿನ ಡಾ.ಮನಮೋಹನ್ ಸಿಂಗ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸರಕಾರ, ”ಆರ್ಥಿಕ ಉದಾರೀಕರಣವನ್ನು ತಂದ ತತ್ವಗಳನ್ನು ನಮ್ಮ ಸರಕಾರ ಕೈಬಿಟ್ಟಿತು. ಆರ್ಥಿಕ ದುರುಪಯೋಗ, ಆರ್ಥಿಕ ಅಶಿಸ್ತು ಇತ್ತು ಮತ್ತು ವ್ಯಾಪಕ ಭ್ರಷ್ಟಾಚಾರ ನಡೆದಿತ್ತು ಎಂದು ಬಾಣಗಳ ಮಳೆಗರೆದಿದೆ.
2004 ರಲ್ಲಿ, ಯುಪಿಎ ಸರಕಾರವು ತನ್ನ ಅವಧಿಯನ್ನು ಪ್ರಾರಂಭಿಸಿದಾಗ, ಆರ್ಥಿಕತೆಯು 8 ಪ್ರತಿಶತದಷ್ಟು ಬೆಳವಣಿಗೆಯನ್ನು ಹೊಂದಿತ್ತು (ಉದ್ಯಮ ಮತ್ತು ಸೇವಾ ವಲಯದ ಬೆಳವಣಿಗೆಯು ಪ್ರತಿ ಶೇಕಡಾ 7 ಕ್ಕಿಂತ ಹೆಚ್ಚು ಮತ್ತು FY04 ರಲ್ಲಿ 9 ಶೇಕಡಾಕ್ಕಿಂತ ಹೆಚ್ಚಿನ ಕೃಷಿ ಕ್ಷೇತ್ರದ ಬೆಳವಣಿಗೆಯೊಂದಿಗೆ) ಸೌಮ್ಯವಾದ ವಿಶ್ವ ಆರ್ಥಿಕ ವಾತಾವರಣ ಇತ್ತು ಎಂದು ಹೇಳಲಾಗಿದೆ.
ಸುಧಾರಣೆಗಳ ಮೂಲಕ ಲಾಭಗಳನ್ನು ಕ್ರೋಢೀಕರಿಸುವ ಬದಲು, ಯುಪಿಎ “ಎನ್‌ಡಿಎ ಸರ್ಕಾರದ ಸುಧಾರಣೆಗಳ ಮಂದಗತಿಯ ಪರಿಣಾಮಗಳು ಮತ್ತು ಅನುಕೂಲಕರ ಜಾಗತಿಕ ಪರಿಸ್ಥಿತಿಗಳಿಂದ” ಉಂಟಾದ ಹೆಚ್ಚಿನ ಬೆಳವಣಿಗೆಗೆ ಮಾತ್ರ ಕ್ರೆಡಿಟ್ ತೆಗೆದುಕೊಂಡಿತು. ದೊಡ್ಡ ವಿತ್ತೀಯ ಕೊರತೆಯನ್ನು ಸೃಷ್ಟಿಸಿದ ಯುಪಿಎ ಸರಕಾರವು ಹೊರಗಿನಿಂದ ಹೆಚ್ಚು ಸಾಲವನ್ನು ತೆಗೆದುಕೊಂಡಿತು ಆದರೆ ಹಣವನ್ನು ಅನುತ್ಪಾದಕ ರೀತಿಯಲ್ಲಿ ಬಳಸಿತು. ಮೂಲಸೌಕರ್ಯವನ್ನು ನಿರ್ಲಕ್ಷಿಸಲಾಯಿತು. ಸಾಮಾಜಿಕ ವಲಯದ ಯೋಜನೆಗಳು ಖರ್ಚು ಮಾಡದ ಹಣದಿಂದ ತುಂಬಿ ಹೋದವು ಎಂದು ಶ್ವೇತಪತ್ರದಲ್ಲಿ ಹೇಳಲಾಗಿದೆ.
2004 ಮತ್ತು 2014 ರ ನಡುವಿನ ಸರಾಸರಿ ವಾರ್ಷಿಕ ಹಣದುಬ್ಬರ ದರವು ಸುಮಾರು 8.2% ರಷ್ಟಿತ್ತು ಮತ್ತು ಹೆಚ್ಚಿನ ಹಣದುಬ್ಬರವನ್ನು ತಡೆಯಲು ಯುಪಿಎ ಸರಕಾರ ಏನೂ ಮಾಡಲಿಲ್ಲ ಎಂದು ಆರೋಪಿಸಲಾಗಿದೆ.