ಸಿರುಗುಪ್ಪ: ನಗರದ ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ 2 ಹಳೆಯ ಕಟ್ಟಡಗಳು ಯಾವಾಗ ಬೀಳುತ್ತವೋ ಎನ್ನುವಷ್ಟರ ಮಟ್ಟಿಗೆಶಿಥಿಲಾವಸ್ಥೆ ತಲುಪಿದ್ದು, ಶಿಥಿಲಾವಸ್ಥೆ ತಲುಪಿರುವಕಟ್ಟಡಗಳನ್ನು ಸರ್ಕಾರ ತೆರವುಗೊಳಿಸದಿದ್ದರೆ ಆಸ್ಪತ್ರೆಗೆಬರುವ ಸಾರ್ವಜನಿಕರ ಮೇಲೆ ಬಿದ್ದು ಅನಾಹುತ ಆಗುವ ಸಂಭವವಿದೆ!
ಸುಮಾರು 50 ವರ್ಷಗಳ ಹಿಂದೆ ಕಟ್ಟಲಾಗಿರುವ ಒಂದು ಕಟ್ಟಡದಲ್ಲಿ ರೋಗಿಗಳನ್ನು ವೈದ್ಯರು ಪರೀಕ್ಷಿಸುತ್ತಿದ್ದರು. ಇನ್ನೊಂದು ಕಟ್ಟಡದಲ್ಲಿ ಒಳರೋಗಿಗಳನ್ನು ಹಾಗೂ ಹೆರಿಗೆಯಾದ ಮಹಿಳೆಯರನ್ನು ಆರೈಕೆ ಮಾಡಲಾಗುತ್ತಿತ್ತು. ಈ ಕಟ್ಟಡಗಳು ಶಿಥಿಲಗೊಳ್ಳುತ್ತಿದ್ದಂತೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಶಾಸಕರಾಗಿದ್ದ ಎಂ. ಶಂಕರರೆಡ್ಡಿ1989ರಲ್ಲಿ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. 1996ರಲ್ಲಿ ಆಸ್ಪತ್ರೆಯ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸಚಿವರಾಗಿದ್ದ ಎಂ.ಪಿ.ಪ್ರಕಾಶ್‌ರವರು ನೂತನ ಆಸ್ಪತ್ರೆಯ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದರು. ನಂತರ ಆಯುಷ್ ಆಸ್ಪತ್ರೆಯು ಹಳೆ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ರಾಜೀವ್‌ಗಾಂಧಿ ನಗರದಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣವಾದ ನಂತರ ಹಳೇ ಕಟ್ಟಡದಿಂದ ಆಯುಷ್ ಆಸ್ಪತ್ರೆ ಸ್ಥಳಾಂತರಗೊಂಡಿತು. ಆದರೆ ಒಳ ರೋಗಿಗಳನ್ನು ದಾಖಲಿಸಿಕೊಂಡು ಆರೈಕೆ ಮಾಡುತ್ತಿದ್ದ ಕಟ್ಟಡದಲ್ಲಿ ಮಾತ್ರ ಯಾರು ವಾಸಮಾಡುತ್ತಿರಲಿಲ್ಲ. ಇದರಿಂದಾಗಿನಿರ್ವಹಣೆಯಿಲ್ಲದೆ ಬಿಸಿಲು, ಮಳೆಗೆ ಈ ಕಟ್ಟಡಗಳು ಈಗ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಯಾವಾಗ ಬೀಳುತ್ತವೋ ಎನ್ನುವ ಆತಂಕ ಆಸ್ಪತ್ರೆಯ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಕಾಡುತ್ತಿದೆ.
ಪ್ರತಿನಿತ್ಯ ಆಸ್ಪತ್ರೆಗೆ ಸಾವಿರಾರು ರೋಗಿಗಳು ಆರೋಗ್ಯ ತಪಾಸಣೆಗೆ, ಹೆರಿಗೆಗೆ ಬರುತ್ತಿದ್ದು, ಶಿಥಿಲ ಕಟ್ಟಡಗಳ ಮುಂದೆಯೇ ಹಾದುಹೋಗಬೇಕಾಗಿದೆ, ಒಂದು ಕಟ್ಟಡದ ಆವರಣದಲ್ಲಿ ಆಸ್ಪತ್ರೆಗೆ ಬಂದವರು ಕುಳಿತುಕೊಳ್ಳುವುದು, ಅಲ್ಲಿಯೇಊಟಮಾಡುವುದು, ವಿಶ್ರಾಂತಿ ಪಡೆಯುವುದು ಸಾಮಾನ್ಯವಾಗಿದೆ. ಸಾರ್ವಜನಿಕರು ಕುಳಿತಸಂದರ್ಭದಲ್ಲಿ ಕಟ್ಟಡ ಕುಸಿದು ಬಿದ್ದರೆಅನಾಹುತವಾಗುವ ಸಾಧ್ಯತೆಗಳಿವೆ. ಆದ್ದರಿಂದ ಈ ಎರಡೂ ಕಟ್ಟಡಗಳನ್ನು ತೆರವು ಮಾಡಬೇಕೆಂಬುದು ಸಾರ್ವಜನಿಕರ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಒತ್ತಾಯವಾಗಿದೆ. ಶಿಥಿಲಗೊಂಡಿರುವ ಕಟ್ಟಡಗಳನ್ನುತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಹಿರಿಯ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹತ್ತಾರು ಪತ್ರಗಳನ್ನು ಬರೆದಿದ್ದರೂ ಇಲ್ಲಿ ವರೆಗೆ ಕಟ್ಟಡಗಳನ್ನು ತೆರವುಗೊಳಿಸಲು ಯಾವುದೇ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಶಿಥಿಲಗೊಂಡ ಕಟ್ಟಡಗಳನ್ನು ತೆರವುಗೊಳಿಸದಿದ್ದರೆ ಅವು ಬಿದ್ದು ಅನಾಹುತ ನಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಸ್ಪತ್ರೆ ಅಧಿ ಕಾರಿಗಳು ಶಿಥಿಲ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಎಸ್. ರಫಿ, ಶೇಖರ್, ಎಂ.ವೀರೇಶ ಒತ್ತಾಯಿಸಿದ್ದಾರೆ.
ಆಸ್ಪತ್ರೆ ಆವರಣದಲ್ಲಿರುವ 2 ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳನ್ನು ಪ್ರಸ್ತುತ ಯಾವುದೇ ಉದ್ದೇಶಕ್ಕೆ ಉಪಯೋಗಿಸುತ್ತಿಲ್ಲ. ಸದರಿ ಕಟ್ಟಡಗಳನ್ನು ನೆಲಸಮ ಗೊಳಿಸಿದರೆ ಆಸ್ಪತ್ರೆ ಮುಂಭಾಗದಲ್ಲಿ ಪಾರ್ಕ್ ನಿರ್ಮಿಸಲು ಮತ್ತು ಸಾರ್ವಜನಿಕರು ಕುಳಿತುಕೊಳ್ಳಲು ಅನುಕೂಲವಾಗುತ್ತದೆ. ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
-ಡಾ| ದೇವರಾಜ್, 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ
-ಆರ್. ಬಸವರೆಡ್ಡಿ ಕರೂರು