Advertisement

ರುದ್ರೇಶ್‌ ಹತ್ಯೆ ಆರೋಪಿಗಳ ಮೇಲ್ಮನವಿ ವಜಾ

11:52 AM Mar 09, 2018 | Team Udayavani |

ಬೆಂಗಳೂರು: ಆರ್‌ಎಸ್‌ಎಸ್‌ ಮುಖಂಡ ರುದ್ರೇಶ್‌ ಹತ್ಯೆ ಪ್ರಕರಣದಲ್ಲಿ ಹೊರಿಸಲಾದ ಆರೋಪಗಳನ್ನು ಕೈಬಿಡಲು ನಿರಾಕರಿಸಿದ್ದ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಐವರು ಆರೋಪಿಗಳ ಕ್ರಿಮಿನಲ್‌ ಮೇಲ್ಮನವಿ ಅರ್ಜಿಗಳನ್ನು ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ.

Advertisement

ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಹಾಗೂ ಕೆ.ಎಸ್‌.ಮುದ್ಗಲ್‌ ಅವರಿದ್ದ ವಿಭಾಗೀಯ ಪೀಠ, ಎನ್‌ಐಎ ಕಾಯಿದೆ ಕಲಂ 21ರ ಅನ್ವಯ ವಿಶೇಷ ನ್ಯಾಯಾಲಯದ ಮಧ್ಯಂತರ ಆದೇಶಗಳನ್ನು ಪ್ರಶ್ನಿಸಲು ಅವಕಾಶವಿಲ್ಲ. ಹೀಗಾಗಿ ಅರ್ಜಿದಾರ ಆರೋಪಿಗಳ ಕ್ರಿಮಿನಲ್‌ ಮೇಲ್ಮನವಿ ಅರ್ಜಿಗಳು ಊರ್ಜಿತಗೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟು, ಆರೋಪಿಗಳು ಸಲ್ಲಿಸಿದ್ದ ಎರಡು ಪ್ರತ್ಯೇಕ  ಅರ್ಜಿಗಳನ್ನು ವಜಾಗೊಳಿಸಿತು. ಎನ್‌ಐಎ ವಿಶೇಷ ಅಭಿಯೋಜಕರಾಗಿ ಪಿ. ಪ್ರಸನ್ನಕುಮಾರ್‌ ವಾದ ಮಂಡಿಸಿದ್ದರು.

ರುದ್ರೇಶ್‌ ಹತ್ಯೆ ಆರೋಪಗಳಿಂದ ಮುಕ್ತಗೊಳಿಸಲು ನಿರಾಕರಿಸಿ ಎನ್‌ಐಎ ವಿಶೇಷ ನ್ಯಾಯಾಲಯ, ಜ.2ರಂದು ನೀಡಿದ್ದ ಆದೇಶ ಪ್ರಶ್ನಿಸಿ ಆರೋಪಿಗಳಾದ ಆಸೀಂ ಷರೀಫ್, ಇರ್ಫಾನ್‌ ಪಾಷ, ವಾಸೀಂ ಅಹಮದ್‌, ಮೊಹಮದ್‌ ಸಾದಿಕ್‌, ಮೊಹಮದ್‌ ಮುಜೀಬುಲ್ಲಾ ಹೈಕೋರ್ಟ್‌ ಮೊರೆಹೋಗಿದ್ದರು. ಕಮರ್ಷಿಯಲ್‌ ಸ್ಟ್ರೀಟ್‌ನ ಶಿವಾಜಿ ಸರ್ಕಲ್‌ನಲ್ಲಿ 2016 ಅಕ್ಟೋಬರ್‌ 16ರಂದು ನಡೆದ ಆರ್‌ಎಸ್‌ಎಸ್‌ ಮುಖಂಡ ರುದ್ರೇಶ್‌ ಭೀಕರ ಹತ್ಯೆ ನಡೆದಿತ್ತು.

ಈ ಸಂಬಂಧ ತನಿಖೆ ಪೂರ್ಣಗೊಳಿಸಿದ ಎನ್‌ಐಎ  ಪಿಎಫ್ಐ ಸಂಘಟನೆಯ ಸದಸ್ಯರಾದ ಇರ್ಫಾನ್‌ ಪಾಶಾ, ವಾಸೀಂ ಅಹಮದ್‌, ಮೊಹಮದ್‌ ಸಾದಿಕ್‌, ಮೊಹಮದ್‌ ಮುಜೀಬುಲ್ಲಾ ಹಾಗೂ ಆಸೀಂ ಷರೀಪ್‌ ವಿರುದ್ಧ ಐಪಿಸಿ ಕಲಂ 302,120 ಬಿ,  ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯಿದೆ ಕಲಂ 16(ಎ) 18,20 ಅನ್ವಯ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next