ಬೆಂಗಳೂರು: ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ತನಿಖೆ ಮತ್ತೆ ಮುಂದುವರಿಸುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ ) ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ಆದೇಶಿಸಿದೆ.
ಮಾರ್ಚ್ 3ರಂದು ಎನ್‌ಐಎ ತನಿಖೆ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಹಾಗೂ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿ, ಎನ್‌ಐಎ ತನಿಖೆ ಮುಂದುವರಿಸುವಂತೆ ಆದೇಶ ನೀಡಿತು.
ಏನಿದು ಪ್ರಕರಣ?: ರುದ್ರೇಶ್ ಹತ್ಯೆ ಪ್ರಕರಣ ಆರೋಪಿಗಳಾದ ಇರ್ಫಾನ್ ಪಾಶಾ ಹಾಗೂ ಆಸೀಂಖಾನ್ ಸೂಕ್ತ ಸಾಕ್ಷ್ಯಗಳಿಲ್ಲದಿದ್ದರೂ, ಕೇಂದ್ರ ಸರ್ಕಾರ ಸೂಚಿಸುವ ಮೊದಲೇ ಎನ್‌ಐಎ ತನಿಖಾದಳ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿದೆ. ಈ ನಿಟ್ಟಿನಲ್ಲಿ ಎನ್‌ಐಎ ತನಿಖೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯಪೀಠ, ಕೇಂದ್ರ ಸರ್ಕಾರ ತನಿಖೆಗೆ ನಿರ್ದೇಶಿಸುವ ಮೊದಲೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಎನ್‌ಐಎ ತಂಡ, ಆರೋಪಿಗಳ ವಿರುದ್ಧ ಎನ್‌ಐಎ 1980 ರ ಕಾಯ್ದೆಯನ್ವಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ಅಭಿಪ್ರಾಯ ಸಂಗ್ರಹಿಸುವಲ್ಲಿ ವಿಫಲವಾಗಿದೆ.
ಜತೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಎನ್‌ಐಎಗೆ ಬರೆದಿರುವ ಪತ್ರದಲ್ಲಿ, ಆರೋಪಿಗಳ ವಿರುದ್ಧ ಯಾವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬುದನ್ನು ಮಾತ್ರವೇ ಉಲ್ಲೇಖೀಸಿದ್ದಾರೆ. ಅಲ್ಲದೆ ಎನ್‌ಐಎ ಕಾಯ್ದೆಯಡಿಯಲ್ಲಿ ಬರುವ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಪಾಲ್ಗೊಂಡ ಬಗ್ಗೆ ಸೂಕ್ತ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಒದಗಿಸಿಲ್ಲ. ಎಂದು ಅಭಿಪ್ರಾಯ ಪಟ್ಟು ಎನ್‌ಐಎ ತನಿಖೆಯನ್ನು ರದ್ದುಗೊಳಿಸಿತ್ತು.
ಜತೆಗೆ ಈ ಪ್ರಕರಣದ ತನಿಖೆಯನ್ನು ತನಿಖೆಯನ್ನು ಕಾನೂನುಬಾಹಿರ ಚಟುವಟಿಕೆಗಳ 1967ರ ಕಾಯಿದೆ ಅನ್ವಯ ಕಮರ್ಷಿಯಲ್ ಠಾಣೆ ಪೊಲೀಸರೇ ನಡೆಸಿ ಎಂದು ಸೂಚಿಸಿತ್ತು. ಪ್ರಕರಣದ ಆರೋಪಿಗಳು, ಕೋಮು ಸಂಘಟನೆಯೊಂದಕ್ಕೆ ಸೇರಿದ್ದು, ಈ ಘಟನೆ ಅತ್ಯಂತ ಸೂಕ್ಷ್ಮತೆ ಪಡೆದುಕೊಂಡಿತ್ತು.
ಇಂತಹ ಪ್ರಕರಣಗಳಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಎನ್‌ಐಎಗೆ ಅಧಿಕಾರವಿದೆ. ಎನ್‌ಐಎ ತನಿಖೆಗೆ ನಿರ್ದೇಶಿಸುವ ಅಧಿಕಾರವಿದೆ. ಹೀಗಾಗಿಯೇ ರುದ್ರೇಶ್ ಪ್ರಕರಣದ ತನಿಖೆಯನ್ನು ಎನ್‌ಐಎ ಮುಂದುವರಿಸಿತ್ತು. ಹೀಗಾಗಿ ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿ, ಪುನ: ಎನ್‌ಐಎ ತನಿಖೆ ಮುಂದುವರಿಸಲು ಅವಕಾಶ ನೀಡುವಂತೆ ಕೇಂದ್ರಸರ್ಕಾರ ಮನವಿ ಮಾಡಿತ್ತು.