ಸೊಲ್ಲಾಪುರ: ಅಕ್ಕಲಕೋಟ ತಾಲೂಕಿನ ಸುಕ್ಷೇತ್ರ ನಾಗಣಸೂರ ಗ್ರಾಮದ ಲಿಂಗೈಕ್ಯ ಬಸವಲಿಂಗ ಮಹಾ ಸ್ವಾಮೀಜಿಗಳ 89ನೇ ಪುಣ್ಯ ಮಹಾ ಗಣಾರಾಧನೆ ಉತ್ಸವ ಅಂಗವಾಗಿ ಬಸವಲಿಂಗೇಶ್ವರ ಗದ್ದುಗೆಗೆ ಮಹಾ ರುದ್ರಾಭಿಷೇಕ, ವಚನಾಭಿಷೇಕ ಮತ್ತು ವಚನ ಸಾಹಿತ್ಯ ಗ್ರಂಥದಿಂಡಿ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಜರುಗಿದವು.
ಇತ್ತಿಚೆಗೆ ನಾಗಣಸೂರಿನಲ್ಲಿ ಲಿಂಗೈಕ್ಯ ಬಸವ ಲಿಂಗ ಮಹಾ ಸ್ವಾಮೀಜಿಯವರ 89ನೇ ಪುಣ್ಯ ಗಣಾರಾಧನೆ ಉತ್ಸವ ಅಂಗವಾಗಿ ಪೂಜ್ಯ ರೇವಣಸಿದ್ಧ ಮಹಾ ಸ್ವಾಮೀಜಿ ಹಾಗೂ ಅಭಿನವ ಬಸವಲಿಂಗ ಮಹಾ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ಮತ್ತು ಶಾಂತಮೂರ್ತಿ ಗುರುಪಾದಲಿಂಗ ಮಹಾ ಸ್ವಾಮೀಜಿ ಬಬಲಾದ, ಅಭಿನವ ಪುಂಡಲೀಕ ಮಹಾರಾಜ ಗೊಳಸಾರ, ಮೈಂದರ್ಗಿ ಮಹಾಂತೇಶ್ವರ ಪೂಜ್ಯರ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 33 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಶಾಸಕ ಸಚಿನ್ ಕಲ್ಯಾಣಶೆಟ್ಟಿ, ದುಧನಿ ಎಪಿಎಂಸಿ ಸಭಾಪತಿ ಪ್ರಥಮೇಶ ಮ್ಹೇತ್ರೆ ಹಾಗೂ ಗಣ್ಯರು ಇದ್ದರು.
ಈ ಉತ್ಸವದಲ್ಲಿ ಏಳು ಸಾವಿರಕ್ಕಿಂತ ಹೆಚ್ಚಿನ ಜಂಗಮರ ಮಹಾ ಗಣಾರಾಧನೆ ಕಾರ್ಯಕ್ರಮ ನಡೆದಿದ್ದು, ಸುಮಾರು 11 ಸಾವಿರಕ್ಕಿಂತ ಹೆಚ್ಚಿನ ಸುಹಾಸನಿಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ನಂತರ ಎಲ್ಲ ಜಂಗಮರಿಗೆ, ಸುಹಾಸನಿಯರಿಗೆ ಮತ್ತು ಸಾವಿರಾರು ಭಕ್ತರಿಗೆ ಹೋಳಿಗೆ, ತುಪ್ಪದೂಟ ಉಣಬಡಿಸಲಾಯಿತು.
ಇದನ್ನೂ ಓದಿ: ಪ್ರತಿ ವ್ಯಕ್ತಿಗೂ ಗುಣಮಟ್ಟದ ಕಾನೂನು ಕಾನೂನು ಖಾತ್ರಿಪಡಿಸಿ
ಲಿಂಗೈಕ್ಯ ಬಸವಲಿಂಗ ಮಹಾ ಸ್ವಾಮೀಜಿಗಳ 89ನೇ ಪುಣ್ಯ ಗಣಾರಾಧನೆ ಉತ್ಸವ ದಿನದಂದು ಹಮ್ಮಿಕೊಂಡಿದ್ದ ಶಿಬಿರದಲ್ಲಿ 108 ಜನರು ರಕ್ತದಾನ ಮಾಡಿದರು. ಅಲ್ಲದೇ ನಾಗಣಸೂರ ಕಬಡ್ಡಿ ಪ್ರೀಮಿಯರ್ ಲೀಗ್‌ನಲ್ಲಿ 25ಕ್ಕೂ ಹೆಚ್ಚಿನ ತಂಡಗಳಲ್ಲಿ ಕರ್ನಾಟಕದ ಲಚ್ಯಾಣ ಗ್ರಾಮದ ತಂಡವು ಗೆಲುವಿನ ನಗೆ ಬೀರಿತು. ರಂಗೋಲಿ ಸ್ಪರ್ಧೆ, ಕೊರೊನಾ ಲಸಿಕೆ ಹಾಕಿಸಿ, ಯುವಕರು ಸಾಮಾಜಿಕ ಜಾಗೃತಿ ಮೂಡಿಸಿದರು. ಲಿಂಗೈಕ್ಯ ಬಸವಲಿಂಗ ಸ್ವಾಮೀಜಿ ಭಾವಚಿತ್ರ ಮತ್ತು ವಚನ ಸಾಹಿತ್ಯ ಗ್ರಂಥ ಮೆರವಣಿಗೆಯಲ್ಲಿ ವಿವಿಧ ಭಜನಾ ತಂಡಗಳು, ಲೇಜಿಮ್ ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮ ಯಶಸ್ವಿಗಾಗಿ ಗಿರಿಮಲ್ಲ ಗಂಗೋಡಾ, ಭಿಮಶಾ ಧೋತ್ರಿ, ಬಸವರಾಜ ಗಂಗೋಂಡಾ, ಬಸವರಾಜ ನಾಗಲಗಾಂವ, ಮಲ್ಲಿನಾಥ ಕಲ್ಯಾಣ, ರಾಜು ತೋಳನೂರೆ, ಶಸಿ ಕಳಸಗೊಂಡಾ, ಶಂಕರ ದೊಡಮನಿ, ಧರೆಪ್ಪಾ ತೋಳನೂರೆ, ಬಸವರಾಜ ಪ್ರಚಂಡೆ, ವಿಠ್ಠಲ ಮಣೂರೆ, ರಮೇಶ ಚಾನಕೋಟಿ, ಕಾಶಿನಾಥ ಮಣೂರೆ, ವಿದ್ಯಾಧರ ಗುರವ, ಪ್ರಶಾಂತ ನಾಗೂರೆ, ಕಲ್ಯಾಣಿ ಗಂಗೋಂಡಾ ಮತ್ತಿತರರು ಇದ್ದರು.