ಆಳಂದ: ತಾಲೂಕಿನ ರುದ್ರವಾಡಿ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಹಾಗೂ ಇನ್ನಿತರ ಯೋಜನೆಗಳ ಕಾಮಗಾರಿಗೆ ಬೋಗಸ್ ಹಣ ಪಾವತಿಸಿದ ಅಧಿಕಾರಿಗಳು ಮತ್ತು ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರುನಾಡು ವಿಜಯಸೇನೆ ತಾಲೂಕು ಘಟಕದ ಕಾರ್ಯಕರ್ತರು ಗ್ರಾಪಂ ಕಚೇರಿ ಎದುರು ಬುಧವಾರ ದಿನವಿಡಿ ಧರಣಿ ಸತ್ಯಾಗ್ರಹ ನಡೆಸಿದರು.
ಗ್ರಾಪಂ ಕಚೇರಿಯ ಅವಧಿ ದಿನದ ಆರಂಭವಾದಾಗಿನಿಂದ ಮಧ್ಯಾಹ್ನದ ವರೆಗೆ ಧರಣಿ ಕುಳಿತರೂ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
2021-22ನೇ ಸಾಲಿನಲ್ಲಿ ರುದ್ರವಾಡಿ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಚ್ಚಲು ಗುಂಡಿ ನಿರ್ಮಾಣ, ಬೀದಿ ದೀಪ ಅಳವಡಿಸುವಲ್ಲಿ, ಸಾಮಗ್ರಿಗಳ ಬಿಲ್ ಪಾವತಿ, ಎರೆಹುಳ ಘಟಕ ಸ್ಥಾಪನೆ, 14, 15ನೇ ಹಣಕಾಸು ಯೋಜನೆ ಅಡಿಯಲ್ಲಿ ಬೋಗಸ್ ಹಣ ಪಾವತಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಗ್ರಾಪಂಗೆ ಬಂದ ಅನುದಾನವನ್ನು ಅಧಿಕಾರಿಗಳು ಮತ್ತು ಅಧ್ಯಕ್ಷರು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕುರಿತು ಲಿಖೀತ ಹಾಗೂ ಮೌಖೀಕವಾಗಿ ಮನವಿ ಮಾಡಿದರೂ ಮೇಲಧಿಕಾರಿಗಳು ಸ್ಪಂದಿಸಿಲ್ಲ. ಹೀಗೆ ವಿಳಂಬ ಧೋರಣೆ ಅನುಸರಿಸಿದರೆ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸೇನೆಯ ತಾಲೂಕು ಅಧ್ಯಕ್ಷ ಗುರು ಬಂಗರಗಿ ಎಚ್ಚರಿಸಿದರು.
ಸೇನೆಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಾಗರ ಪಾಟೀಲ, ಕಾರ್ಯದರ್ಶಿ ಗುರು ಪಾಟೀಲ, ಗ್ರಾಮ ಘಟಕದ ಅಧ್ಯಕ್ಷ ಲಖನ್ ಮೂಲಗೆ, ಆನಂದ ಪಾಟೀಲ, ಅಭಿಷೇಕ, ದರ್ಶನ ಮದಗುಣಕಿ, ಆಕಾಶ ನಿಂಗದಳ್ಳಿ, ನಿಲೇಶ ಚಿಚಟಕೋಟೆ, ಶಂಕರ ಬೇಡರ್, ಮಹಾದೇವ ಹೆಬಳೆ ಹಾಗೂ ರುದ್ರವಾಡಿ ಸೇರಿದಂತೆ ಇನ್ನಿತರ ಗ್ರಾಮಗಳ ಸೇನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹೊತ್ತೇರುತ್ತಿದ್ದಂತೆ ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಈ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಕೋರಲಾಗುವುದು ಎಂದು ಭರವಸೆ ನೀಡಿದರು. ನಂತರ ಧರಣಿ ಹಿಂದಕ್ಕೆ ಪಡೆಯಲಾಯಿತು.