Advertisement

ರಬ್ಬರ್‌ ಧಾರಣೆ ನಿರಂತರ ಇಳಿಕೆ; ಬೆಳೆಗಾರ ಸಂಕಷ್ಟದಲ್ಲಿ

12:20 AM Dec 31, 2021 | Team Udayavani |

ಪುತ್ತೂರು: ನಾಲ್ಕು ವರ್ಷಗಳ ಬಳಿಕ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದು ಕೋವಿಡ್‌ ಸಂಕಷ್ಟ ಕಾಲದಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದ ರಬ್ಬರ್‌ ಧಾರಣೆ ಇದೀಗ ಮತ್ತೆ ಕುಸಿತದತ್ತ ಮುಖ ಮಾಡಿದ್ದು ಬೆಳೆಗಾರರನ್ನು ಸಂಕಷ್ಟಕ್ಕೆ ಈಡು ಮಾಡಿದೆ.

Advertisement

ತಿಂಗಳ ಹಿಂದೆ ಧಾರಣೆಯು ಕೆಜಿಗೆ ಗರಿಷ್ಠ 192 ರೂ.ಗೆ ತಲುಪಿತ್ತು. ಅನಂತರ ದಿನಂಪ್ರತಿ 2ರಿಂದ 5 ರೂ. ತನಕ ಇಳಿಯುತ್ತ ಕೆಜಿಗೆ 158 ರೂ. ತನಕ ತಲುಪಿದೆ.

ಇಳುವರಿ ಮೇಲೆ ಪರಿಣಾಮ :

ವರ್ಷವಿಡೀ ಮಳೆಯ ಕಾರಣ ರಬ್ಬರ್‌ ಇಳುವರಿಯಲ್ಲೂ ಕೊರತೆಯಾಗಿತ್ತು. ಜತೆಗೆ ಎಲೆ ಉದುರುವ ರೋಗ ಬಾಧೆ ತಟ್ಟಿತು. ಅತ್ಯಧಿಕ ಉತ್ಪಾದನೆಯ ದಕ್ಷಿಣ ರಾಜ್ಯ ಕೇರಳದಲ್ಲಿ ಟ್ಯಾಪಿಂಗ್‌ ಮೇಲೆ ಪರಿಣಾಮ ಬೀರಿತ್ತು. ಕಡಿಮೆ ಉತ್ಪಾದನೆಯ ಕಾರಣ ನೈಸರ್ಗಿಕ ರಬ್ಬರನ್ನು ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಿಂದ ಸುಂಕ ರಹಿತವಾಗಿ ಆಮದು ಮಾಡುವಂತೆ ಟಯರ್‌ ಕಂಪೆನಿಗಳು ಆಗ್ರಹಿಸಿವೆ.  ಸದ್ಯ 7,90,000 ಟನ್‌ ಆಮದಿಗೆ ಬೇಡಿಕೆ ಇದೆ. ದೇಶೀಯ ರಬ್ಬರ್‌ ಧಾರಣೆ ಇಳಿಕೆಗೆ ಇದೇ ಕಾರಣ ಎನ್ನುವುದು ತಜ್ಞರ ಅಭಿಪ್ರಾಯ.

ಏರಿಕೆಯ ನಿರೀಕ್ಷೆ:

Advertisement

2021ರ ವರ್ಷದಲ್ಲಿ ವಿಶ್ವ ರಬ್ಬರ್‌ ಆರ್ಥಿಕತೆ ಸುಮಾರು 2 ಲಕ್ಷ ಟನ್‌ ಕೊರತೆ ಕಂಡುಬರಲಿದೆ. ವಿಶ್ವದ ರಬ್ಬರ್‌ ಪೂರೈಕೆ 13.882 ಮಿಲಿಯ ಟನ್‌ ಇದ್ದು ಬೇಡಿಕೆ 14,076 ಮಿಲಿಯ ಟನ್‌ ಇದೆ ಎನ್ನುವುದು ರಬ್ಬರ್‌ ಜರ್ನಲ್‌ ಅಂಕಿ ಅಂಶ. ಆದರೆ ಒಮಿಕ್ರಾನ್‌ ಹರಡುವಿಕೆ ಕಾರಣದಿಂದ ಯುರೋಪಿನಾದ್ಯಂತ ವಿಧಿಸಲಾದ ಹೊಸ ನಿರ್ಬಂಧಗಳು ಮತ್ತು ರಬ್ಬರ್‌ನ ಬೇಡಿಕೆಯ ಮೇಲೂ ಪರಿಣಾಮ ಬೀರಬಹುದು ಎನ್ನುವುದು ರಬ್ಬರ್‌ ಫ್ಯೂಚರ್ಸ್‌ ಮಾರುಕಟ್ಟೆಯ ಅಭಿಪ್ರಾಯ. ಮುಂದಿನ ತಿಂಗಳು ರಬ್ಬರ್‌ ಉತ್ಪಾದನೆ ಕಡಿಮೆಯಾಗುವುದರಿಂದ ಜನವರಿ ಮಧ್ಯದ ವೇಳೆಗೆ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ.

13 ಲಕ್ಷ ಬೆಳೆಗಾರರು :

ಧಾರಣೆ ಏರಿಳಿತದಿಂದ 12 ಲಕ್ಷ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ.  ಆಮದನ್ನು ಕನಿಷ್ಠ ಒಂದು ವರ್ಷ ನಿಷೇಧಿಸಬೇಕು. ಕಿಲೋಗೆ ಕನಿಷ್ಠ 180 ರೂ. ಬೆಂಬಲ ಬೆಲೆ ಘೋಷಿಸಬೇಕು. ರಬ್ಬರ್‌ ಬೋರ್ಡ್‌ ರೈತರಿಂದ ಕಿಲೋಗೆ 180 ರೂ.ಗಳಂತೆ ಕನಿಷ್ಠ ಒಂದು ಲಕ್ಷ ಟನ್‌ ಖರೀದಿಸಬೇಕು. ಆಮದು ಸುಂಕವನ್ನು ಆಮದು ಬೆಲೆಯ ಶೇ. 40ಕ್ಕೆ ಏರಿಸಬೇಕು ಎನ್ನುತ್ತಾರೆ ಬೆಳೆಗಾರ ನಾಗೇಶ್‌ ಪುತ್ತೂರು.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next