ಪುತ್ತೂರು: ಕುಸಿತದ ಹಾದಿಯಲ್ಲೇ ಸಾಗುತ್ತಿದ್ದ ರಬ್ಬರ್ ಧಾರಣೆ ಏರಿಕೆ ಕಂಡಿದ್ದು, ಬುಧವಾರ 150 ರೂ.ಗೆ ಖರೀದಿಯಾಗುವ ಮೂಲಕ ಬೆಳೆಗಾರರಲ್ಲಿ ನವೋಲ್ಲಾಸ ಮೂಡಿಸಿದೆ.
ಕೆಲವು ವರ್ಷಗಳ ಬಳಿಕ ರಬ್ಬರ್ ಧಾರಣೆ ಏರಿಕೆ ಕಂಡಿದ್ದು ಅಡಿಕೆಯ ದಾಖಲೆ ಧಾರಣೆಯ ಖುಷಿಯ ಜತೆಗೆ ರಬ್ಬರ್ ಧಾರಣೆ ಏರಿಕೆ ದಸರಾ ತಿಂಗಳಲ್ಲಿ ಕೃಷಿಕರ ಖುಷಿಯನ್ನು ಇಮ್ಮಡಿಗೊಳಿಸಿದೆ.
ವಿದೇಶಗಳಿಂದ ರಬ್ಬರ್ ಆಮದು ಇಳಿಮುಖಗೊಂಡ ಕಾರಣ ಭಾರತದಲ್ಲಿ ರಬ್ಬರ್ ದಾಸ್ತಾನು ಕೊರತೆ ಹೆಚ್ಚಾಗಿದ್ದು, ದೇಶೀಯ ರಬ್ಬರ್ ಧಾರಣೆ ಏರಿಕೆ ಕಂಡಿದೆ. ಆದಾಯಕ್ಕಿಂತಲೂ ರಬ್ಬರ್ ಉತ್ಪಾದನೆ ನಿರ್ವಹಣೆ ವೆಚ್ಚ ಹೆಚ್ಚಳದ ಕಾರಣ ಹಲವಾರು ಬೆಳೆಗಾರರು ಟ್ಯಾಪಿಂಗ್ ಸ್ಥಗಿತಗೊಳಿಸಿದ ಕಾರಣದಿಂದ ಉತ್ಪಾದನಾ ಪ್ರಮಾಣ ಕುಸಿದಿತ್ತು. ಇವೆಲ್ಲದರ ಪರಿಣಾಮವಾಗಿ ರಬ್ಬರ್ ಬೇಡಿಕೆಯಷ್ಟು ದೊರಕುತ್ತಿಲ್ಲ. ಹೀಗಾಗಿ ಧಾರಣೆ ಏರಿಕೆಯತ್ತ ಮುಖ ಮಾಡಿದೆ.
ಭಾರತದ ಗೋದಾಮುಗಳಲ್ಲಿ ಸಿಂಥೆಟಿಕ್ ರಬ್ಬರ್ ಹಾಗೂ ಇಂಡೋನೇಶ್ಯಾ, ಮಲೇಶ್ಯಾ, ಥಾಯ್ಲೆಂಡ್‌ನ ರಬ್ಬರ್ ಯಥೇತ್ಛವಾಗಿ ಶೇಖರಿಸಲಾಗಿತ್ತು. ಲಾಕ್‌ಡೌನ್ ವೇಳೆ ಟಯರ್ ಹಾಗೂ ಇತರ ರಬ್ಬರ್ ಉತ್ಪನ್ನ ಉತ್ಪಾದನೆ ಕಡಿಮೆಯಾಗಿತ್ತು. ಆದರೆ ಈಗ ಉತ್ಪಾದನಾ ಪ್ರಮಾಣ ಹೆಚ್ಚುತ್ತಿದ್ದು, ವಿದೇಶಿ ರಬ್ಬರ್ ದಾಸ್ತಾನು ಖಾಲಿಯಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಏರುಗತಿಯಲ್ಲಿ ರಬ್ಬರ್ ಬೆಲೆ
2020ರ ಜನವರಿ ವೇಳೆಗೆ ರಬ್ಬರ್ ಆರ್‌ಎಸ್‌ಎಸ್ 4- 127ರಿಂದ 130 ರೂ., ಆರ್‌ಎಸ್‌ಎಸ್ 5- 118ರಿಂದ 123 ಇತ್ತು. ಫೆಬ್ರವರಿಯಲ್ಲಿ ಆರ್‌ಎಸ್‌ಎಸ್ 4- 127ರಿಂದ 128 ರೂ., ಆರ್‌ಎಸ್‌ಎಸ್ 5-118ರಿಂದ 120 ರೂ., ಮಾರ್ಚ್ ಅನಂತರ ಲಾಕ್‌ಡೌನ್‌ನಿಂದ ಬಹುತೇಕ ರಬ್ಬರ್ ಸಂಸ್ಕರಣಾ ಘಟಕಗಳು ಮುಚ್ಚಿದ್ದವು. ಆಗಸ್ಟ್ ವೇಳೆ ಮಾರುಕಟ್ಟೆ ತೆರೆದು ಅಕ್ಟೋಬರ್ 1ರ ವರೆಗೆ ಆರ್‌ಎಸ್‌ಎಸ್ 4ಕ್ಕೆ 130 ರೂ., ಆರ್‌ಎಸ್‌ಎಸ್ 5ಕ್ಕೆ 124 ರೂ. ಸ್ಥಿರ ಧಾರಣೆ ಇತ್ತು. ಅ. 28ರಂದು ರಬ್ಬರ್ ಆರ್‌ಎಸ್‌ಎಸ್ 4ಕ್ಕೆ 150 ರೂ., ಆರ್‌ಎಸ್‌ಎಸ್ 5ಕ್ಕೆ 141 ರೂ., ಲಾಟ್- 125 ರೂ., ಸಾðಪ್-1-84 ರೂ., ಸಾðಪ್ 2 76 ರೂ.ಗೆ ಖರೀದಿಯಾಗಿದೆ.