Advertisement

ರಬ್ಬರ್‌ ಬೆಳೆಗೆ ಸಾಂಕ್ರಾಮಿಕ ಬೇರು ರೋಗ ಭೀತಿ!

02:41 PM Jan 15, 2018 | |

ಪುತ್ತೂರು: ಕಳೆದ 4 ವರ್ಷಗಳಿಂದ ಬೆಲೆ ಕುಸಿತಕ್ಕೆ ಒಳಗಾಗಿ 2017ರಲ್ಲಿ ಒಂದಷ್ಟು ಚೇತರಿಕೆ ಕಂಡಿದ್ದ ರಬ್ಬರ್‌ ಇದೀಗ ಬೆಳಗಾರನಿಗೆ ಮತ್ತೆ ಹೊಡೆತ ನೀಡುತ್ತಿದೆ. ರಬ್ಬರ್‌ಗೆ ಸಾಂಕ್ರಾಮಿಕ ಬೇರು ರೋಗ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಗುಣಮಟ್ಟದ ರಬ್ಬರ್‌ ಪೂರೈಕೆಗೆ ತೊಂದರೆಯಾಗಿದೆ.

Advertisement

ಹಲವು ವರ್ಷಗಳಿಂದ ರಬ್ಬರ್‌ ಗಿಡಗಳಲ್ಲಿ ಶಿಲೀಂಧ್ರ ಬಾಧೆ ಕಂಡುಬರುತ್ತಿದ್ದರೂ, ಕಳೆದ 3 ತಿಂಗಳಿಂದ ಕರಾವಳಿಯಲ್ಲಿ ಇದರ ಬಾಧೆ ತೀವ್ರವಾಗುತ್ತಿದೆ. ಈ ಬಾಧೆಗೊಳಗಾದ ರಬ್ಬರ್‌ ಗಿಡದ ಬೇರು ತನ್ನ ಸ್ವಾಭಾವಿಕ ಕ್ರಿಯೆಗಳನ್ನು ದಿನದಿಂದ ದಿನಕ್ಕೆ ಕಡಿಮೆಗೊಳಿಸುವ ಪರಿಣಾಮ ಮರ ಸೊರಗಿ ಹೋಗುತ್ತದೆ. ಸೊರಗಿದ ರಬ್ಬರ್‌ ಗಿಡಗಳಿಂದ ಗುಣಮಟ್ಟದ ರಬ್ಬರ್‌ ಪಡೆಯುವುದು ಬೆಳೆಗಾರರಿಗೆ ಅಸಾಧ್ಯ. ಆದ್ದರಿಂದ ಈ ಶಿಲೀಂಧ್ರಗಳ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಣೆಗೆ ತಜ್ಞರು ಸೂಚಿಸಿದ್ದಾರೆ.

2006-10 ಅವಧಿಯಲ್ಲಿ ಥಾಯ್ಲೆಂಡ್‌, ಇಂಡೋನೇಷ್ಯಾದ ಬಹುತೇಕ ರಬ್ಬರ್‌ ತೋಟಗಳಿಗೆ ಈ ಶಿಲೀಂಧ್ರ ಬಾಧೆ ಬಾಧಿಸಿದ್ದು, ಆ ದೇಶಗಳ ಶೇ. 80 ರಷ್ಟು ರಬ್ಬರ್‌ ವ್ಯವಹಾರ ಸ್ಥಗಿತವಾಗಿತ್ತು. ಅನಂತರ ಹೊಸತಳಿ ಅಭಿವೃದ್ಧಿಪಡಿಸಿ ಹಾಗೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ರಬ್ಬರ್‌ ಗಿಡ ಪ್ಲಾಂಟಿಂಗ್‌ ನಡೆಸಿದ್ದರಿಂದ ಪ್ರಸ್ತುತ ಶಿಲೀಂಧ್ರ ಬಾಧೆ ಶೇ.95ರಷ್ಟು ನಿಯಂತ್ರಿಸಲಾಗಿದೆ.

ಪುತ್ತೂರು ತಾಲೂಕಿನ ಆಲಂಕಾರು ಗ್ರಾಮದಲ್ಲಿ ರಬ್ಬರ್‌ ಮರದ ಬೇರಿನಲ್ಲಿ ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ. ಸತ್ತ ಮರದ 50ರಿಂದ 60 ಮೀಟರ್‌ ದೂರದ ಮರವನ್ನೂ ಈ ರೋಗ ಆಕ್ರಮಿಸುತ್ತದೆ. ಆರಂಭದಲ್ಲಿ ಲಕ್ಷಣಗಳೂ ಕಾಣಿಸದ್ದರಿಂದ ಸವಾಲಾಗಿದೆ. ಕುಂದಾಪುರ ತಾ| ನಲ್ಲಿ ಅತೀ ಹೆಚ್ಚು ಈ ರೋಗ ಕಂಡು ಬಂದಿದೆ. ರೋಗ ಬಾಧಿತ ಮರದ ಸುತ್ತ ಅಗೆದು ಬೇರೆ ಮರಕ್ಕೆ ಬೇರು ಅಂಟಿಕೊಳ್ಳದಂತೆ ಪ್ರಥಮ ಪ್ರಯತ್ನ ಮಾಡಬೇಕಾಗುತ್ತದೆ ಎಂದು ಮಂಗಳೂರಿನ ರಬ್ಬರ್‌ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಹೀಗೆ ನಿಯಂತ್ರಿಸಬಹುದು
ರಬ್ಬರ್‌ ಗಿಡಗಳಿಗೆ ಬೋರ್ಡೋ ದ್ರಾವಣವನ್ನು ಕಾಂಡ, ಬೇರು ಹಾಗೂ ಕೊಂಬೆಗಳಿಗೆ ಸಿಂಪಡಿಸುವುದು ಸೂಕ್ತ. ಶಿಲೀಂದ್ರ
ಬಾಧೆ ಕಂಡು ಬಂದ 4-5 ದಿನದೊಳಗೆ ಮಾರುಕಟ್ಟೆಯಲ್ಲಿ ಲಭ್ಯವುರುವ ಟಿಲ್‌ಟ್‌ ಎಂಬ ಕೀಟನಾಶಕವನ್ನು ಒಂದು ಲೀಟರ್‌ ನೀರಿಗೆ 5 ಎಂ.ಎಲ್‌ ಹಾಕಿ ಮರದ ಸುತ್ತ ಸುರಿಯಬೇಕು. ಅಥವಾ ಎಂಡೋಫಿಲ್‌ ಕೀಟನಾಶಕವನ್ನು 1 ಲೀ. ನೀರಿಗೆ 10 ಎಂಎಲ್‌ ಬಳಸಿ ರೋಗ ಬಾಧಿತ ಮರದ ಸುತ್ತ ಸುರಿದರೆ ರೋಗವನ್ನು ಹತೋಟಿಗೆ ತರಲು ಸಾಧ್ಯ ಎನ್ನುವುದು ರಬ್ಬರ್‌ ಮಂಡಳಿ ಅಧಿಕಾರಿಗಳ ಸಲಹೆ.

Advertisement

ಸಾಂಕ್ರಾಮಿಕ ರೋಗ
ಶಿಲೀಂಧ್ರ ರೋಗಕ್ಕೆ ತುತ್ತಾದ ಮರದಲ್ಲಿ ರಬ್ಬರ್‌ ಹಾಲಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಹಾಗೂ ಗುಣಮಟ್ಟದಲ್ಲಿ ಬದಲಾವಣೆಯಾಗುತ್ತದೆ. ಆರು ತಿಂಗಳು ಕಳೆದ ಬಳಿಕ ಮರದ ಎಲೆ ಹಳದಿ ಬಣ್ಣಕ್ಕೆ ತಿರುಗಿ ಬೇರು ಒಣಗಲು ಆರಂಭಗೊಳ್ಳುತ್ತದೆ. ಅನಂತರ ಕಾಂಡ ಒಣಗಿ ಎಲೆ ಉದುರಲಾರಂಭಿಸಿ ಹಂತ ಹಂತವಾಗಿ ಮರ ಸಾಯುತ್ತದೆ. ಈ ರೋಗವು ಸಾಂಕ್ರಾಮಿಕವಾಗಿದ್ದು, ಮರದಿಂದ ಮರಕ್ಕೆ ಬಹು ಬೇಗನೆ ಹರಡುತ್ತದೆ. ಸತ್ತ ಮರದ ಬೇರು ಜೀವ ಇರುವ ಮರದ ಬೇರಿಗೆ ತಾಗಿಕೊಂಡಿದ್ದರೆ ಆ ಮರವು ರೋಗಕ್ಕೆ ತುತ್ತಾಗುತ್ತದೆ. ಈ ರೋಗವು 10 ವರ್ಷ ಮೇಲ್ಟಟ್ಟ ಗಿಡಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

ಕ್ರಮ ಅನಿವಾರ್ಯ
ರಬ್ಬರ್‌ ಗಿಡ ನೆಟ್ಟ ಬಳಿಕ ಅದರ ನಿರ್ವಹಣೆಗೆ ಬೆಳೆಗಾರರು ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಶಿಲೀಂದ್ರ ಭಾದೆ ಸಾಮಾನ್ಯ. ಕರಾವಳಿಯ ಜೈವಿಕ ಹಾಗೂ ಭೌಗೋಳಿಕ ರಚನೆಗೆ ಶಿಲೀಂಧ್ರ ಸಮಸ್ಯೆ ಕಡಿಮೆ. ಆದರೆ ಒಂದು ಬಾರಿ ಸಮಸ್ಯೆ ಕಂಡುಬಂದರೆ ತಜ್ಞರ ಅಭಿಪ್ರಾಯ ಪಡೆದು ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳುವುದು ಅನಿವಾರ್ಯ.
–  ಕ| ಎಸ್‌. ಶರತ್‌ ಭಂಡಾರಿ,
   ಅಧ್ಯಕ್ಷರು, ಅಖಿಲ ಕರ್ನಾಟಕ ರಬ್ಬರ್‌
   ಬೆಳೆಗಾರರ ಸಂಘ

 ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next