ರಾಯಚೂರು: ಜನರ ಬದುಕಿನ ಮೇಲೆ ಬರೆ ಎಳೆದ ನೆರೆ, ವಿದ್ಯುತ್ ಉತ್ಪಾದನೆಗೆ ಮಾತ್ರ ವರವಾಗಿ ಪರಿಣಮಿಸಿದೆ. ಕಳೆದೆರಡು ತಿಂಗಳಲ್ಲಿ ಜಲಮೂಲಗಳಿಂದ ವಿದ್ಯುತ್ ಉತ್ಪಾದನೆ ವ್ಯಾಪಕವಾಗಿ ಹೆಚ್ಚಾಗಿದ್ದು, ಶಾಖೋತ್ಪನ್ನ ಕೇಂದ್ರಗಳ ಹೊರೆ ತಗ್ಗಿಸಿದೆ. ರಾಜ್ಯದಲ್ಲಿ ಮಳೆ ಇಲ್ಲವಾದರೆ ಶಾಖೋತ್ಪನ್ನ ಕೇಂದ್ರಗಳ ಮೇಲೆ ಒತ್ತಡ ಹೆಚ್ಚುವುದು ಸಾಮಾನ್ಯ.
ಬೇಸಿಗೆಯಲ್ಲಂತೂ ಬೇಡಿಕೆ ಮಿತಿ ಮೀರುತ್ತದೆ. ಆಗ ಯಾವೊಂದು ಘಟಕಗಳಿಗೂ ವಿಶ್ರಾಂತಿ ಇರಲ್ಲ. ಆದರೆ, ಈ ಬಾರಿ ಸುರಿದ ಭಾರೀ ಮಳೆಯಿಂದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ, ಅಲ್ಲಿನ ಜಲಸಂಪನ್ಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಆರ್‌ಟಿಪಿಎಸ್, ಬಿಟಿಪಿಎಸ್ ಸೇರಿದಂತೆ ಇನ್ನಿತರ ಶಾಖೋತ್ಪನ್ನ ಕೇಂದ್ರಗಳಿಗೆ ಕೆಲವೊಮ್ಮೆ ಕೆಲಸ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ.
ಏಳು ಘಟಕ ಬಂದ್: ರಾಜ್ಯದ ಯಾವ ಘಟಕ ವಿರಮಿಸಿದರೂ ರಾಯಚೂರು ಶಾಖೋತ್ಪನ್ನ ಕೇಂದ್ರ ಮಾತ್ರ ಸಕ್ರಿಯವಾಗಿರುತ್ತದೆ. ಆದರೆ, ಮೊಟ್ಟ ಮೊದಲ ಬಾರಿಗೆ ಅ.27ರಂದು ಎಂಟರಲ್ಲಿ ಏಳು ಘಟಕಗಳನ್ನು ಸ್ಥಗಿತಗೊಳಿಸಲಾಗಿತ್ತು. ಅಂದು ಅತಿ ಕಡಿಮೆ ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು. 1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಆರ್‌ಟಿಪಿಎಸ್ ಕೇವಲ ಒಂದು ಘಟಕವನ್ನು ನಾಮ್‌ಕಾವಾಸ್ತೆ ಎನ್ನುವಂತೆ ನಡೆಸಿತ್ತು.
ಸೋಲಾರ್-ಪವನ ಶಕ್ತಿ: ರಾಜ್ಯದಲ್ಲಿ ಸೋಲಾರ್, ಪವನಶಕ್ತಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಕ್ರಮೇಣ ಶಾಖೋತ್ಪನ್ನ ಕೇಂದ್ರಗಳ ಬಳಕೆಗೆ ಕಡಿವಾಣ ಹಾಕುವ ಚಿಂತನೆ ಕೂಡ ನಡೆದಿದೆ ಎನ್ನುತ್ತವೆ ಮೂಲಗಳು. ಸುಮಾರು 10 ಸಾವಿರ ಮೆಗಾವ್ಯಾಟ್‌ಗೂ ಅ ಧಿಕ ಪ್ರಮಾ ಣದ ವಿದ್ಯುತ್‌ನ್ನು ಸೋಲಾರ್ ಮತ್ತು ಪವನ ಶಕ್ತಿಯಿಂದ ಪಡೆಯಲಾಗುತ್ತಿದೆ. ಇವುಗಳನ್ನು ಬೇಸಿಗೆಯಲ್ಲಿ ಹೆಚ್ಚು ಬಳಸಿಕೊಳ್ಳುವ ಚಿಂತನೆ ಸರ್ಕಾರದ್ದು. ಇನ್ನು ಈ ಬಾರಿ ರಾಜ್ಯದಲ್ಲಿ ಮಳೆ ಚೆನ್ನಾಗಿ ಸುರಿದ ಪರಿಣಾಮ ಈಗಾಗಲೇ ಶರಾವತಿ, ನಾಗಝರಿ, ಕದ್ರ, ಗೇರುಸೊಪ್ಪ, ಜೋಗ, ಕೊಡಸಳ್ಳಿ ಸೇರಿ ಅನೇಕ ಕಡೆ ಜಲಶಕ್ತಿ ಉತ್ಪಾದನೆ ಚೆನ್ನಾಗಿ ಆಗುತ್ತಿದೆ.
ಖರ್ಚು ಜಾಸ್ತಿ: ಶಾಖೋತ್ಪನ್ನ ಕೇಂದ್ರಗಳಿಂದ ಉತ್ಪಾದಿ ಸುವ ವಿದ್ಯುತ್‌ಗೆ ಖರ್ಚು ಜಾಸ್ತಿ. ಇಲ್ಲಿ ಒಂದು ಯೂನಿಟ್‌ಗೆ 3ರಿಂದ 3.5 ರೂ.ಖರ್ಚಾಗುತ್ತದೆ. ಆದರೆ, ಜಲಸಂಪನ್ಮೂಲ, ಪವನಶಕ್ತಿ, ಸೋಲಾರ್‌ಗೆ ಹೋಲಿಸಿ ದರೆ ಇದು ದುಪ್ಪಟ್ಟು ಎಂದೇ ಹೇಳಬೇಕು. ಅಲ್ಲಿ ಒಂದರಿಂದ ಒಂದೂವರೆ ರೂ.ಗೆ ಯೂನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಹೀಗಾಗಿ, ಸರ್ಕಾರದ ಚಿತ್ತ ಈಗ ಅತ್ತ ವಾಲುತ್ತಿದೆ. ಬೇಸಿಗೆಯಲ್ಲಿ ಜಲಸಂಪನ್ಮೂಲ, ಪವನ ಶಕ್ತಿಯಿಂದ ಉತ್ಪಾದನೆ ತಗ್ಗುವುದರಿಂದ ಶಾಖೋತ್ಪನ್ನ ಕೇಂದ್ರಗಳೇ ಆಧಾರವಾಗಲಿವೆ. ಆದರೂ ಕಳೆದ ವರ್ಷ ಏಪ್ರಿಲ್, ಮೇನಲ್ಲಿಯೇ ಬೇಡಿಕೆ ಕುಸಿದಿತ್ತು. ಹಿಂದೆಯೆಲ್ಲ ವರ್ಷವಿಡೀ ಬೇಡಿಕೆ ಇರುತ್ತಿತ್ತು. ಆದರೆ, ಈಗ ಬೇಸಿಗೆಗೆ ಮಾತ್ರ ಸೀಮಿತಗೊಳ್ಳುತ್ತಿದೆ ಎನ್ನುತ್ತಾರೆ ಕೇಂದ್ರದ ಅಧಿಕಾರಿಗಳು.
ರಾಜ್ಯದಲ್ಲಿ ಈಗ ಸೋಲಾರ್, ಪವನಶಕ್ತಿ ಹಾಗೂ ಜಲಸಂಪನ್ಮೂಲದಿಂದ ಹೆಚ್ಚಿನ ವಿದ್ಯುತ್ ಪಡೆಯುವುದರಿಂದ ಶಾಖೋತ್ಪನ್ನ ಕೇಂದ್ರಗಳಿಗೆ ಬೇಡಿಕೆ ಕುಗ್ಗಿದೆ. ಈ ಬಾರಿ ಮಳೆ ಪ್ರಮಾಣ ಹೆಚ್ಚಾದ ಕಾರಣ ಅ.27ರಂದು ಏಳು ಘಟಕಗಳನ್ನು ಸ್ಥಗಿತಗೊಳಿಸಲಾ ಗಿತ್ತು. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಬೇಸಿಗೆಯಲ್ಲೂ ನಮಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಕಡಿಮೆ. ಆದರೆ, ನಮ್ಮ ಎಲ್ಲ ಘಟಕ ಗಳು ಉತ್ಪಾದನೆಗೆ ಸಿದ್ಧವಾ ಗಿದ್ದು, ಅಗತ್ಯದಷ್ಟು ವಿದ್ಯುತ್ ಪೂರೈಸಲು ಸಿದ್ಧವಾಗಿದ್ದೇವೆ.
-ಆರ್.ವೇಣುಗೋಪಾಲ್, ಕಾರ್ಯನಿರ್ವಾಹಕ ನಿರ್ದೇಶಕ, ಆರ್‌ಟಿಪಿಎಸ್
* ಸಿದ್ಧಯ್ಯಸ್ವಾಮಿ ಕುಕನೂರು