Advertisement

ಇನ್ನು ಬೆರಳ ತುದಿಯಲ್ಲೇ ಆರ್‌ಟಿಒ ಸೇವೆ

02:13 PM Jun 01, 2018 | Team Udayavani |

ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ಜಿಲ್ಲೆಯ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಇಲಾಖೆಯ ಸೇವೆಗಳನ್ನು ಒದಗಿಸಲು ಜೂನ್‌ 1ರಿಂದ ಸಾರಥಿ-4 ಎಂಬ ಹೊಸ ತಂತ್ರಾಂಶದ ಮೂಲಕ ಜನ ಸೇವೆಗೆ ಹೈಟೆಕ್‌ ಸ್ಪರ್ಶ ನೀಡಲು ಸಜ್ಜಾಗಿದೆ.

Advertisement

ಆರ್‌ಟಿಒ ಕಚೇರಿ ಎಂದರೆ ಇಂದಿಗೂ ಮೂಗಿ ಮುರಿಯುವವರೇ ಹೆಚ್ಚು. ಅಲ್ಲಿ ಏನೇ ಸೇವೆ ಪಡೆಯಬೇಕಾದರೂ ಇಲಾಖೆ ಅಧಿಕಾರಿಗಳ ಕೈ ಬೆಚ್ಚಿಗೆ ಮಾಡಬೇಕೆಂಬ ಅಪವಾದ ಇದ್ದೇ ಇದೆ. ಚಾಲನಾ ಪರವಾನಗಿಯಿಂದ ಹಿಡಿದು ದೃಢೀಕೃತ ಪ್ರತಿ, ನಕಲು ಪ್ರತಿ ಮತ್ತಿತರ ಸೇವೆಗಾಗಿ ಸಾವಿರಾರು ಲಂಚ ನೀಡಬೇಕೆಂಬ ಮಾತು ಸಹಜವಾಗಿಯೇ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.

ಹೀಗಾಗಿ ಪಾರದರ್ಶಕ ಸೇವೆ ನೀಡುವ ಮೂಲಕ ಜನ ಸ್ನೇಹಿ ಇಲಾಖೆಯನ್ನಾಗಿ ಮಾಡುವ ಉದ್ದೇಶದಿಂದ ಇದೀಗ ಇಲಾಖೆ ಆಯುಕ್ತರ ಆದೇಶದಂತೆ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಇಲಾಖೆ ತನ್ನ ಸೇವೆಗಳನ್ನು ಜಿಲ್ಲೆಯ ಜನತೆಗೆ ಆನ್‌ಲೈನ್‌ ಮೂಲಕ ನೀಡಲು ಮುಂದಾಗಿದೆ.

ಇಂದಿನಿಂದ ಆನ್‌ಲೈನ್‌ ಸೇವೆ:  ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗೆ ವಿವಿಧ ಸೇವೆಗಳನ್ನು ಕೋರಿ ಸಾರ್ವಜನಿಕರು ಖುದ್ದು ಕಚೇರಿಗೆ ಭೇಟಿ ನೀಡಿ ಸಂಬಂಧಪಟ್ಟ ಶಾಖೆಯಲ್ಲಿ ಅರ್ಜಿ ಸಲ್ಲಿಸಿ ಬರಬೇಕಿತ್ತು. ಇದರಿಂದ ಜಿಲ್ಲಾ ಕೇಂದ್ರದ ಆರ್‌ಟಿಒ ಕಚೇರಿಗೆ ದೂರದ ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲೂಕಿನ ಜನತೆಗೆ ದೊಡ್ಡ ಪ್ರಯಾಸವೇ ಆಗುತ್ತಿತ್ತು.

ಆದರೆ, ಇದೀಗ ಬೆರಳ ತುದಿಯಲ್ಲಿಯೇ ಇಲಾಖೆ ಸೇವೆಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರುತ್ತಿರುವುದು ಸಹಜವಾಗಿಯೇ ಜಿಲ್ಲೆಯ ರೈತಾಪಿ ಜನರಿಗೆ ಅದರಲ್ಲೂ ವಾಹನ ಮಾಲಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಇದರಿಂದ ಸೇವೆ ತ್ವರಿತಗತಿಯಲ್ಲಿ ಸಿಗುವುದರ ಜತೆಗೆ ಸಾರ್ವಜನಿಕರಿಗೆ ಸಮಯ, ಹಣವೂ ಉಳಿತಾಯವಾಗಲಿದೆ.

Advertisement

ಕಡತ ವಿಲೇವಾರಿ ಬಗ್ಗೆ ಸಂದೇಶ: ಅರ್ಜಿದಾರರು ಯಾವುದೇ ಸೇವೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರೂ ಕಡ್ಡಾಯವಾಗಿ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ನಮೂದಿಸಬೇಕು. ಇದರಿಂದ ಅರ್ಜಿ ಸ್ವೀಕರಿಸಿದ ದಿನದಿಂದ ಅರ್ಜಿ ವಿಲೇವಾರಿ ಆಗುವವರೆಗೂ ಸಾರ್ವಜನಿಕರಿಗೆ ಇಲಾಖೆಯಿಂದಲೇ ಮಾಹಿತಿ ರವಾನೆಯಾಗಲಿದೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗಶೆಟ್ಟಿ ತಿಳಿಸಿದರು.

ಬೆಂಗಳೂರು ಮಹಾನಗರ ಹೊರತಪಡಿಸಿದರೆ ಇಂತಹ ಸೇವೆ ರಾಜ್ಯದಲ್ಲಿಯೇ ಮೊದಲಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅನುಷ್ಟಾನಕ್ಕೆ ತರಲಾಗುತ್ತಿದೆ. ಇದರ ಜೊತೆಗೆ ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಸೇವೆ ಜೂನ್‌ 1 ರಿಂದ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

parivahan.gov.inಗೆ ಭೇಟಿ ಕೊಡಿ: ಸಾರ್ವಜನಿಕರಿಗೆ ಪಾರದರ್ಶಕತೆ ಜೊತೆಗೆ ಕಾಲ ಮಿತಿಯೊಳಗೆ ಶೀಘ್ರ ಸೇವೆ ಒದಗಿಸಲು ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ಆನ್‌ಲೈನ್‌ ಮೂಲಕ ಸಾರ್ವಜನಿಕರಿಂದ ವಿವಿಧ ಸೇವೆಗಳಿಗೆ ಅರ್ಜಿ ಸ್ವೀಕರಿಸಲಿದೆ. ಇದಕ್ಕಾಗಿ ಸಾರಥಿ-04 ತಂತ್ರಾಂಶವನ್ನೂ ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯ ಸಾರ್ವಜನಿಕರು ತಾವು ಇದ್ದ ಕಡೆಯಿಂದಲೇ parivahan.gov.in ಗೆ ಭೇಟಿ ಕೊಟ್ಟು ತಾವು ಬಯಸುವ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು. ಅದಕ್ಕೆ ಸಂಬಂದಿಸಿದ ಶುಲ್ಕಗಳನ್ನೂ ಆನ್‌ಲೈನ್‌ ಮೂಲಕವೇ ಖಜಾನೆ-2 ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಆನ್‌ಲೈನ್‌ನಲ್ಲಿ ಏನೇನು ಅರ್ಜಿ ಸಲ್ಲಿಸಬಹುದು?: ಜಿಲ್ಲೆಯ ಸಾರ್ವಜನಿಕರು ವಿಶೇಷವಾಗಿ ಡ್ರೈವಿಂಗ್‌ ಲೈನ್ಸ್‌, ಚಾಲನಾ ಕಲಿಕಾ ತರಬೇತಿಗೆ, ಡಿಎಲ್‌ ದೃಢೀಕೃತ ಪ್ರತಿ, ಹೆಸರು ಅಥವಾ ವಿಳಾಸ ಬದಲಾವಣೆಗೆ, ತಿಳಿವಳಿ ಪತ್ರ ಪಡೆಯಲು ಡ್ರೈವಿಂಗ್‌ ಲೈಸನ್ಸ್‌ ನವೀಕರಣಕ್ಕಾಗಿ, ಮೊದಲಿನ ಡ್ರೈವಿಂಗ್‌ ಲೈನ್ಸ್‌ ಕಳೆದುಕೊಂಡಿದ್ದರೆ ನಕಲಿ ಡ್ರೈವಿಂಗ್‌ ಲೈಸನ್ಸ್‌ ಪಡೆಯಲು ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವೇಳೆ ಅರ್ಜಿದಾರರು ಕಡ್ಡಾಯವಾಗಿ ತಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿದರೆ ಅರ್ಜಿ ಸ್ವೀಕೃತದಿಂದ ಹಿಡಿದು ಕಡತ ವಿಲೇವಾರಿ ಹಂತದವರೆಗೂ ಕಾಲಕಾಲಕ್ಕೆ ಅರ್ಜಿದಾರರಿಗೆ ಮಾಹಿತಿ ರವಾನೆ ಆಗಲಿದೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗಶೆಟ್ಟಿ “ಉದಯವಾಣಿ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next