ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರದ 60:40ರ ಅನುಪಾತದ ಸಹಭಾಗಿತ್ವದಲ್ಲಿ ಸಾರ್ವಜನಿಕ ಸೇವಾ ವಾಹನಗಳಿಗೆ ಪ್ರಮಾಣೀಕೃತ ವಾಹನ ಸ್ಥಳ ಟ್ರ್ಯಾಕಿಂಗ್ ಸಾಧನ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳಡಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಸರಕಾರ ಆದೇಶ ಹೊರಡಿಸಿದೆ.
ಈ ಯೋಜನೆಯನ್ನು 30.35 ಕೋಟಿ ರೂ.ನಲ್ಲಿ ಕೈಗೊಳ್ಳಲಾಗುತ್ತಿದೆ. ಡಿ. 1ರಿಂದಲೇ ವಾಹನಗಳಿಗೆ ಸಾಧನ ಅಳವಡಿಕೆ ಕಾರ್ಯ ಪ್ರಾರಂಭವಾಗಲಿದೆ. ವರ್ಷದ ಒಳಗೆ ಸಾಧನಗಳ ಅವಡಿಕೆಗೆ ಕಾಲಮಿತಿ ಹೇರಲಾಗಿದೆ ಎಂದು ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಸಾರ್ವಜನಿಕ ವಾಹನಗಳಿಗೆ ಈ ಸಾಧನಗಳನ್ನು ಅಳವಡಿಸಲು ಜಿಎಸ್‌ಟಿ ಹೊರತುಪಡಿಸಿ 7,900 ರಿಂದ 8,000 ರೂ.ವರೆಗೆ ದರ ನಿಗದಿಪಡಿಸಲು 13 ಕಂಪೆನಿಗಳ ಪ್ರತಿನಿಧಿಗಳು ಕೋರಿದ್ದರು.
ಈ ಹಿನ್ನೆಲೆಯಲ್ಲಿ ಸಾರಿಗೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವರವಾಗಿ ಚರ್ಚಿಸಿ ಪ್ರಮಾಣೀಕೃತ ವಾಹನ ಸ್ಥಳ ಟ್ರ್ಯಾಕಿಂಗ್ ರ್ಯಾಕಿಂಗ್ ಸಾಧನ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆಗೆ ಸ್ಪರ್ಧಾತ್ಮಕ ದರವಾಗಿ 7,599 ರೂ.ಅನ್ನು (ಜಿಎಸ್‌ಟಿ ಹೊರತುಪಡಿಸಿ) ನಿಗದಿಪಡಿಸಲಾಗಿದೆ ಎಂದಿದ್ದಾರೆ.
ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸಬೇಕಾಗಿರುವುದರಿಂದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಈ ಯೋಜನೆಗೆ ಒಳಪಡುವ ವಾಹನಗಳನ್ನು ಅರ್ಹತಾ ಪತ್ರ ನವೀಕರಣಕ್ಕೆ ಹಾಜರುಪಡಿಸಿದ ಸಮಯದಲ್ಲಿ ಪ್ರಮಾಣೀಕೃತ ವಾಹನ ಸ್ಥಳ ಟ್ರ್ಯಾಕಿಂಗ್ ರ್ಯಾಕಿಂಗ್ ಸಾಧನ, ಎಮರ್ಜೆನ್ಸಿ ಪ್ಯಾನಿಕ್ ಬಟನ್ ಸಾಧನಗಳನ್ನು ಅಳವಡಿಸಿರುವ ಬಗ್ಗೆ ಅರ್ಹತಾ ಪತ್ರ ನವೀಕರಿಸಬಹುದಾಗಿದೆ ಎಂದು ಹೇಳಿದ್ದಾರೆ
ಕಾಲಮಿತಿ ನಿಗದಿ
ರಾಜ್ಯದಲ್ಲಿ ಈ ಯೋಜನೆಯು ಪ್ರಾರಂಭವಾದಾಗಿನಿಂದ ಒಂದು ವರ್ಷದ ಅವಧಿಯಲ್ಲಿ ಅರ್ಹ ವಾಹನಗಳು -ಪ್ರಮಾಣೀಕೃತ ವಾಹನ ಸ್ಥಳ ಟ್ರ್ಯಾಕಿಂಗ್ ರ್ಯಾಕಿಂಗ್ ಸಾಧನ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳಡಿಸಿಕೊಳ್ಳಲು ಕಾಲಮಿತಿ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿನ ಸಾರ್ವಜನಿಕ ಸೇವಾ ವಾಹನಗಳಿಗೆ ಹಾಗೂ ರಾಷ್ಟ್ರೀಯ ರಹದಾರಿ ಹೊಂದಿರುವ ಸರಕು ಸಾಕಾಣಿಕೆ ವಾಹನಗಳಿಗೆ ಸಾಧನಗಳ ಅಳವಡಿಕೆ ಕಾರ್ಯ ಯೋಜನೆ ಪ್ರಾರಂಭಿಸಲು ಸೂಕ್ತ ಆದೇಶ ಹೊರಡಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.