Advertisement

ಕೇರಳ ಮಾದರಿಯಲ್ಲಿ  ಆರ್‌ಟಿಇ ಅನುಷ್ಠಾನ: ಶಿಕ್ಷಣ ಇಲಾಖೆ ಪ್ರಸ್ತಾವನೆ

06:00 AM Oct 18, 2018 | Team Udayavani |

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್‌ಟಿಇ) ಶೇ.25ರಷ್ಟು ವಿದ್ಯಾರ್ಥಿಗಳನ್ನು ಸರಕಾರವೇ ಶುಲ್ಕ ಭರಿಸಿ ಖಾಸಗಿ ಶಾಲೆಗೆ ಸೇರಿಸುವ ಬದಲು ಸರಕಾರಿ ಶಾಲೆಗಳಲ್ಲೇ ಆ ಮಕ್ಕಳನ್ನು ದಾಖಲಿಸಿಕೊಳ್ಳುವ “ಕೇರಳ ಮಾದರಿ’ ಕರ್ನಾಟಕದಲ್ಲೂ ಅನುಷ್ಠಾನವಾಗುವ ಸಾಧ್ಯತೆ ಇದೆ.

Advertisement

2018-19ನೇ ಸಾಲಿನ ಆರ್‌ಟಿಇ ವಿದ್ಯಾರ್ಥಿಗಳ ದಾಖಲಾತಿ ಈಗಾಗಲೇ ಪೂರ್ಣಗೊಂಡಿದೆ. ಇಲಾಖೆಯಿಂದ ಜಿಲ್ಲಾ, ಕ್ಷೇತ್ರ ಮತ್ತು ಶಾಲಾವಾರು ಆರ್‌ಟಿಇ ದಾಖಲಾತಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. 2.50 ಲಕ್ಷಕ್ಕೂ ಅರ್ಜಿ ಬಂದಿದ್ದು, ವಿವಿಧ ಸುತ್ತಿನ ಆನ್‌ಲೈನ್‌ ಸೀಟು ಹಂಚಿಕೆಯಲ್ಲಿ ಸುಮಾರು 1.10 ಲಕ್ಷ ವಿದ್ಯಾರ್ಥಿ ಗಳು ಸೀಟು ಪಡೆದಿದ್ದಾರೆ. 2012- 13ನೇ ಸಾಲಿನಿಂದ ರಾಜ್ಯದಲ್ಲಿ ಆರ್‌ಟಿಇ ಜಾರಿಗೆ ಬಂದಿದ್ದು, ಈ ಯೋಜನೆಯಡಿ ಸರಿಸುಮಾರು 6.30 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದಕ್ಕಾಗಿ ಸರಕಾರ 800 ಕೋ.ರೂ.ಗಳಿಗೂ ಅಧಿಕ ಹಣವನ್ನು ಈವರೆಗೆ ವಿನಿಯೋಗ ಮಾಡಿದೆ ವರ್ಷದಿಂದ  ವರ್ಷಕ್ಕೆ ಆರ್‌ಟಿಇ ಯಡಿ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಜತೆಗೆ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಯಾಗುತ್ತಿದೆ. ಆರ್‌ಟಿಇ ಅಡಿ ದಾಖಲಾದ ವಿದ್ಯಾರ್ಥಿಗಳ ಶುಲ್ಕ ಸರಕಾರದಿಂದಲೇ  ಶಾಲಾಡಳಿತ ಮಂಡಳಿಗೆ ಮರುಪಾವತಿ ಮಾಡಲಾಗುತ್ತದೆ. ಇದು ಸರಕಾರಕ್ಕೆ ಆರ್ಥಿಕ ಹೊರೆಯಾಗುವ ಜತೆಗೆ ಸರಕಾರಿ ಶಾಲೆಗಳು ಮಕ್ಕಳಿಲ್ಲದೇ ದುರ್ಬಲ ವಾಗುತ್ತಿವೆ. ಆರ್‌ಟಿಇ ಕಾಯ್ದೆಯ ಕೆಲವು ನಿಯಮಗಳಲ್ಲಿ ತಿದ್ದುಪಡಿ ತರಲು ಸರಕಾರ ಮುಂದಾಗಿದೆ. ಸಚಿವ ಸಂಪುಟದಲ್ಲಿ ಈ ವಿಷಯಕ್ಕೆ ಒಪ್ಪಿಗೆ ಪಡೆದ ಅನಂತರವಷ್ಟೇ ಅನುಷ್ಠಾನ ಸಾಧ್ಯ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೇರಳ ಮಾದರಿ ಪ್ರಸ್ತಾವನೆ 
ಕೇರಳದಲ್ಲಿ ಸರಕಾರಿ ಶಾಲಾ ವ್ಯವಸ್ಥೆ ತುಂಬ ಚೆನ್ನಾಗಿದೆ. ಹೀಗಾಗಿ ಆ ರಾಜ್ಯದಲ್ಲಿ ಆರ್‌ಟಿಇ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಮೊದಲ ಆದ್ಯತೆಯಂತೆ ಸೀಟು ನೀಡಲಾಗುತ್ತದೆ. ಸರಕಾರಿ ಅಥವಾ ಅನುದಾನಿತ ಶಾಲೆ ಇಲ್ಲದ ಕಡೆಗಳಲ್ಲಿ ಮಾತ್ರ ಖಾಸಗಿ ಶಾಲೆಗೆ ಆರ್‌ಟಿಇ ಅಡಿ ಮಕ್ಕಳನ್ನು ದಾಖಲಿಸಿ ಅಂಥ ಮಕ್ಕಳ ಶುಲ್ಕವನ್ನು  ಸರಕಾರದಿಂದ ಶಾಲೆಗಳಿಗೆ ಪಾವತಿಸಲಾಗುತ್ತದೆ. ಅದೇ ಮಾದರಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲು ಬೇಕಾದ ಪ್ರಸ್ತಾವನೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರಕಾರಕ್ಕೆ ಸಲ್ಲಿಸಲಾಗಿದೆ.

ಆರ್‌ಟಿಇ ನಿಯಮ ಗಳಿಗೆ ಸಂಬಂಧಿಸಿದಂತೆ ಕೇರಳ ಮಾದರಿಯ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ ಈ ಸಂಬಂಧ ಯಾವುದೇ ನಿರ್ಧಾರವಾಗಿಲ್ಲ. 2012-13ನೇ ಸಾಲಿನಿಂದ 2017-18ನೇ ಸಾಲಿನ ವರಗೂ ಆರ್‌ಟಿಇಅಡಿ ದಾಖಲಾಗಿರುವ ಮಕ್ಕಳಿಗೆ ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.
ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ

ರಾಜು ಖಾರ್ವಿ ಕೊಡೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next