Advertisement

ಕುಂದಾಪುರ ಪುರಸಭೆಯ 200 ಆಸ್ತಿಗೆ ದೊರೆಯದ ಆರ್‌ಟಿಸಿ! ಎಸಿ ಆದೇಶ ಇದ್ದರೂ ಕಡತದಲ್ಲೇ ಬಾಕಿ

10:47 PM Feb 10, 2021 | Team Udayavani |

ಕುಂದಾಪುರ: ಇಲ್ಲಿ ಪುರಸಭೆ ಆರಂಭವಾಗಿ 49 ವರ್ಷಗಳಾದರೂ ಪುರಸಭೆಗೆ ಸಂಬಂಧಿಸಿದ 200 ಆರ್‌ಟಿಸಿಗಳಲ್ಲಿ ಇನ್ನೂ ಪಂಚಾಯತ್‌ ಬೋರ್ಡ್‌ ಪ್ರಸಿಡೆಂಟ್‌ ಎಂದೇ ದಾಖಲಾಗಿದೆ. ಈ ಬಗ್ಗೆ ಸಹಾಯಕ ಆಯುಕ್ತರು ನಾಲ್ಕು ವರ್ಷಗಳ ಹಿಂದೆಯೇ ಆದೇಶ ನೀಡಿದ್ದರೂ ಇಲ್ಲಿನ ತಾಲೂಕು ಕಚೇರಿಯಲ್ಲಿ ಅನುಷ್ಠಾನವಾಗಿಲ್ಲ. ಅಂದ ಹಾಗೆ ಎರಡೂ ಕಚೇರಿಗಳಿರುವುದು ಮಿನಿವಿಧಾನಸೌಧ ಕಟ್ಟಡದಲ್ಲೇ.

Advertisement

ದಾಖಲೆ
ಕುಂದಾಪುರ ಪುರಸಭೆ ವ್ಯಾಪ್ತಿಯ ವಡೇರ ಹೋಬಳಿ ಗ್ರಾಮದ ಆರ್‌ಟಿಸಿ (ಪಹಣಿ ಪತ್ರಿಕೆ)ಯಲ್ಲಿ ಕಾಲಂ ನಂ.9ರಲ್ಲಿ ಈಗಲೂ ಪಂಚಾಯತ್‌ ಬೋರ್ಡ್‌ ಪ್ರಸಿಡೆಂಟ್‌ ಎಂದು ದಾಖಲಾಗಿದೆ. 1959ರಲ್ಲಿ ಜಿಲ್ಲಾ ಬೋರ್ಡ್‌ ರದ್ದಾಗಿ ತಾಲೂಕು ಬೋರ್ಡ್‌, ಜಿಲ್ಲಾ ಪರಿಷತ್‌ಗಳ ವ್ಯವಸ್ಥೆ ಬಂದಿತು. 1972ರಲ್ಲಿ ಪುರಸಭೆ ಆರಂಭವಾಯಿತು. ಪುರಸಭೆ ಆರಂಭವಾಗಿ ಮುಂದಿನ ವರ್ಷ ಸುವರ್ಣ ಮಹೋತ್ಸವ ಆಗಲಿದೆ. ಹಾಗಿದ್ದರೂ 1959ರಿಂದ ಇರುವ ಪಂಚಾಯತ್‌ ಬೋರ್ಡ್‌ ಹೆಸರು ತೆಗೆದು ದಾಖಲಾತಿಗಳಲ್ಲಿ ಪುರಸಭೆ ಹೆಸರು ಕಾಣಿಸಿಕೊಳ್ಳಲು ಈ ವರೆಗೂ ಸಾಧ್ಯವಾಗಿಲ್ಲ.

ಮನವಿ
ಪುರಸಭೆ ಈ ಕುರಿತು ಅನೇಕ ಪತ್ರ ವ್ಯವಹಾರ ಗಳನ್ನು ನಡೆಸಿ ಕೊನೆಗೂ ದಾಖಲಾತಿ ತಿದ್ದಿಸುವಲ್ಲಿ ಯಶಸ್ವಿಯಾಯಿತು. 2017ರ ಎ.7ರಂದು ಸಹಾಯಕ ಕಮಿಷನರ್‌ ಅವರು ಕಾಲಂ ನಂ.9ರ ತಿದ್ದುಪಡಿಗೆ ಆದೇಶ ಮಾಡಿದರು. ಅದಾದ ಬಳಿಕ ತಾಲೂಕು ಕಚೇರಿಯಲ್ಲಿ ಈ ಪ್ರಕ್ರಿಯೆ ಮುಂದುವರಿಯಬೇಕು. ಆದರೆ ಇಷ್ಟು ವರ್ಷಗಳಾದರೂ ಈ ಕುರಿತಾದ ಪ್ರಕ್ರಿಯೆ ನಡೆಯಲೇ ಇಲ್ಲ. ಭೂಮಿ ಶಾಖೆ ನಿರ್ವಹಣೆಯಲ್ಲಿ ರಾಜ್ಯದಲ್ಲಿ ನಂ.1 ಆದ ಕುಂದಾಪುರ ತಾಲೂಕು, ಕಂದಾಯ ಇಲಾಖೆ ಕೆಲಸ ಕಾರ್ಯಗಳಲ್ಲಿ ಸತತ 14 ತಿಂಗಳುಗಳಿಂದ ನಂ.1 ಆದ ಉಡುಪಿ ಜಿಲ್ಲೆಯಲ್ಲಿ ಸರಕಾರದ್ದೇ ಇನ್ನೊಂದು ಪೌರಾಡಳಿತ ಸಂಸ್ಥೆಗೆ ದಾಖಲೆ ಸರಿಮಾಡಿಸಿಕೊಡಲು ಆಗಲಿಲ್ಲ ಎನ್ನುವುದು ವಿಪರ್ಯಾಸ. ದೀಪದ ಬುಡದಲ್ಲಿ ಕತ್ತಲು ಎಂಬಂತೆ 200ರಷ್ಟು ಜಾಗದ ಆರ್‌ಟಿಸಿ, ಕನಿಷ್ಠ 1 ಸೆಂಟ್ಸ್‌ ಲೆಕ್ಕ ಹಾಕಿದರೂ 2 ಎಕರೆ ಆಗುತ್ತದೆ. ಅದಕ್ಕಿಂತಲೂ ಹೆಚ್ಚಿನ ಭೂಮಿಯ ದಾಖಲಾತಿ ತಿದ್ದುಪಡಿಯಾಗದೇ ಬಾಕಿಯೇ ಆಗಿದೆ.

ಇತರೆಡೆಯೂ ಬಾಕಿ
ಇಂತಹ ಪ್ರಕರಣ ಕುಂದಾಪುರ ಪುರಸಭೆ ಮಾತ್ರ ಅಲ್ಲ, ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲೂ ಇದೆ ಎಂಬ ಮಾಹಿತಿ ಇದೆ. ಕಾರ್ಕಳ ಪುರಸಭೆಯಲ್ಲೂ ಸ್ವಲ್ಪ ಪ್ರಕರಣ ಇದೆ ಎನ್ನಲಾಗಿದ್ದು ಸ್ವಲ್ಪ ಭೂಮಿಯ ದಾಖಲಾತಿ ಸರಿಪಡಿಸಲಾಗಿದೆ.

ಅತಿಕ್ರಮ
ಪುರಸಭೆ ಹೆಸರಿಗೆ ಆರ್‌ಟಿಸಿ ಆದ ಬಳಿಕ ಸರ್ವೇ ನಡೆದು ಜಾಗದ ಗಡಿಗುರುತು ಮಾಡಬೇಕಿದೆ. ಆ ಬಳಿಕವಷ್ಟೇ ಅತಿಕ್ರಮದ ತೆರವು ನಡೆಯಬೇಕಿದೆ. 200 ಆರ್‌ಟಿಸಿ ಹಾಗೇ ಮೈದಾನದ 2.6 ಎಕರೆ ಜಾಗದ ಆರ್‌ಟಿಸಿ ದೊರೆಯದೇ ಪುರಸಭೆಯ ಅತಿಕ್ರಮ ತೆರವಿಗೆ ಮುಂದಾದರೆ ನ್ಯಾಯಾಲಯದ ಕಟಕಟೆ ಏರಬೇಕಾದ ಸನ್ನಿವೇಶ ಇದೆ.

Advertisement

ಹಸ್ತಾಂತರ ಆಗಿಲ್ಲ
1985ರಲ್ಲಿ ಮೇ 7ರಂದು ಸರಕಾರದ ಗಜೆಟ್‌ ಪ್ರಕಟನೆಯಲ್ಲಿ ಸಾರ್ವಜನಿಕ ಉದ್ಯಾನವನ, ಆಟದ ಮೈದಾನ, ಬಯಲು ಸ್ಥಳಗಳ ಸಂರಕ್ಷಣೆ ಮತ್ತು ನಿಯಂತ್ರಣವನ್ನು ಉಪಬಂಧಿಸುವ ಅಧಿನಿಯಮವನ್ನು ಜಾರಿಗೆ ತಂದುದನ್ನು ಪ್ರಕಟಿಸ ಲಾಯಿತು. ಅದರಂತೆ ಅದೇ ವರ್ಷ ಜು. 24ರಂದು ಗಜೆಟ್‌ ನೋಟಿಫಿಕೇಶನ್‌ನಲ್ಲಿ ಬೆಂಗಳೂರು, ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ, ಮಂಗಳೂರು, ಮೈಸೂರು ಜಿಲ್ಲೆಗಳ ಪುರಸಭೆ ವ್ಯಾಪ್ತಿಯ ಉದ್ಯಾನವನ, ಆಟದ ಮೈದಾನ ಹಸ್ತಾಂತರಿಸುವ ವಿಷಯವಿತ್ತು. 58ನೇ ಕಾಲಂನಲ್ಲಿ ಕುಂದಾಪುರ ನೆಹರೂ ಮೈದಾನವನ್ನು ಪುರಸಭೆಗೆ ಹಸ್ತಾಂತರಿಸ ಬೇಕು ಎಂದು ಪ್ರಕಟಿಸಲಾಗಿತ್ತು. 6 ಸೆಂಟ್ಸ್‌ ಜಾಗದಲ್ಲಿ ರಂಗಮಂದಿರ ನಿರ್ಮಾಣವಾಗಿದ್ದು ಆ ಜಾಗ ಮಾತ್ರ ಪುರಸಭೆ ಹೆಸರಿನಲ್ಲಿದೆ. ಉಳಿಕೆ ಜಾಗ ಈ ವರೆಗೂ ಹಸ್ತಾಂತರವೇ ಆಗಿಲ್ಲ.

ಪತ್ರ ಕಳುಹಿಸಲಾಗಿದೆ
ಕಡತಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಜತೆ 2017ರಿಂದಲೇ ಅನೇಕ ಬಾರಿ ಪತ್ರ ವ್ಯವಹಾರ ನಡೆಸಲಾಗಿದೆ. ಎಸಿಯವರ ಆದೇಶವನ್ನು ಅನುಷ್ಠಾನ ಮಾಡಲು ತಹಶೀಲ್ದಾರ್‌ಗೆ ಸತತ ಮನವಿ ಪತ್ರ ಕಳುಹಿಸಲಾಗಿದೆ. ಪುರಸಭೆ ವತಿಯಿಂದ ಏನೆಲ್ಲ ಕ್ರಮ ಕೈಗೊಳ್ಳಬೇಕೋ ಅವನ್ನೆಲ್ಲ ಮಾಡಲಾಗಿದೆ.
– ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ

ಪರಿಶೀಲಿಸಲಾಗುವುದು
ನಾನು ಅಧಿಕಾರ ವಹಿಸಿಕೊಂಡ ಬಳಿಕ ಇಂತಹ ಬಾಕಿ ಇರುವುದು ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ.
– ಆನಂದಪ್ಪ ನಾಯ್ಕ , ತಹಶೀಲ್ದಾರ್‌, ಕುಂದಾಪುರ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next