Advertisement

ಎಡ್ಮಲೆ: 4 ದಶಕ ಕಳೆದರೂ ಸಿಗದ ಹಕ್ಕುಪತ್ರ

08:16 PM Nov 04, 2021 | Team Udayavani |

ಗೋಳಿಯಂಗಡಿ: ಮಡಾಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಒಂದನೇ ವಾರ್ಡ್‌ನ ಎಡ್ಮಲೆ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ನೆಲೆಸಿರುವ 16 ಕುಟುಂಬಗಳಿಗೆ 4 ದಶಕಗಳಿಂದ ಅಲೆದಾಟ ನಡೆ ಸುತ್ತಿದ್ದರೂ, ಇನ್ನೂ ಜಾಗದ ಹಕ್ಕುಪತ್ರ ಮಾತ್ರ ಸಿಕ್ಕಿಲ್ಲ.

Advertisement

ಈ ಕುಟುಂಬಗಳು ನೆಲೆಸಿರುವ ಪ್ರದೇಶ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರದಿದ್ದರೂ, ಹಕ್ಕುಪತ್ರದ ವಿಚಾರಕ್ಕೆ ಬಂದಾಗ ಮಾತ್ರ ಮೀಸಲು ಅರಣ್ಯ ಪ್ರದೇಶ ಎನ್ನುವ ಕಾರಣ ನೀಡಿ ವಿಳಂಬ ನೀತಿ ಅನುಸರಿಸುತ್ತಾರೆ ಎನ್ನುವುದು ಊರವರ ಆರೋಪ.

ಜಂಟಿ ಸರ್ವೇಗೆ ಆಗ್ರಹ:

ಇದು ಅರಣ್ಯ ಪ್ರದೇಶದಲ್ಲಿ ಬರುತ್ತದೆಯೋ ಅಥವಾ ಇಲ್ಲವೋ ಎನ್ನುವುದು ಖಚಿತವಾಗಿ ತಿಳಿಯಬೇಕಾದರೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿ ಜಂಟಿ ಸರ್ವೇ ನಡೆಸಿದರೆ ತಿಳಿಯಬಹುದು. ಜಂಟಿ ಸರ್ವೇಗೆ ಇಲ್ಲಿನ ನಿವಾಸಿಗರು ಅನೇಕ ಬಾರಿ ಒತ್ತಾಯಿಸಿದರೂ, ಇದಕ್ಕೆ ಮಾತ್ರ ಮುಂದಾಗುತ್ತಿಲ್ಲ. ಈ ಹಿಂದೆ 10 ವರ್ಷಗಳ ಹಿಂದೊಮ್ಮೆ ಸರ್ವೇ ಮಾಡಿದ್ದರೂ, ಅದರ ವರದಿಯೂ ಏನಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ.

ನಾವು ಪಂಚಾಯತ್‌ನಿಂದ ಅನೇಕ ಬಾರಿ ಸಂಬಂಧಪಟ್ಟ ಶಾಸಕರು, ಜಿಲ್ಲಾಧಿಕಾರಿ, ತಹಶೀಲ್ದಾರ್‌ ಸಹಿತ ಎಲ್ಲರಿಗೂ ಮನವಿ ಕೊಟ್ಟಿದ್ದೇವೆ. ಎಲ್ಲರಿಗೂ ಮನವಿ ಸಲ್ಲಿಸಿದಾಗ, ಸುದ್ದಿಯಾದಾಗ ಒಮ್ಮೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸುತ್ತಾರೆ. ಮಾಡಿಕೊಡುವ ಭರವಸೆ ಕೊಡುತ್ತಾರೆ. ಆದರೆ ಬಳಿಕ ಅಷ್ಟೆ ಬೇಗ ಮರೆತುಬಿಡುತ್ತಾರೆ ಎನ್ನುತ್ತಾರೆ ಮಡಾಮಕ್ಕಿ ಗ್ರಾ.ಪಂ.ನ ಸ್ಥಳೀಯ ಸದಸ್ಯ ಪ್ರತಾಪ್‌ ಶೆಟ್ಟಿ.

Advertisement

ಕೃಷಿ ಪರಿಹಾರ, ಸಾಲಕ್ಕೆ ತೊಂದರೆ :

ಜಾಗದ ಆರ್‌ಟಿಸಿ ಸಿಗದ ಹಿನ್ನೆಲೆಯಲ್ಲಿ ಗದ್ದೆ, ತೆಂಗು, ಅಡಿಕೆ ತೋಟ, ಇನ್ನಿತರ ಕೃಷಿ ಮಾಡಿದ್ದರೂ ಬೆಳೆ ಸಾಲ ಸಹಿತ ಯಾವುದೇ ರೀತಿಯ ಸಾಲ ದೊರಕುತ್ತಿಲ್ಲ. ಗ್ರಾಮ ಪಂಚಾಯತ್‌ನಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಸಕಾಲ ಯೋಜನೆಯಡಿ ಸಿಗುವ ಸವಲತ್ತುಗಳು ಸಹ ಸಿಕ್ಕಿಲ್ಲ. ಕೃಷಿ ಇಲಾಖೆ ಸೌಲಭ್ಯ ಪಡೆಯುವುದೂ ಕಷ್ಟವಾಗಿದೆ. ಪ್ರಾಕೃತಿಕ ವಿಕೋಪದಡಿ ನಷ್ಟ ಉಂಟಾದರೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಪಶ್ಚಿಮ ಘಟ್ಟದ ತಪ್ಪಲಿನಲ್ಲೇ ಇರುವುದರಿಂದ ಕಾಡು ಪ್ರಾಣಿ ಹಾವಳಿ ಇದ್ದು, ಕೃಷಿ ನಾಶವಾದರೆ ಹಕ್ಕುಪತ್ರವಿಲ್ಲದೆ ಪರಿಹಾರಕ್ಕೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೊಸ ಮನೆ ಕಟ್ಟುವುದಾದರೆ ಬ್ಯಾಂಕ್‌ ಸಾಲಕ್ಕೂ ಅರ್ಜಿ ಸಲ್ಲಿಸಲು ಆಗದ ಸ್ಥಿತಿ ಈ ಕುಟುಂಬಗಳದ್ದಾಗಿದೆ.

ಸಮಸ್ಯೆಯೇನು?:

ಮನೆ, ಕೃಷಿ ಇದ್ದರೂ ಆ ಜಾಗದ ಆರ್‌ಟಿಸಿಗಾಗಿ ಇಲ್ಲಿರುವ 16 ಕುಟುಂಬಗಳಿದ್ದು, 80-90 ಮಂದಿ ನೆಲೆಸಿದ್ದಾರೆ. ಇವರು ಕಳೆದ 30-40 ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದರೂ, ಅನೇಕ ಬಾರಿ ಅರ್ಜಿ ಹಾಕಿದರೂ ಹಕ್ಕುಪತ್ರ ಮಾತ್ರ ಸಿಗದೇ ಅಸಹಾಯಕವಾಗಿವೆ. ಆರ್‌ಟಿಸಿಗೆ ಅರ್ಜಿ ಸಲ್ಲಿಸಿದಾಗ ಕಂದಾಯ ಇಲಾಖೆಯವರು ಅರಣ್ಯ ಇಲಾಖೆಯಿಂದ ನಿರಾಕ್ಷೇ ಪಣ ಪತ್ರ ತನ್ನಿ ಎನ್ನುತ್ತಾರೆ. ಅಲ್ಲಿಗೆ ಹೋದರೆ, ಅವರ ಪ್ರಕಾರ ಇವರಿರುವ ಜಾಗ ಸುರಕ್ಷಿತ ಕಾಡು – ರಕ್ಷಿತಾರಣ್ಯದಲ್ಲಿದೆ ಎನ್ನುತ್ತಾರೆ. ಆದರೆ ಇವರ ಮನೆಗಳಿರುವ ಪ್ರದೇಶ ಅರಣ್ಯ ಪ್ರದೇಶವಲ್ಲ, ಮಧ್ಯೆ- ಮಧ್ಯೆ ಕೃಷಿ ಇರುವ ಕೆಲವು ಪ್ರದೇಶ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನುತ್ತಾರೆ ಇಲ್ಲಿನ ನಿವಾಸಿಗರು.

ಸುಮಾರು 35 ವರ್ಷಗಳಿಂದ ನಾವು ಮಡಾಮಕ್ಕಿ ಗ್ರಾಮದ ಎಡ್ಮಲೆ ಪ್ರದೇಶದಲ್ಲಿ ವಾಸವಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಯಾವುದೇ ರೀತಿಯ ಭೂ ದಾಖಲೆ ಸಿಕ್ಕಿಲ್ಲ. ಕೃಷಿ ಪರಿಹಾರ, ಪಂಚಾಯತ್‌ ಸೌಲಭ್ಯಕ್ಕೂ ಹಕ್ಕುಪತ್ರ ಬೇಕು. ಸರಕಾರದಿಂದ ದೊರೆಯುವ ಸಾಲ ಸೌಲಭ್ಯ, ಸಬ್ಸಿಡಿ, ಕೃಷಿಗೆ ಸಿಗುವ ಪ್ರೋತ್ಸಾಹ ಧನ ಎಲ್ಲದರಿಂದಲೂ ನಮ್ಮ ಪ್ರದೇಶ ವಂಚಿತವಾಗಿದೆ. ಇದರಿಂದ ಜನರು ದಿನಗೂಲಿಯನ್ನು ನಂಬಿಕೊಂಡು ಬದುಕುವ ಪರಿಸ್ಥಿತಿ ಎದುರಾಗಿದೆ.ನವೀನ್‌ ಶೆಟ್ಟಿ, ದೇವರಾಜ್‌  ಶೆಟ್ಟಿಗಾರ್‌ ಎಡ್ಮಲೆ, ಗ್ರಾಮಸ್ಥರು 

ಮಡಾಮಕ್ಕಿ ಗ್ರಾಮದ ಎಡ್ಮಲೆ ಗ್ರಾಮಸ್ಥರಿಗೆ ಹಕ್ಕುಪತ್ರ ಸಿಗದಿರುವ ಬಗ್ಗೆ ಅವರು ಈ ಬಗ್ಗೆ ಕೂಡಲೇ ಲಿಖೀತ ಮನವಿಯನ್ನು ನೀಡಲಿ. ಶೀಘ್ರ ಈ ಬಗ್ಗೆ ಪರಿಶೀಲನೆ ನಡೆಸಿ, ಕ್ರಮಕೈಗೊಳ್ಳಲಾಗುವುದು. ಜಂಟಿ ಸರ್ವೇ ಬಗ್ಗೆಯೂ ಗಮನಹರಿಸಲಾಗುವುದು. ಕೆ. ಪುರಂದರ, ಹೆಬ್ರಿ ತಹಶೀಲ್ದಾರ್‌ 

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next