ಮಂಗಳೂರು: ಬಿ.ಸಿ.ರೋಡ್‌ನಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಶುಕ್ರವಾರ ರಾತ್ರಿ ಕೊನೆಯುಸಿರೆಳೆದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ (28) ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ಸಜಿಪ ಮುನ್ನೂರು ನಿವಾಸಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ದು ಅಂತಿಮ ಸಂಸ್ಕಾರ ನಡೆಸಲಾಗಿದೆ. ಈ ವೇಳೆ ಕೆಲ ಅಹಿತಕರ ಘಟನೆಗಳು ನಡೆದಿವೆ.
ಸುಳ್ಳು ಸುದ್ದಿ ನಂಬದಿರಿ : ಎಸ್‌ಪಿ ಮನವಿ
ಸಾಮಾಜಿಕ ತಾಣಗಳಲ್ಲಿ ಗುರುಪುರ ಕೈಕಂಬದಲ್ಲಿ, ಬಿ.ಸಿ.ರೋಡ್ ಕೈಕಂಬದಲ್ಲಿ ಯುವಕನೊಬ್ಬನಿಗೆ ಇರಿಯಲಾಗಿದೆ ಎಂದು ಸುದ್ದಿ ಹರಿದಾಡುತ್ತಿದ್ದು ಇಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ. ಸುಳ್ಳು ಸುದ್ದಿಗಳನ್ನು ನಂಬಬೇಡಿ, ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ. ಶಾಂತಿ ಕಾಪಾಡಲು ಸಹಕರಿಸಿ ಎಂದು ಎಸ್‌ಪಿ ಸುಧೀರ್‌ಕುಮಾರ್ ರೆಡ್ಡಿ ಮನವಿ ಮಾಡಿದ್ದಾರೆ.
ಆಸ್ಪತ್ರೆಯ ಸಿಬಂದಿಗಳು ಸಂಬಂಧಿಕರ ವಶಕ್ಕೆ ನೀಡಿದ ಮೃತದೇಹಕ್ಕೆ ಮೈಸೂರು ಪೇಟ ತೊಡಿಸಿ, ಕೇಸರಿ ಶಾಲು ಹೊದಿಸಿ ಹೂವಿನಿಂದ ಅಲಂಕೃತ ಅಂಬುಲೆನ್ಸ್‌ನಲ್ಲಿ ಇರಿಸಿ ಮನೆಗೆ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು.
ನೂರಾರು ಸಂಘಪರಿವಾರದ ಕಾರ್ಯಕರ್ತರು, ಮುಖಂಡರು ಆಸ್ಪತ್ರೆಯ ಬಳಿ ಜಮಾವಣೆಗೊಂಡು ಅಮರ್ ರಹೇ ಶರತ್ ಎಂಬ ಘೋಷಣೆಗಳನ್ನು ಮೊಳಗಿಸಿರುವುದು ಕಂಡು ಬಂದಿತು.
ಬಂಟ್ವಾಳ ತಾಲೂಕಿನಾಧ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು ಪರಿಸ್ಥಿತಿ ನಿಭಾಯಿಸಲು ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಮೆರವಣಿಗೆ ತೆರಳುತ್ತಿರುವ ಆಯಕಟ್ಟಿನ ಪ್ರದೇಶಗಳಲ್ಲಿ ಹದ್ದಿನ ಕಣ್ಣು ಇರಿಸಲಾಗಿದೆ.
ಕಲ್ಲು ತೂರಾಟ
ಮೆರವಣಿಗೆ ಸಾಗಿದ ಬಳಿಕ ಕಿಡಿಗೇಡಿಗಳು ಕೈಕಂಬ ಬಳಿ ಕಾಂಪ್ಲೆಕ್ಸ್ ವೊಂದರ ಮೇಲಿಂದ ಕಲ್ಲುತೂರಾಟ ನಡೆಸಿದ ಘಟನೆ ನಡೆದಿದ್ದು, ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೆಲ ವಾಹನಗಳ ಗಾಜುಗಳು ಪುಡಿಯಾಗಿರುವ ಬಗ್ಗೆ ವರದಿಯಾಗಿದೆ.
ಈ ವೇಳೆ ಪೊಲೀಸರು ಲಾಟಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದ್ದಾರೆ. ಕಲ್ಲು ತೂರಾಟ ನಡೆಸಿದ್ದ 6 ಮಂದಿಯನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಜೀಪ ನಿವಾಸದಲ್ಲಿ ಅಂತ್ಯಕ್ರಿಯೆ ನಡೆದಿದ್ದು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರು. ಆರ್‌ಎಸ್‌ಎಸ್ ಗೌರವ ವಂದನೆ ನೀಡಿ ಹಿಂದೂ ಸಂಪ್ರದಾಯದಂತೆ ಅಗ್ನಿ ಸ್ಪರ್ಶ ಮಾಡಲಾಯಿತು.
ಸಜಿಪಮುನ್ನೂರು ಗ್ರಾಮದ ಮಡಿವಾಳಪಡುನಿವಾಸಿ ತನಿಯಪ್ಪ ಮಡಿವಾಳ ಅವರ ಪುತ್ರಶರತ್ ಮಂಗಳವಾರ ರಾತ್ರಿ ಬಿ.ಸಿ.ರೋಡ್‌ನಲ್ಲಿರುವ ತನ್ನ ಲಾಂಡ್ರಿ ಅಂಗಡಿಯನ್ನು ಬಂದ್ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಮಾರಕಾಯುಧ ಗಳಿಂದ ಕಡಿದು ಚೂರಿಯಿಂದ ಇರಿದು ಪರಾರಿಯಾಗಿದ್ದರು.
ಬಿ.ಸಿ.ರೋಡ್ ಮತ್ತು ಪರಂಗಿಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ಖಾಸಗಿ ಬಸ್‌ಗಳು ಸಂಚರಿಸುತ್ತಿಲ್ಲ. ಸರಕಾರಿ ಬಸ್‌ಗಳ ಸಂಚಾರ ಎಂದಿನಂತೆ ಇದೆ.