Advertisement

ಆರೆಸ್ಸೆಸ್‌ ಹಿರಿಯ ಸ್ವಯಂಸೇವಕ ಬೆನಕ ಭಟ್‌ ನಿಧನ

12:50 AM Feb 27, 2020 | Lakshmi GovindaRaj |

ಬೆಂಗಳೂರು/ಮೈಸೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ತೀರ್ಥಹಳ್ಳಿ ತಾಲೂಕಿನ ಹಿರಿಯರಾದ ಚಕ್ಕೋಡಬೈಲು ಬೆನಕ ಭಟ್‌ (80) ಬುಧವಾರ ಮೈಸೂರಿನಲ್ಲಿ ನಿಧನರಾದರು.

Advertisement

ಸಂಘ ಪರಿವಾರದ ಸಂಘಟನೆಯಲ್ಲಿ ಐದು ದಶಕಗಳಿಂದ ತೊಡಗಿಸಿಕೊಂಡಿದ್ದ ಅವರು, 50-60ರ ದಶಕದಲ್ಲಿ ಕೆ.ನರಸಿಂಹ ನಾಯಕ್‌, ಎಂ.ಪುರುಷೋತ್ತಮ ರಾವ್‌ ಅವರೊಂದಿಗೆ ಸಂಘಪರಿವಾರದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ತೀರ್ಥಹಳ್ಳಿ ತಾಲೂಕಿನಲ್ಲಿ ಬಿಜೆಪಿ ಬಲವರ್ಧನೆಗೆ ಶ್ರಮಿಸಿದ್ದರು. ಕಳೆದ ಕೆಲದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೈಸೂರಿನಲ್ಲಿರುವ ಮಗಳ ಮನೆಯಲ್ಲಿ ತಂಗಿದ್ದರು.

ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಬೆನಕಭಟ್‌ ಅವರ ಪಾರ್ಥೀವ ಶರೀರವನ್ನು ಮೈಸೂರಿನಿಂದ ತೀರ್ಥಹಳ್ಳಿಗೆ ಕೊಂಡೊಯ್ದು ಆರೆಸ್ಸೆಸ್‌ ಕಚೇರಿ ಪ್ರೇರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತೀರ್ಥಹಳ್ಳಿ ಸಮೀಪದ ಚಕ್ಕೋಡ ಬೈಲುವಿನಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿದೆ.

ಸಾವಯವ ಕೃಷಿ, ಶಿಕ್ಷಣ, ಗ್ರಾಮ ವಿಕಾಸ, ಕೌಟುಂಬಿಕ ಮೌಲ್ಯಗಳ ಸಂವರ್ಧನೆ, ಸಾಮಾಜಿಕ ಸಾಮರಸ್ಯ, ಸಹಕಾರಿ ಕ್ಷೇತ್ರ ಮೊದಲಾದ ಹಲವು ಸಮಾಜಮುಖೀ ಚಟುವಟಿಕೆಗಳನ್ನು ಸ್ವತಃ ನಡೆಸುತ್ತಿದ್ದ ಬೆನಕ ಭಟ್‌ ಅವರ ಅಗಲುವಿಕೆಯಿಂದ ಆರೆಸ್ಸೆಸ್‌ನ ಮೊದಲ ಗುಂಪಿನ ಸ್ವಯಂಸೇವಕರ ಪ್ರಮುಖ ಕೊಂಡಿ ಯೊಂದು ಕಳಚಿದಂತಾಗಿದೆ. ಆರೆಸ್ಸೆಸ್‌ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್‌, ಸಿಎಂ ಬಿ.ಎಸ್‌.ಯಡಿಯೂರಪ್ಪ ಸೇರಿ ದಂತೆ ಹಲವು ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಆರೆಸ್ಸೆಸ್‌ನ ಹಿರಿಯ ಚಿಂತಕರು ಮತ್ತು ಮಾರ್ಗದರ್ಶಕರಾಗಿದ್ದ ಚಕ್ಕೋಡ್‌ ಬೈಲು ಬೆನಕ ಭಟ್‌ ಅವರ ನಿಧನದಿಂದ ನಾನು ಒಬ್ಬ ಹಿರಿಯ ಸ್ನೇಹಿತ ಹಾಗೂ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುವೆ.
-ಯಡಿಯೂರಪ್ಪ, ಮುಖ್ಯಮಂತ್ರಿ

Advertisement

ಆದರ್ಶ ಸ್ವಯಂಸೇವಕ ಬೆನಕ ಭಟ್ಟರು. ಇಡೀ ಕುಟುಂಬವನ್ನು ಸಂಘದ ಕುಟುಂಬವನ್ನಾಗಿ ಮಾಡಿದವರು. ಅವರ ಸಂಘಕಾರ್ಯದ ರೀತಿ, ಆತ್ಮೀಯತೆಯನ್ನು ಪಡೆದವರಲ್ಲಿ ನಾನು ಒಬ್ಬ. ಭಗವಂತನ ಸಾನಿಧ್ಯ ಅವರಿಗೆ ದೊರೆಯಲೆಂದು ಪ್ರಾರ್ಥಿಸುತೇನೆ.
-ವಿ.ನಾಗರಾಜ್‌, ಆರೆಸ್ಸೆಸ್‌ ಕ್ಷೇತ್ರೀಯ ಸಂಘಚಾಲಕ

ಬೆನಕ ಭಟ್ಟರ ನಿಧನದ ಸುದ್ದಿ ಅತ್ಯಂತ ಆಘಾತಕರ. ಮನದಾಳದ ಶ್ರದ್ಧಾಂಜಲಿ, ಭಾವಾಂಜಲಿಗಳನ್ನರ್ಪಿಸುತ್ತೇನೆ. ಭಗವಂತ ಅಂಥವರನ್ನು ಪುನಃ ಸೃಜಿಸಿ, ಭೂಮಿಯ ಮೇಲೆ ಕಳಿಸಲಿ.
-ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್‌ ಸಹ ಸರಕಾರ್ಯವಾಹ

Advertisement

Udayavani is now on Telegram. Click here to join our channel and stay updated with the latest news.

Next