Advertisement

ಯತ್ನಾಳ್ ಹೇಳಿಕೆ ಹಿಂದೆ ಆರ್ ಎಸ್ಎಸ್ ಬೆಂಬಲವಿದೆ: ಪ್ರಕಾಶ್ ರಾಠೋಡ್

11:35 AM May 08, 2022 | Team Udayavani |

ವಿಜಯಪುರ : ಮುಖ್ಯಮಂತ್ರಿ ಆಗಲು 2500 ಕೋಟಿ ರೂ,ಮಂತ್ರಿಯಾಗಲು ನೂರು ಕೋಟಿ ರೂ. ಕೊಡಬೇಕೆಂದು ಆಡಳಿತ ಪಕ್ಷದ ಶಾಸಕ ಯತ್ನಾಳ್ ಅವರೇ ಹೇಳಿದ್ದಾರೆ. ಈ ಹಣ ಕೇಳಿದ್ದು ಯಾರಿಗೆ, ಯಾರು ಯಾರಿಗೆ ಕೊಟ್ಟದ್ದು ಎಂದು ಹೆಸರು ಬಹಿರಂಗ ಪಡಿಸಬೇಕು. ಇಲ್ಲವಾದಲ್ಲಿ ಶಾಸಕ ಯತ್ನಾಳ್ ಅವರನ್ನು ಬಂಧಿಸುವಂತೆ ಮೇಲ್ಮನೆ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ್ ಆಗ್ರಹಿಸಿದರು.

Advertisement

ಭಾನುವಾರ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಆಗ್ರಹ ಮಾಡಿದ ರಾಠೋಡ, ಶಾಸಕ ಯತ್ನಾಳ್ ಲಂಚ ಕೇಳಿದವರ ಹೆಸರು ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದರು.

ಯತ್ನಾಳ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದವರು, ಇದೀಗ ಶಾಸಕರೂ ಆಗಿದ್ದು, ಜವಾಬ್ದಾರಿ ಸ್ಥಾನದಲ್ಲಿರುವ ಅವರು ಈ ಭ್ರಷ್ಟಾಚಾರದ ಮಾಹಿತಿ ತಿಳಿದ ಕೂಡಲೇ ಸರ್ಕಾರಕ್ಕೆ, ಪೊಲೀಸರಿಗೆ ಮಾಹಿತಿ ನೀಡದಿರುವುದು ಕೂಡ ಅಪರಾಧ. ಹೀಗಾಗಿ ಸರ್ಕಾರ ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಯತ್ನಾಳ ತಮಗೆ ಭ್ರಷ್ಟಾಚಾರದ ಮಾಹಿತಿ ಸಿಕ್ಕ ಕೂಡಲೇ ಎಸಿಬಿ ಸಂಸ್ಥೆಗೆ ಮಾಹಿತಿ ನೀಡಲಿಲ್ಲ ಏಕೆ. ಪ್ರಧಾನಿ ಮೋದಿ, ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಆರ್.ಎಸ್.ಎಸ್. ಮುಖಂಡ ಮೋಹನ‌ ಭಾಗವತ್ ಹೀಗೆ ಯಾರಿಗೆ ಈ ಬೃಹತ್ ಮೊತ್ತದ ಭ್ರಷ್ಟಾಚಾರದ ಹಣ ಕೊಡಬೇಕಿತ್ತು ಎಂಬುದನ್ನು ಬಹಿರಂಗ ಮಾಡದಿದ್ದರೆ, ಕೂಡಲೇ ಯತ್ನಾಳ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಪಿಎಸ್ಐ ನೇಮಕ ಹಗರಣದಲ್ಲಿ ಕೆಲವು ಹಿರಿಯ ಪೊಲೀಸರನ್ನು ವರ್ಗಾವಣೆ, ಹಲವರನ್ನು ಸಸ್ಪೆಂಡ್ ಮಾಡುವ ಮೂಲಕ ಸರ್ಕಾರ ಗೃಹ ಸಚಿವರ ವೈಫಲ್ಯವನ್ನು ಹಾಗೂ ಅಕ್ರಮ ನೇಮಕ ಪ್ರಕರಣವನ್ನು ಒಪ್ಪಿಕೊಂಡಿದೆ. ಕೂಡಲೇ ಪಾರದರ್ಶಕ, ನಿಷ್ಪಕ್ಷಪಾತ ತನಿಖೆಗಾಗಿ ಕೂಡಲೇ ಆರಗ ಜ್ಞಾನೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Advertisement

ಯತ್ನಾಳ್ ಮುಖ್ಯಮಂತ್ರಿ ಮಾಡಲು, ಸಚಿವ ಸ್ಥಾನ ನೀಡಲು ಲಂಚ ಕೊಡಬೇಕು ಎಂದಷ್ಟೇ ಅಲ್ಲ, ಹಲವು ಹಗರಣಗಳ ಕುರಿತು ಮಾತನಾಡಿದ್ದಾರೆ. ಕೆಪಿಎಸ್ಸಿ ಅಧ್ಯಕ್ಷರ ನೇಮಕಕ್ಕೆ ಹಣ ಪಡೆದದ್ದು ಯಾರು, ಕೊಟ್ಟವರು ಯಾರು ಎಂದು ಯತ್ನಾಳ್ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ಆಗ್ರಹಿಸಿದರು.

ನ ಖಾವೂಂಗಾ ನ ಖಾನೇ ದೂಂಗಾ ಎನ್ನುತ್ತಿದ್ದ ಪ್ರಧಾನಿ ಮೋದಿ ಮೌನಿ ಬಾಬಾ ಆಗಿದ್ದಾರೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಶಿಸ್ತಿನ ಪಕ್ಷದ ವಿರುದ್ಧ ಬಿಜೆಪಿ ಶಾಸಕರೇ ಬಹಿರಂಗ ಆರೋಪ ಮಾಡಿದರೂ ಕನಿಷ್ಠ ಕಠಿಣ ಕ್ರಮ‌ ಕೈಗೊಳ್ಳದಷ್ಟು ಬಿಜೆಪಿ ಹೈಕಮಾಂಡ್ ದುರ್ಬಲವಾಗಿದೆ. ಪ್ರಧಾನಿ, ‌ಮುಖ್ಯಮಂತ್ರಿ ವಿರುದ್ಧವೇ ಆರೋಪ ಮಾಡಿದರೂ ಶಿಸ್ತುಕ್ರಮಕ್ಕೆ ಮುಂಗಾಗದಿರುವುದನ್ನು ಗಮನಿಸಿದರೆ ಯತ್ನಾಳ್ ಹೇಳಿಕೆ ಹಿಂದೆ ಆರ್ ಎಸ್ಎಸ್ ಬೆಂಬಲವಿದೆ ಎನಿಸುತ್ತದೆ ಎಂದು ಗಂಭೀರ ಆರೋಪ ಮಾಡಿದರು.

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮಠಗಳ ಅಭಿವೃದ್ಧಿ ಅನುದಾನದಲ್ಲಿ ಕಮಿಷನ್ ಪಡೆಯುತ್ತದೆ ಎಂದು ಮಠಾಧೀಶರು, ಮಾಡಿದ ಕಾಮಗಾರಿಯ ಬಿಲ್ ಪಾವತಿಗೆ ಗುತ್ತಿಗೆದಾರರು ಕಮಿಷನ್ ಕೊಡಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅವರದೇ ಪಕ್ಷದ ಶಾಸಕ ಯತ್ನಾಳ್ ಮುಖ್ಯಮಂತ್ರಿ, ಸಚಿವ ಸ್ಥಾನ ಪಡೆಯಲು ಸಾವಿರಾರು ಕೋಟಿ ರೂ. ಲಂಚದ ಆರೋಪ ಮಾಡಿದ್ದಾರೆ. ಇದು ಪ್ರಧಾನಿ ಮೋದಿ ಅವರಿಗೆ ತಿಳಿದಿಲ್ಲವೇ. ಈ ಭ್ರಷ್ಟಾಚಾರದ ಆರೋಪಗಳು ಕಾಂಗ್ರೆಸ್ ಮಾಡಿದ ರಾಜಕೀಯ ಪ್ರೇರಿತ ಆರೋಪವಲ್ಲ. ಬದಲಾಗಿ ಸಾರ್ವಜನಿಕವಾಗಿ ಕೇಳಿಬಂದಿರುವ ಆರೋಪ. ಇಷ್ಟಾದರೂ ಯಾರೊಬ್ಬರ ವಿರುದ್ಧವೂ ಶಿಸ್ತಿನ ಪಕ್ಷ ಶಿಸ್ತು ಕ್ರಮಕ್ಕೆ ಮುಂದಾಗಿಲ್ಲ ಎಂದು ಕುಟುಕಿದರು.

ಬೃಹತ್ ಪ್ರಮಾಣದ ಸರಣಿ ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರ್ಕಾರವನ್ನು ಕೂಡಲೇ ವಜಾ ಮಾಡಿ ಜನಾದೇಶಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಕೆಪಿಎಸ್ಸಿ ಲಂಚ ಪ್ರಕರಣದಲ್ಲಿ ಡಿ.ಕೆ.ಸುರೇಶ್ ವಿರುದ್ಧ ಕೇಳಿಬಂದಿರುವ ಆರೋಪದ ಸತ್ಯಾಂಶ ಇದ್ದರೆ ನಿಮ್ಮದೇ ಸರ್ಕಾರ ಇದ್ದರೂ ಏಕೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next