ನವದೆಹಲಿ: “ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಎಂದಿಗೂ ಮೀಸಲಾತಿ ವಿರೋಧಿಯಲ್ಲ” ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ “ಮೇಕರ್ಸ್ ಆಫ್ ಮಾಡರ್ನ್ ದಲಿತ್ ಹಿಸ್ಟರಿ’ ಎಂಬ ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ಶತಮಾನಗಳಿಂದ ತುಳಿತಕ್ಕೊಳಗಾಗಿದ್ದ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ನೀಡಿ ಅವರನ್ನು ಮೇಲೆತ್ತಿದ್ದು ಒಂದು ಸಕಾರಾತ್ಮಕ ವಿಚಾರ.
ಹಾಗಾಗಿ, ಮೀಸಲಾತಿ ಎಂಬುದೊಂದು ಐತಿಹಾಸಿಕ ಅವಶ್ಯಕತೆ. ಶೋಷಣೆಗೆ ಒಳಗಾಗಿದ್ದ ಸಮುದಾಯಗಳ ಪರಿಪೂರ್ಣ ಅಭಿವೃದ್ಧಿಯಾಗುವವರೆಗೆ ಮೀಸಲಾತಿ ಸೌಕರ್ಯ ಮುಂದುವರಿಯಬೇಕು. ಮೀಸಲಾತಿಗೆ ಆರ್‌ಎಸ್‌ಎಸ್ ಬೆಂಬಲ ಸದಾ ಇದ್ದೇ ಇರುತ್ತದೆ” ಎಂದರು.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ ನಲ್ಲಿ ಅಶಿಸ್ತು ಪ್ರದರ್ಶನ : ಕುಸ್ತಿಪಟು ಪೋಗಟ್ ಅಮಾನತು
“ದಲಿತರ ಇತಿಹಾಸವಿಲ್ಲದೆ ಭಾರತದ ಇತಿಹಾಸವಿಲ್ಲ. ದಲಿತರು ಭಾರತೀಯ ಇತಿಹಾಸದ ಅವಿಭಾಜ್ಯ ಅಂಗ” ಎಂದ ಅವರು, “”ಸಾಮಾಜಿಕ ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆಗಳು ಆರ್‌ಎಸ್‌ಎಸ್‌ನ ರಾಜಕೀಯ ದಾಳಗಳಲ್ಲ. ಅವು, ಸಮಗ್ರ ಭಾರತದಲ್ಲಿ ನಾವಿಟ್ಟ ನಂಬಿಕೆಯ ಪ್ರತೀಕ” ಎಂದು ತಿಳಿಸಿದರು.