ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ತನ್ನ ಸಹವರ್ತಿ ಸಂಘಟನೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಪದಾಧಿಕಾರಿಗಳ ಹುದ್ದೆಗೆ ನೇಮಿಸಲು ನಿರ್ಧರಿಸಿದೆ.
ಸಂಘಟನೆಯ ಪದಾಧಿಕಾರಿಗಳ ಹುದ್ದೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರೇ ಇದ್ದಾರೆ ಎಂಬ ಭಾವನೆಯನ್ನು ತೊಡೆದುಹಾಕಲು ಆರ್‌ಎಸ್‌ಎಸ್ ಈ ಚಿಂತನೆ ನಡೆಸಿದೆ ಎನ್ನಲಾಗಿದೆ.
ತನ್ನ ವಿವಿಧ ಸಂಘಟನೆಗಳಲ್ಲಿ ಶೇ.33ರಿಂದ ಶೇ.50ರಷ್ಟು ಮಹಿಳಾ ಪದಾಧಿಕಾರಿಗಳನ್ನು ನೇಮಿಸಲು ಕಳೆದ ತಿಂಗಳು ರಾಯ್‌ಪುರದಲ್ಲಿ ನಡೆದ ಅಖಿಲ ಭಾರತೀಯ ಸಮನ್ವಯ ಬೈಠಕ್‌ನಲ್ಲಿ ತೀರ್ಮಾನಿಸಲಾಯಿತು ಎಂದು ಆರ್‌ಎಸ್‌ಎಸ್ ಮೂಲಗಳನ್ನು ಉಲ್ಲೇಖಿಸಿ “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಮಹಿಳೆಯರಿಗಾಗಿ ಆರ್‌ಎಸ್‌ಎಸ್‌ನಲ್ಲಿ ಪ್ರತ್ಯೇಕ ಸಂಘಟನೆ-“ರಾಷ್ಟ್ರೀಯ ಸೇವಿಕಾ ಸಮಿತಿ’ ಇದೆ. ಆದರೆ ತನ್ನ ಇತರ ಸಂಘಟನೆಗಳಾದ ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಆರ್‌ಎಸ್‌ಎಸ್ ನಿರ್ಧರಿಸಿದೆ.
“ರಾಂಚಿಯಲ್ಲಿ ನಡೆದ ಸಭೆಯಲ್ಲಿ ಕೆಲವು ಶಾಖೆಗಳ ಮಹಿಳಾ ಪದಾಧಿಕಾರಿಗಳಿಗೆ ವಾರ್ಷಿಕ ವರದಿ ಮಂಡಿಸಲು ಅವಕಾಶ ಕಲ್ಪಿಸಲಾಗಿತ್ತು. ಆರ್‌ಎಸ್‌ಎಸ್ ಪುರುಷ ಪ್ರಧಾನ ಸಂಘಟನೆ ಎಂದು ಹಾಗೂ ಪುರುಷರು ಮತ್ತು ಮಹಿಳೆಯರ ಚಟುವಟಿಕೆಗಳನ್ನು ಪ್ರತ್ಯೇಕಿಸಲಾಗುತ್ತದೆ ಎಂದು ವಿರೋಧಿಗಳು ಟೀಕಿಸುತ್ತಾರೆ.
2025ಕ್ಕೆ ಸಂಘ ಶತಮಾನೋತ್ಸವ ಆಚರಿಸುತ್ತಿದೆ. ಈ ವೇಳೆಗೆ ಸಂಘದ ಇಮೇಜ್ ಬದಲಾಯಿಸುವ ನಿಟ್ಟಿನಲ್ಲಿ ಪ್ರಮುಖ ಸ್ಥಾನಗಳಿಗೆ ಹೆಚ್ಚಿನ ಮಹಿಳಾ ಕಾರ್ಯಕರ್ತರನ್ನು ನೇಮಿಸಲು ಉದ್ದೇಶಿಸಲಾಗಿದೆ,’ ಎಂದು ಅವರು ಮಾಹಿತಿ ನೀಡಿದ್ದಾರೆ.