ಹೈದರಾಬಾದ್: ಸಂಘ ಪರಿವಾರವು ಯಾವತ್ತೂ ಮೀಸಲಾತಿಯನ್ನು ವಿರೋಧಿಸಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ. ಮೀಸಲಾತಿ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ಮುಂದುವರಿದಿರುವಂತೆಯೇ ಭಾಗವತ್ ಅವರು ನೀಡಿರುವ ಈ ಸ್ಪಷ್ಟನೆ ಮಹತ್ವ ಪಡೆದಿದೆ.
ಹೈದರಾಬಾದ್‌ನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅವರು, “ಎಲ್ಲಿಯವರೆಗೆ ಮೀಸಲಾತಿ ಅಗತ್ಯವಿದೆಯೋ, ಅಲ್ಲಿಯವರೆಗೂ ಅದನ್ನು ವಿಸ್ತರಿಸಬೇಕು ಎನ್ನುವುದು ಸಂಘದ ಅಭಿಪ್ರಾಯವಾಗಿದೆ. ಮೀಸಲಾತಿ ಜಾರಿಗೆ ಬಂದಾಗಿನಿಂದಲೂ ಸಂವಿಧಾನದ ಅನ್ವಯ ಸಂಘವು ಅದನ್ನು ಸಂಪೂರ್ಣವಾಗಿ ಬೆಂಬಲಿಸಿದೆ’ ಎಂದಿದ್ದಾರೆ.
2025ಕ್ಕೆ ಆರೆಸ್ಸೆಸ್‌ಗೆ 100 ವರ್ಷ ತುಂಬಲಿದ್ದು, ಆ ವೇಳೆಗೆ ಮೀಸಲಾತಿಯನ್ನು ಬಿಜೆಪಿ ರದ್ದು ಮಾಡಲಿದೆ ಎಂದು ಇತ್ತೀಚೆಗಷ್ಟೇ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದರು. ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಕಾಂಗ್ರೆಸ್ ನಾಯಕರು ಕೂಡ “ಆರೆಸ್ಸೆಸ್, ಬಿಜೆಪಿ ಮೀಸಲಾತಿ ವಿರೋಧಿ’ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಭಾಗವತ್‌ರಿಂದ ಈ ಹೇಳಿಕೆ ಹೊರಬಿದ್ದಿದೆ.
ಮೀಸಲು ಟೀಕಿಸುತ್ತಿದ್ದ ಭಾಗವತ್ ಈಗ ಯೂಟರ್ನ್: ರಾಹುಲ್
ದಮನ್: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ಹಿಂದಿನಿಂದಲೂ ಮೀಸಲಾತಿ ವಿರೋಧಿಸುತ್ತಾ ಬಂದಿದ್ದರು. ಆದರೆ ಈಗ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರಾಡಳಿತ ಪ್ರದೇಶ ದಮನ್-ದಿಯುನಲ್ಲಿ ಮಾತನಾಡಿದ ಅವರು, “ಕಾರ್ಯಕ್ರಮವೊಂದರಲ್ಲಿ ಭಾಗವತ್ ತಾವು ಮೀಸಲಾತಿ ಪರ ಎಂದಿದ್ದಾರೆ. ಆದರೆ ಈ ಹಿಂದೆ ಮೀಸಲು ಬೇಡ ಎಂದು ಅವರೇ ವಾದಿಸಿದ್ದರು. ಮೀಸಲು ವಿರೋಧಿಸುವವರನ್ನು ಪಕ್ಷಕ್ಕೆ ಸೇರಿಸಿಕೊಂಡು ಸ್ವಾಗತಿಸಿದ್ದು ಕೂಡ ಬಿಜೆಪಿಯವರೇ ಎಂದಿದ್ದಾರೆ.