ಮುಂಬೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅದ್ಭುತ ಗೆಲುವಿನ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕೆಲಸವನ್ನು ಶ್ಲಾಘಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಭಾಗವಾಗಿದ್ದ ಬಿಜೆಪಿ ಸ್ಪರ್ಧೆ ಮಾಡಿದ್ದ 149 ಕ್ಷೇತ್ರಗಳಲ್ಲಿ 132 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ ಇಂಡಿಯಾ ಬ್ಲಾಕ್ ನ ಭಾಗವಾಗಿದ್ದ ಶರದ್ ಪವಾರ್ ಅವರ ಎನ್ ಸಿಪಿ ಕೇವಲ 10 ಸ್ಥಾನಗಳನ್ನು ಗೆದ್ದುಕೊಂಡಿದೆ.
ಮೂಲಗಳ ಪ್ರಕಾರ, ಮುಂಬೈನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಆರ್ಎಸ್ಎಸ್ ನ ಕಾರ್ಯ ವಿಧಾನ ಮತ್ತು ಅದರ ಆಕ್ರಮಣಕಾರಿ ಹಿಂದುತ್ವ ಪ್ರಚಾರವು ಕಳೆದ ವರ್ಷ ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿನ ಹಿಂದಿನ ಪ್ರಮುಖ ಕಾರಣಗಳು ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ ಉತ್ತಮ ಮತ ಪಡೆದಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿತ್ತು.
ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ವಿಶ್ಲೇಷಿಸಿದ ಪವಾರ್, ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಎನ್ಸಿಪಿ (ಶರದ್ ಪವಾರ್ ಬಣ) ಸಂತೃಪ್ತವಾಯಿತು, ಆದರೆ ಅವರ ವಿರೋಧ ಪಕ್ಷಗಳು ಜನಪ್ರಿಯ ಯೋಜನೆಗಳನ್ನು ಘೋಷಿಸಲು ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಿಶ್ರಾಂತವಾಗಿ ಶ್ರಮಿಸಿದರು ಎಂದರು.
ಆರ್ಎಸ್ಎಸ್ ಕಾರ್ಯಕರ್ತರ ಬಗ್ಗೆ ಉದಾಹರಣೆ ನೀಡಿದ ಅವರು ತಳಮಟ್ಟದವರೆಗೂ ಸಂಘಟನೆಯ ನಿಖರ ಕೆಲಸವನ್ನು ಪವಾರ್ ಶ್ಲಾಘಿಸಿದರು.
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಸ್ಥಾನಗಳನ್ನು ನೀಡುವ ಗುರಿಯನ್ನು ಪಕ್ಷ ಹೊಂದಿದೆ ಎಂದು ಅವರು ಹೇಳಿದರು.