Advertisement

ಇಂದು ಆರೆಸ್ಸೆಸ್‌ ಸಭೆ: ಭಿನ್ನಮತ ಶಮನ ಸಾಧ್ಯತೆ ಕಡಿಮೆ

03:45 AM Jan 17, 2017 | Team Udayavani |

ಬೆಂಗಳೂರು: ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್‌ ಅಡಿಯಲ್ಲಿ ಬರುವ 30ಕ್ಕೂ ಹೆಚ್ಚು ಸಂಘಟನೆಗಳ ಸಮನ್ವಯ ಸಭೆ ಮಂಗಳವಾರ ನಡೆಯಲಿದೆ. ಸಂಘ ಪರಿವಾರ ಮತ್ತು ಬಿಜೆಪಿ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ನಡುವಿನ ಭಿನ್ನಮತ ಚರ್ಚೆಗೆ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಈ ಸಭೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Advertisement

ಬಿಜೆಪಿ, ಅದರ ವಿವಿಧ ಮೋರ್ಚಾಗಳು, ಭಾರತೀಯ ಮಜ್ದೂರ್‌ ಸಭಾ, ಭಜರಂಗದಳ, ಎಬಿವಿಪಿ ಸೇರಿದಂತೆ ಆರ್‌ಎಸ್‌ಎಸ್‌ ಅಡಿ ಬರುವ 30ಕ್ಕೂ ಹೆಚ್ಚು ಸಂಘಟನೆಗಳ ವಾರ್ಷಿಕ ಚಟುವಟಿಕೆಗಳ ಕುರಿತ ಸಮಾಲೋಚನೆಗಾಗಿ ಈ
ಸಭೆ ಕರೆಯಲಾಗಿದೆ. ಇದು ವರ್ಷಕ್ಕೆ 2 ಬಾರಿ ನಡೆಯುವ ಸಭೆಯಾದರೂ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ತೀವ್ರಗೊಳ್ಳುತ್ತಿರುವ ಭಿನ್ನಾಭಿಪ್ರಾಯದಿಂದಾಗಿ ಈ ಬಾರಿಯ ಸಭೆ ಹೆಚ್ಚು ಮಹತ್ವ ಪಡೆದಿದೆ.

ಬಿಎಸ್‌ವೈ ಈಶ್ವರಪ್ಪ ಈ ಸಭೆಯಲ್ಲಿ ಪಾಲ್ಗೊಳ್ಳುವುದು ಖಚಿತ. ಆದರೆ, ಸಭೆಯಲ್ಲಿ ಅವರಿಬ್ಬರು ಮುಖಾಮುಖೀಯಾಗಬಹುದೇ ಹೊರತು ಭಿನ್ನಾಭಿಪ್ರಾಯ ಶಮನ ಬಗ್ಗೆ ಯಾವುದೇ ಚರ್ಚೆ ಅಥವಾ ತೀರ್ಮಾನ ಆಗುವ
ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಏಕೆಂದರೆ, ಯುಗಾದಿಯಿಂದ ಯುಗಾದಿ ನಡುವಿನ ಹಿಂದು ವರ್ಷದಲ್ಲಿ ಆರ್‌ಎಸ್‌ಎಸ್‌ ಇಂತಹ ಎರಡು ಸಭೆಗಳನ್ನು ಕರೆಯುತ್ತದೆ. ಇದು ಈ ವರ್ಷದ ಕೊನೆಯ ಸಭೆಯಾಗಿದ್ದು, ಕಳೆದ
ಯುಗಾದಿಯಿಂದ ಇದುವರೆಗೆ ಸಂಘಟನೆಗಳು ಕೈಗೊಂಡಿರುವ ಕಾರ್ಯಕ್ರಮಗಳು, ಅವುಗಳ ಚಟುವಟಿಕೆಗಳ ಕುರಿತು ಆರ್‌ಎಸ್‌ಎಸ್‌ ಮುಖಂಡರು ಮಾಹಿತಿ ಪಡೆಯುತ್ತಾರೆ. ಜತೆಗೆ, ಮುಂದಿನ 6 ತಿಂಗಳ ಅವಧಿಗೆ ಸಿದ್ಧಪಡಿಸಿರುವ
ಕಾರ್ಯಕ್ರಮಗಳ ನೀಲನಕ್ಷೆಗಳ ಕುರಿತು ಪರಾಮರ್ಶೆ ಮಾಡುತ್ತಾರೆ. ಉಳಿದಂತೆ ವೈಯಕ್ತಿಕ ವಿಚಾರಗಳ ಚರ್ಚೆಗೆ ಅವಕಾಶವಿಲ್ಲ.

ಬಿಜೆಪಿ ಪಾಲಿಗೆ ಮಹತ್ವದ ಸಭೆ: ಬ್ರಿಗೇಡ್‌ಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ತಿಕ್ಕಾಟ ಗಂಭೀರ ಹಂತಕ್ಕೆ ತಲುಪಿರುವುದು ಮತ್ತು ಬಿಎಸ್‌ವೈ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಅವರಿಗೆ ನೇರವಾಗಿ ಪತ್ರ ಬರೆದಿರುವುದು ಇತ್ತೀಚಿನ ಪ್ರಮುಖ ಬೆಳವಣಿಗೆ. ಹೀಗಾಗಿ ಈ ವಿಚಾರಗಳು ಮಂಗಳವಾರದ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಆದರೆ, ಯಾವುದೇ ಫ‌ಲಿತಾಂಶ ಹೊರಬೀಳುವ ಸಾಧ್ಯತೆ ಇಲ್ಲ ಅಥವಾ ಅಸಮಾಧಾನ ಶಮನಪಡಿಸುವ ಪ್ರಯತ್ನಗಳೂ ನಡೆಯುವುದಿಲ್ಲ ಎಂದು ಮೂಲಗಳು ಹೇಳಿವೆ.

ಆದರೂ ಪಕ್ಷದ ವಲಯದಲ್ಲಿ ಮಂಗಳವಾರದ ಸಭೆಯ ಬಗ್ಗೆ ಕುತೂಹಲ ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next