Advertisement

ಆರೆಸ್ಸೆಸ್‌ ಕೈಯಲ್ಲಿ ಕೇಂದ್ರದ ಆಡಳಿತ: ರಾಹುಲ್‌

08:37 AM Feb 14, 2018 | Team Udayavani |

ಕಲಬುರಗಿ: ಕೇಂದ್ರ ಸರ್ಕಾರದ ಯಾವುದೇ ಯೋಜನೆ ಹಾಗೂ ಕಾರ್ಯಕ್ರಮ ಜಾರಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಪ್ರಮುಖವಾಗಿ ಪಾತ್ರ ನಿರ್ವಹಿಸುತ್ತಿದೆ ಎಂದು ಎಐಸಿಸಿಐ ಅಧ್ಯಕ್ಷ ರಾಹುಲ್‌ ಗಾಂಧಿ ಬಲವಾಗಿ ಆರೋಪಿಸಿದರು.

Advertisement

ನಗರದ ಎಚ್‌ಕೆಇ ಸಂಸ್ಥೆ ಸಭಾಂಗಣದಲ್ಲಿ ನವ ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಗಣ್ಯರೊಂದಿಗೆ ಮಂಗಳವಾರ ಸಂವಾದ ನಡೆಸಿದ ಅವರು, ಯೋಜನೆ ಹಾಗೂ ಕಾರ್ಯಕ್ರಮ ಜಾರಿಯಲ್ಲದೇ ಕೇಂದ್ರ ಸರ್ಕಾರದ ಪ್ರತಿ ಇಲಾಖೆಗೂ ಆರ್‌ಎಸ್‌ಎಸ್‌ ಮಾರ್ಗದರ್ಶಕರೂ ಇದ್ದಾರೆ. ಇದೆಲ್ಲವನ್ನು ನವ ಉದ್ಯಮಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ನೋಟು ಬ್ಯಾನ್‌ ಮಾಡುವ ಸಂಬಂಧ ಆರ್‌ಬಿಐ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳು ಎಲ್ಲೂ ಹೇಳಿಲ್ಲ. ಅಷ್ಟೇ ಏಕೆ ಹಣಕಾಸು ಖಾತೆ ಸಚಿವ ಅರುಣ್‌ ಜೇಟ್ಲಿ ಸಹ ಸಲಹೆ ನೀಡಿಲ್ಲ ಎಂದಾದ ಮೇಲೆ ರಾತೋರಾತ್ರಿ ಪ್ರಧಾನ ಮಂತ್ರಿ ಮೋದಿ ಅವರು ಆರ್‌ಎಸ್‌ಎಸ್‌ ವ್ಯಕ್ತಿಯೊಬ್ಬರು ನೀಡಿದ್ದ ಸಲಹೆ ಅನುಷ್ಠಾನಗೊಳಿಸಿದರು. ಇದರಿಂದ ಕಾಳಧನಿಕರ ಬಳಿ ಇದ್ದ ಕಪ್ಪು ಹಣ ಬಿಳಿಯಾಗಿಸಿದರು. ಜಿಎಸ್‌ಟಿ ಜಾರಿ ಮುನ್ನ ಪ್ರಾಯೋಗಿಕವಾಗಿ ಪರೀಕ್ಷೆ ಸಹ ನಡೆಸಲಿಲ್ಲ. ಒಂದು ತಂತ್ರಾಂಶ ಸಹ ಕೇಂದ್ರದ ಬಳಿ ಇರ ಲಿಲ್ಲ. ಅದೇ ರೀತಿ ವೈದ್ಯಕೀಯ ಕ್ಷೇತ್ರದಲ್ಲೂ ಹೊಸ ನೀತಿಯೊಂದನ್ನು ಚರ್ಚೆ- ಅಭಿಪ್ರಾಯ ಪಡೆಯದೇ ಜಾರಿಗೆ ಮುಂದಾಗುತ್ತಿದೆ. ಒಟ್ಟಾರೆ ಇದೇ ಮೋದಿ ಅವರ ಆರ್ಥಿಕ ಸುಧಾರಣೆ ಎಂದು ಜರಿದರು.

ಜಿಎಸ್‌ಟಿ ಸರಳೀಕರಣ: ಜಿಎಸ್‌ಟಿ ಸರಳವಾಗಿದೆಯೋ ಇಲ್ಲ ಕ್ಲಿಷ್ಟಕರವಾಗಿದೆ ಎಂದು ರಾಹುಲ್‌ ಗಾಂಧಿ ಅವರೇ ಸಂವಾದದಲ್ಲಿ ಪಾಲ್ಗೊಂಡವರನ್ನು ಪ್ರಶ್ನಿಸಿದರು. ಎಲ್ಲರೂ ಕ್ಲಿಷ್ಟಕರವಾಗಿದೆ ಎಂದು ಘೋಷಣೆ ಕೂಗಿ ಹೇಳಿದರು. ಇದಕ್ಕೆ ರಾಹುಲ್‌ ಗಾಂಧಿ, ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಜಿಎಸ್‌ಟಿಯಲ್ಲಿರುವ ಗೊಂದಲ ನಿವಾರಿಸಿ ಸರಳೀಕರಣಗೊಳಿಸಲಾಗುವುದು ಎಂದರು. ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿಐ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಇದ್ದರು. ಐಟಿಬಿಟಿ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಸಂವಾದ ನಡೆಸಿಕೊಟ್ಟರು.

ಮದುವೆ ಕುರಿತುತೂರಿ ಬಂದ ಪ್ರಶ್ನೆ
ಸಂವಾದದಲ್ಲಿ ಮೊದಲೇ ನಿಗದಿಯಾಗಿದ್ದ 7 ಪ್ರಶ್ನೆಗಳಿಗೆ ರಾಹುಲ್‌ ತಕ್ಕಮಟ್ಟಿಗೆ ಉತ್ತರ ನೀಡಿದರು. ಅಲ್ಲದೇ ಮಹಿಳಾ ನ್ಯಾಯವಾದಿಯೊಬ್ಬರು ಸಲಹೆ ನೀಡಿ ಕೇಳಲಾದ ಪ್ರಶ್ನೆಗೆ ತಲೆದೂಗಿದರು. ಇದರ ನಡುವೆ ಯುವಕನೊಬ್ಬ, ರಾಹುಲ್‌ಜೀ ಮದುವೆ ಯಾವಾಗ ಆಗುತ್ತೀರಿ ಎಂದು ಕೇಳಿದ. ಇದನ್ನು ಕೇಳಿಸಿಕೊಂಡ ರಾಹುಲ್‌, ಥ್ಯಾಂಕು ವೆರಿ ಮಚ್‌ ಎಂದು ಹೇಳಿದರಷ್ಟೇ. ವೇದಿಕೆ ಮೇಲಿರುವವರೂ ಇದನ್ನೇ ಕೇಳಿದ್ದಾರೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರತ್ತ ನೋಡಿ ಮುಗುಳ್ನಗೆ ಬೀರಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next