ವಾಡಿ (ಚಿತ್ತಾಪುರ): ಸ್ವಾತಂತ್ರ್ಯ ಸಿಕ್ಕು ಐವತ್ತು ವರ್ಷಗಳ ನಂತರವೂ ಕಚೇರಿಗಳ ಮೇಲೆ ತ್ರೀವರ್ಣ ಬಾವುಟ ಹಾರಿಸದ ಆರ್ ಎಸ್ ಎಸ್ ಪಕ್ಕಾ ದೇಶದ್ರೋಹಿಗಳಿರುವ ಸಂಘಟನೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಚಿತ್ತಾಪುರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ತಿರಂಗಾ ಅಪಶಕುನ ಎಂದು ಭಾವಿಸಿ ಆರ್‌ಎಸ್‌ಎಸ್ ಧ್ವಜಾರೋಹಣ ಮಾಡಿರಲಿಲ್ಲ. ಕೋಮುವಾದಿಗಳು ಇತ್ತೀಚೆಗೆ ದೇಶಭಕ್ತಿಯ ಮಾತನಾಡಲು ಶುರುಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಕೊಡುಗೆಯನ್ನು ದೇಶದ ಜನತೆ ಮರೆತಿಲ್ಲ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಸ್ಮರಿಸುತ್ತಲೇ ಸಾವರ್ಕರ್ ರನ್ನು ದೇಶಭಕ್ತ ಎಂದು ಬಿಂಬಿಸಲು ಹೊರಟಿರುವ ಬಿಜೆಪಿಗೆ ಸ್ವಾತಂತ್ರ್ಯ ಸಂಭ್ರಮಾಚರಿಸುವ ಯಾವ ನೈತಿಕತೆಯೂ ಇಲ್ಲ. ನಿಜವಾದ ದೇಶಭಕ್ತರು ನಾವು ಕಾಂಗ್ರೆಸ್ ನವರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಮೊಟ್ಟೆ ಎಸೆದಿರುವುದನ್ನು ಒಪ್ಪಲಾಗದು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಡಾ.ಅಜಯಸಿಂಗ್, ಮಾಜಿ ಸಚಿವ ಬಾಬುರಾವ ಚವ್ಹಾಣ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ, ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ಸಾಲಿ, ಸೈಯದ್ ಮಹೆಮೂದ್ ಸಾಹೇಬ ಸೇರಿದಂತೆ ಎರಡು ಸಾವಿರ ಕಾರ್ಯಕರ್ತರು ಪಾಲ್ಗೊಂಡಿದ್ದರು.