Advertisement

RSS ಜ್ಯೇಷ್ಠ ಪ್ರಚಾರಕ ಮದನ್‌ ದಾಸ್‌ ದೇವಿ ನಿಧನ

09:50 PM Jul 24, 2023 | Team Udayavani |

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಮದನ್‌ ದಾಸ್‌ ದೇವಿ (81) ಅವರು ಜು. 24ರಂದು ಮುಂಜಾನೆ ಬೆಂಗಳೂರಿನಲ್ಲಿ ಹೃದಯಸ್ತಂಭನಕ್ಕೀಡಾಗಿ ನಿಧನ ಹೊಂದಿದರು.

Advertisement

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ವಯೋಸಹಜ ವಿಶ್ರಾಂತಿ ಮತ್ತು ಆರೈಕೆಯಲ್ಲಿದ್ದರು.

ಸಂಘದ ಸಹ ಸರಕಾರ್ಯವಾಹರಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿಯಾಗಿ ಹಲವು ಕೊಡುಗೆಗಳನ್ನು ನೀಡಿರುವ ಅವರ ನಿಧನಕ್ಕೆ ಆರೆಸ್ಸೆಸ್‌ ಸರಸಂಘಚಾಲಕ ಡಾ| ಮೋಹನ್‌ ಭಾಗವತ್‌, ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

“ಕೇಶವ ಕೃಪಾ’ಕ್ಕೆ ಆಗಮಿಸಿದ ಆರೆಸ್ಸೆಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹಸರಕಾರ್ಯವಾಹ ಸಿ.ಆರ್‌.ಮುಕುಂದ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಸೇತು ಮಾಧವನ್‌, ಪರ್ಯಾವರಣ್‌ ಸಂರಕ್ಷಣೆ ಗತಿವಿಧಿಯ ಅಖಿಲ ಭಾರತೀಯ ಸಂಯೋಜಕ ಗೋಪಾಲ ಆರ್ಯನ್‌, ವಿಶ್ವ ಹಿಂದೂ ಪರಿಷತ್‌ ಕೇಂದ್ರೀಯ ಕಾರ್ಯದರ್ಶಿ ಸ್ಥಾಣುಮಾಲಯನ್‌, ಹಿರಿಯ ಸಾಮಾಜಿಕ ಕಾರ್ಯಕರ್ತ ವೈ.ಕೆ.ರಾಘವೇಂದ್ರ ರಾವ್‌, ಎಬಿವಿಪಿಯ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಪ್ರಫ‌ುಲ್ಲ ಆಕಾಂತ್‌, ಚಾಣಕ್ಯ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಂ.ಕೆ.ಶ್ರೀಧರ್‌, ರಾಷ್ಟ್ರೋತ್ಥಾನ ಪರಿಷತ್‌ ಅಧ್ಯಕ್ಷ ಎಂ.ಪಿ.ಕುಮಾರ್‌, ಪ್ರಧಾನ ಕಾರ್ಯದರ್ಶಿ ದಿನೇಶ್‌ ಹೆಗ್ಡೆ, ಚಿಂತಕ ಪ್ರೊ| ಕೆ.ಇ.ರಾಧಾಕೃಷ್ಣ, ಮಾಜಿ ಸಚಿವರಾದ ಪಿ.ಜಿ.ಆರ್‌ ಸಿಂಧ್ಯಾ, ಎಸ್‌. ಸುರೇಶಕುಮಾರ್‌, ಡಾ| ಅಶ್ವತ್ಥನಾರಾಯಣ, ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರು ಅಂತಿಮ ದರ್ಶನ ಪಡೆದರು. ಜು.25ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಮಹಾರಾಷ್ಟ್ರದ ಪುಣೆಯ ವೈಕುಂಠ ಶ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

1942ರ ಜು.9ರಂದು ಜನಿಸಿದ್ದ ಮದನ್‌ ದಾಸ್‌ ದೇವಿ ಅವರು ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರ್ಮಾಳ ಗ್ರಾಮಕ್ಕೆ ಸೇರಿದವರು.

Advertisement

ಮೋದಿ ಏಳಿಗೆಯಲ್ಲಿ ಪ್ರಧಾನ ಪಾತ್ರ
ಪ್ರಧಾನಿ ನರೇಂದ್ರ ಮೋದಿಯವರ ಏಳಿಗೆಯಲ್ಲಿ ಮದನ್‌ ದಾಸ್‌ ದೇವಿ ಪ್ರಧಾನ ಪಾತ್ರ ವಹಿಸಿದ್ದರು. ನರೇಂದ್ರ ಮೋದಿಯವರನ್ನು ಗುಜರಾತಿನ ಸಿಎಂ ಆಗಿ ಆಯ್ಕೆ ಮಾಡುವ ನಿರ್ಧಾರದ ಹಿಂದೆ ಇವರ ಪಾತ್ರವೂ ಇದೆ ಎಂದು ಹೇಳಲಾಗಿದೆ.

ಶಾಲಾ ಶಿಕ್ಷಣದ ನಂತರ 1959 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಪುಣೆಯ ಪ್ರಸಿದ್ಧ ಬಿಎಂಸಿಸಿ ಕಾಲೇಜಿನಲ್ಲಿ ಪ್ರವೇಶ ಪಡೆದರು. ಎಂಕಾಂ ಬಳಿಕ ಐಎಲ್‌ಎಸ್‌ ಕಾನೂನು ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಎಲ್‌ಎಲ್‌ಬಿ ವ್ಯಾಸಂಗ ಪೂರ್ಣಗೊಳಿಸಿದರು. ನಂತರ ಸಿಎ ಮಾಡಿದರು. ಪುಣೆಯಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಸಮಯದಲ್ಲಿ ಹಿರಿಯ ಸಹೋದರ ಖುಶಾಲ್ದಾಸ್‌ ದೇವಿಯವರ ಪ್ರೇರಣೆಯಿಂದ ಸಂಘದ ಸಂಪರ್ಕಕ್ಕೆ ಬಂದರು.

1964 ರಿಂದ ಮುಂಬೈನಲ್ಲಿ ಎಬಿವಿಪಿಯ ಕೆಲಸವನ್ನು ಪ್ರಾರಂಭಿಸಿದರು. 1966ರಲ್ಲಿ ಎಬಿವಿಪಿ ಮುಂಬೈನ ಕಾರ್ಯದರ್ಶಿಯಾದರು. 1968 ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕರ್ಣಾವತಿ ರಾಷ್ಟ್ರೀಯ ಸಮಾವೇಶದಲ್ಲಿ ಪೂರ್ಣಾವಧಿ ಕಾರ್ಯಕರ್ತರಾದರು. ಅದೇ ದಿನ ಅವರಿಗೆ ಪಶ್ಚಿಮಾಂಚಾಲ ಕ್ಷೇತ್ರೀಯ ಸಂಘಟನಾ ಮಂತ್ರಿಯಾಗಿ ಜವಾಬ್ದಾರಿಯನ್ನು ಘೋಷಿಸಲಾಯಿತು.

1970ರಿಂದ 1992ರವರೆಗೆ ಸತತ 22 ವರ್ಷಗಳ ಕಾಲ ಎಬಿವಿಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಯಾಗಿದ್ದರು. ದೇಶಾದ್ಯಂತ ತಾಲೂಕು, ಮಹಾವಿದ್ಯಾಲಯ ಮತ್ತು ನಗರ ಮಟ್ಟದಲ್ಲಿ ಸುಸಂಸ್ಕೃತ ಕಾರ್ಯಕರ್ತರ ತಂಡದ ಸ್ಥಾಪನೆಗೆ ವಿಶೇಷ ಗಮನ ಹರಿಸಿದ್ದರು. ಸಂಘಟನೆಯ ಅಡಿಗಲ್ಲಿನಂತೆ ಕಾರ್ಯನಿರ್ವಹಿಸಿ ಎಬಿವಿಪಿಯನ್ನು ಹೆಸರಿಗೆ ತಕ್ಕಂತೆ ಅಖೀಲ ಭಾರತ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾದರು. ದೇಶಾದ್ಯಂತ ಅನೇಕ ಸಮರ್ಪಿತ ಕಾರ್ಯಕರ್ತರನ್ನು ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

1991 ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ್‌ ಆಗಿ ಮತ್ತು 1993ರಲ್ಲಿ ಸಂಘದ ಸಹ-ಸರಕಾರ್ಯವಾಹರಾಗಿ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದರು. 2009ರಲ್ಲಿ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ಸ್ವೀಕರಿಸಿದ್ದರು.

ಮದನ್‌ ದಾಸ್‌ ದೇವಿ ಅವರ ಅಗಲಿಕೆಯಿಂದ ನಾವೆಲ್ಲರೂ ಓರ್ವ ಜ್ಯೇಷ್ಠ ಸಯೋಗಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಸುಖ, ದುಃಖಗಳ ಚಿಂತೆ ಮಾಡದೆ ಕರ್ತವ್ಯ ಮಾರ್ಗದಲ್ಲಿ ಸತತ ಮುಂದೆ ಸಾಗುವ ಪ್ರತ್ಯಕ್ಷ ಸಾಕ್ಷಿಯ ರೂಪದಲ್ಲಿ ಮದನ್‌ ದಾಸ್‌ ಅವರ ಜೀವನ ನೆಮ್ಮಲ್ಲರ ಮುಂದಿದೆ. ಅವರ ಆಗಲಿಕೆಗೆ ವೈಯುಕ್ತವಾಗಿ ಮತ್ತು ಸಂಘದ ಪರವಾಗಿ ಶ್ರದ್ಧಾಂಜಲಿ ಸಮರ್ಪಣೆ ಮಾಡುತ್ತೇನೆ’.
– ಮೋಹನ್‌ ಭಾಗವತ್‌, ಸರಸಂಘಚಾಲಕ್‌

ಮದನ್‌ ದಾಸ್‌ ದೇವಿ ಅವರ ದೇಹಾವಸಾನದಿಂದ ಅತ್ಯಂತ ದುಃಖವಾಗಿದೆ. ಇಡೀ ಜೀವವನ್ನು ರಾಷ್ಟ್ರಸೇವೆಗೆ ಮುಡುಪಿಟ್ಟಿದ್ದರು. ಅವರೊಂದಿಗಿನ ಒಡನಾಟದಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ನರೇಂದ್ರ ಮೋದಿ, ಪ್ರಧಾನಮಂತ್ರಿ

ಆರೆಸ್ಸೆಸ್‌ ಪ್ರಚಾರಕರು, ಹಿಂದಿನ ಸಹಸರಕಾರ್ಯವಾಹರೂ ಆಗಿದ್ದ ಮದನ್‌ ಮೋಹನ್‌ ದೇವಿ ಅವರ ನಿಧನವು ಆಘಾತಕರ. ಎಬಿವಿಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಅವರ ನಿಧನವು ಅತ್ಯಂತ ದುಃಖ ನೋವು ತಂದಿದೆ.
-ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

 

Advertisement

Udayavani is now on Telegram. Click here to join our channel and stay updated with the latest news.

Next