ಹೊಸದಿಲ್ಲಿ: ದೇಶದ ಐಟಿ ದಿಗ್ಗಜ ಇನ್ಫೋಸಿಸ್ ಕಂಪೆನಿ ಕುರಿತು “ಪಾಂಚಜನ್ಯ’ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನಕ್ಕೆ ಸಂಬಂಧಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ರವಿವಾರ ಸ್ಪಷ್ಟನೆ ನೀಡಿದೆ.
ಭಾರತದ ಅಭಿವೃದ್ಧಿಯಲ್ಲಿ ಇನ್ಫೋಸಿಸ್ ಮಹತ್ತರ ಪಾತ್ರವನ್ನು ವಹಿಸಿದೆ. ಪಾಂಚಜನ್ಯ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ವಿಚಾರವು ಅದನ್ನು ಬರೆದವರ ವೈಯಕ್ತಿಕ ಅಭಿಪ್ರಾಯವೇ ಹೊರತು ಅದು ಆರೆಸ್ಸೆಸ್‌ನ ಅಭಿಪ್ರಾಯವಲ್ಲ. ಅಲ್ಲದೇ ಪಾಂಚಜನ್ಯವು ಸಂಘದ ಅಧಿಕೃತ ಮುಖವಾಣಿಯೂ ಅಲ್ಲ ಎಂದು ಆರೆಸ್ಸೆ
ಸ್‌ನ ಅಖೀಲ ಭಾರತ ಪ್ರಚಾರ ಉಸ್ತುವಾರಿ ಹೊತ್ತಿರುವ ಸುನೀಲ್ ಅಂಬೇಕರ್ ಹೇಳಿದ್ದಾರೆ. “”ದೇಶದ ಪ್ರಗತಿಗೆ ಇನ್ಫೋಸಿಸ್ ಗಣನೀಯ ಕೊಡುಗೆ ನೀಡಿದೆ. ಕಂಪೆನಿ ನಿರ್ವಹಿಸುತ್ತಿರುವ ಪೋರ್ಟಲ್‌ಗೆ ಸಂಬಂಧಿಸಿ ಸಮಸ್ಯೆಯಿರಬಹುದು. ಆದರೆ ಪಾಂಚಜನ್ಯದ ಲೇಖನವು ಲೇಖಕನ ವೈಯಕ್ತಿಕ ಅಭಿಪ್ರಾಯ” ಎಂದಿದ್ದಾರೆ
ಏನಿದು ವಿವಾದ? :
ಆರೆಸ್ಸೆಸ್ ಮುಖವಾಣಿ ಎಂದು ಹೇಳಲಾದ ಪಾಂಚಜನ್ಯ ಮ್ಯಾಗಜಿನ್ ಇನ್ಫೋಸಿಸ್ ಕಂಪೆನಿ ವಿರುದ್ಧ ಕವರ್ ಸ್ಟೋರ್ ಪ್ರಕಟಿಸಿತ್ತು. ಅದರಲ್ಲಿ ಇನ್ಫಿ ಕಂಪೆನಿಯ ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಹಾಗೂ ಸರಕು ಮತ್ತು ಸೇವಾ ತೆರಿಗೆ ಪೋರ್ಟಲ್‌ನಲ್ಲಿ ಆಗಿರುವ ತಾಂತ್ರಿಕ ದೋಷ ಕುರಿತು ಪ್ರಸ್ತಾವಿಸಿ, “ಸರಕಾರದ ಯೋಜನೆಯನ್ನು ಇನ್ಫೋಸಿಸ್ ಹಾಳು ಮಾಡುತ್ತಿರುವುದು ಇದು ಮೊದಲೇನಲ್ಲ. ಈ ರೀತಿ ಸಮಸ್ಯೆ ಸೃಷ್ಟಿಸಿದ್ದರಿಂದ ಸರಕಾರದ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳುವಂಥ ಸ್ಥಿತಿ ಬಂದಿದೆ. ಇನ್ಫೋಸಿಸ್ ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ನಕ್ಸಲರು, ಎಡಪಂಥೀಯವಾದಿಗಳು, ದೇಶವಿರೋಧಿಗಳು ಹಾಗೂ ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಈ ಕಂಪೆನಿ ನೆರವಾಗುತ್ತಿದೆ’ ಎಂದು ಆರೋಪಿಸಲಾಗಿತ್ತು.