ಹೊಸದಿಲ್ಲಿ : ಋತುಚಕ್ರದ ವಯೋಗುಂಪಿನ ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸುವ ವಿಚಾರದಲ್ಲಿ ಆರ್‌ಎಸ್‌ಎಸ್ ತಾಲಿಬಾನ್ ಮತ್ತು ಖಾಲಿಸ್ಥಾನ್ ಉಗ್ರರಂತೆ ವರ್ತಿಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ.
ಸಿಪಿಐಎಂ ಪಾಲಿಟ್‌ಬ್ಯೂರೋ ಸದಸ್ಯರಾಗಿರುವ ಎಸ್ ರಾಮಚಂದ್ರ ಪಿಳ್ಳೆ ಅವರು “ಶಬರಿಮಲೆಯಲ್ಲಿ ಆರ್‌ಎಸ್‌ಎಸ್ ಅನಗತ್ಯವಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ’ ಎಂದು ಟೀಕಿಸಿದರು.
“ಶಬರಿಮಲೆಯಲ್ಲಿ ಆರ್‌ಎಸ್‌ಎಸ್ ನವರು ತಾಲಿಬಾನ್ ಮತ್ತು ಖಾಲಿಸ್ಥಾನ ಉಗ್ರರ ಹಾಗೆ ವರ್ತಿಸುತ್ತಿದ್ದಾರೆ. ಯಾಕಾದರೂ ಅವರು ಶಬರಿಮಲೆಯಲ್ಲಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ ? ನಿಜಕ್ಕಾದರೆ ಶಾಂತಿಗಾಗಿ ಅವರು ಸಾಧ್ಯವಿರುವುದನ್ನೆಲ್ಲ ಮಾಡಬೇಕಿತ್ತು. ಆದರೆ ಅವರದನ್ನು ಮಾಡುತ್ತಿಲ್ಲ’ ಎಂದು ಪಿಳ್ಳೆ ಕಿಡಿ ಕಾರಿದರು.
ಇದಕ್ಕೆ ಮೊದಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು “ಸಂಘ ಪರಿವಾರದವರು ಶಬರಿಮಲೆ ಯಾತ್ರಿಕರನ್ನು ಹರಕೆಯ ಕುರಿಗಳನ್ನಾಗಿ ಮಾಡುತ್ತಿದ್ದಾರೆ’ ಎಂದು ಹೇಳಿದ್ದರು.
“ಶಬರಿಮಲೆ ಹಿಂಸೆಯ ಕೇಂದ್ರವಾಗುವುದಕ್ಕೆ ನಮ್ಮ ಸರಕಾರ ಅವಕಾಶ ಕೊಡುವುದಿಲ್ಲ. ಯಾವುದೇ ಕಾರಣಕ್ಕೂ ನಮ್ಮ ಸರಕಾರ ಶಬರಿಮಲೆ ಸಂಕೀರ್ಣದಲ್ಲಿ ಹಿಂಸೆಗಿಳಿಯುವವರೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಸಿಎಂ ಪಿಣರಾಯಿ ಹೇಳಿದ್ದರು.