Advertisement

ಜಿಲ್ಲೆಯಲ್ಲಿ 7.48 ಲಕ್ಷ ರೂ. ವಶ

12:48 PM Apr 13, 2018 | |

ಮೈಸೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಈವರೆಗೆ 8.18 ಕೋಟಿ ರೂ. ನಗದು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಒಂದು ಕೆ.ಜಿ. ಚಿನ್ನಾಭರಣ, 7.48 ಲಕ್ಷ ರೂ. ನಗದು ಮತ್ತು 2.33 ಲಕ್ಷ ರೂ. ಮೌಲ್ಯದ ಮದ್ಯ ಸೇರಿ 8 ವಾಹನ, 2 ಸಾವಿರ ಭಿತ್ತಿಚಿತ್ರ ಮತ್ತು ಹಾಟ್‌ಬಾಕ್ಸ್‌, ವಾಟರ್‌ ಬಾಟಲ್‌ಗ‌ಳನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಈವರೆಗೂ 108 ಪ್ರಕರಣ ದಾಖಲಾಗಿದ್ದು, ಇದರಲ್ಲಿ 71 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದರು.

ಅಲ್ಲದೆ, ಕಳೆದ ಒಂದು ವಾರದಲ್ಲಿ ದಾಖಲಾದ 53 ಪ್ರಕರಣಗಳಲ್ಲಿ, 22 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಹುಣಸೂರಿನ ಫೇಸ್‌ಬುಕ್‌ ವಾರ್‌ ಹಾಗೂ ಕೆ.ಆರ್‌.ನಗರದಲ್ಲಿ ಹಣಹಂಚಿಕೆ ಮಾಡಿರುವ ಪ್ರಕರಣದ ಕುರಿತು ಎಫ್ಐಆರ್‌ ದಾಖಲಾಗಿದೆ ಎಂದು ಹೇಳಿದರು.

ಹೆಚ್ಚು ಸಿಬ್ಬಂದಿ ನಿಯೋಜನೆ: ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಗಳ ತಪಾಸಣೆ ನಡೆಸಲಾಗುತ್ತಿದ್ದು, ಜಿಲ್ಲಾ ಮಾರ್ಗದ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳ ಮೇಲೂ ಗಮನಹರಿಸಲಾಗಿದೆ. ಆದರೆ, ವಾಹನಗಳ ತಪಾಸಣೆ ವೇಳೆ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ತಪಾಸಣೆಗೆ ನಿಯೋಜಿಸಿ ಪ್ರವಾಸಿಗರಿಗೆ ಆಗುವ ಕಿರಿಕಿರಿ ತಪ್ಪಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ 49 ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದ್ದು, 93 ಪ್ಲೇಯಿಂಗ್‌ ಸ್ಕ್ವಾಡ್‌ಗಳನ್ನು ನೇಮಿಸಲಾಗಿದೆ. ತಾವು ಮತ್ತು ಜಿಪಂ ಸಿಇಒ ಅವರು ಎಲ್ಲಾ ಚೆಕ್‌ಪೋಸ್ಟ್‌ಗಳಿಗೆ ದಿಢೀರ್‌ ಭೇಟಿ ನೀಡಿ, ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನು ಪರಿಶೀಲಿಸಲಾಗಿದೆ ಎಂದರು.

Advertisement

7 ಅರೆ ಸೇನಾ ತುಕಡಿ: ಚುನಾವಣೆ ಹಿನ್ನಲೆಯಲ್ಲಿ ಆರ್‌ಎಎಫ್, ಎಸ್‌ಟಿಬಿಟಿಯ 7 ಅರೆ ಸೇನಾ ತುಕಡಿಗಳು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮೈಸೂರಿಗೆ ಆಗಮಿಸಿವೆ. ಇದರಲ್ಲಿ ನಗರಕ್ಕೆ ನಾಲ್ಕು ಹಾಗೂ ಗ್ರಾಮಾಂತರ ವಿಬಾಗಕ್ಕೆ ಮೂರು ತುಕಡಿಗಳನ್ನು ನಿಯೋಜಿಸಲಾಗಿದ್ದು, ಈ ತುಕಡಿಗಳು ಈಗಾಗಲೇ ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದಲ್ಲಿ ಪಥಸಂಚಲನ ನಡೆಸುವ ಮೂಲಕ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆವಹಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.

ನಿರೀಕ್ಷೆಗೂ ಮೀರಿದ ಸ್ಪಂದನೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಸಲಾದ ಮಿಂಚಿನ ನೋಂದಣಿ ಅಭಿಯಾನಕ್ಕೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಂತೆ ಅಭಿಯಾನದಲ್ಲಿ ಜಿಲ್ಲೆಯ 11 ವಿಧಾನಸಬಾ ಕ್ಷೇತ್ರಗಳ 2,687 ಮತಗಟ್ಟೆಗಳಿಂದ ಒಟ್ಟು 33,416 ಅರ್ಜಿಗಳು ಬಂದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಆರ್‌., ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next