ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರ ಭಾಗದಲ್ಲಿ ಭೂಮಾರ್ಗದ ಗೃಹಬಳಕೆ ಅನಿಲ ಜೋಡಣೆ ಕಾರ್ಯ ಪ್ರಗತಿಯಲ್ಲಿದ್ದು, ಈ ಯೋಜನೆ ಪೂರ್ಣಗೊಂಡ ನಂತರ ಕೇಂದ್ರ ಸರಕಾರದ ಅನುದಾನದಲ್ಲಿ ಅವಳಿ ನಗರದಲ್ಲಿ ಅಂದಾಜು 70 ಕೋಟಿ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಹೇಳಿದರು.
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 30ರಲ್ಲಿ ಬೆಂಗೇರಿಯ ಮುಖ್ಯ ರಸ್ತೆಯ ಸಿಸಿ ರಸ್ತೆ, ಶೆಟ್ಟರ ಕಾಲೋನಿ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ ಅನೇಕ ಭಾಗಗಳಲ್ಲಿ ಕುಡಿಯುವ ನೀರಿನ ಬವಣೆ ಇದೆ.
ಆದರೆ ಸಂಸದ ಪ್ರಹ್ಲಾದ ಜೋಶಿ ಹಾಗೂ ನಾನು ಜಲಮಂಡಳಿ ಅಧಿಕಾರಿಗಳೊಂದಿಗೆ ಪದೇ ಪದೇ ಸಭೆಗಳನ್ನು ನಡೆಸಿ, ಅವಳಿ ನಗರದ ಜನತೆಗೆ ನೀರಿನ ವ್ಯತ್ಯಯವಾಗದಂತೆ ಸಮರ್ಪಕ ನೀರು ಸರಬರಾಜು ಆಗುವಂತೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರತಿ ಕಾಲೋನಿಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಕೇಂದ್ರ ಸರಕಾರವು ದೇಶ, ನಾಡಿನ ಅಭಿವೃದ್ಧಿ ಪರವಾಗಿದೆ.
ಆದರೆ ರಾಜ್ಯ ಸರಕಾರವು ಹು-ಧಾ ಮಹಾನಗರ ಹಾಗೂ ರಾಜ್ಯದ ಇತರೆ ಭಾಗದ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದರು. ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ, ರವಿ ಮಳಗಿ, ರಾಜು ಕಾಳೆ, ಅಡಿವೆಪ್ಪ ಹೊಸಮನಿ, ಹಟೇಲಸಾಬ ಮುಲ್ಲಾ, ನಾಗಪ್ಪ ಬಾಳಿಕಾಯಿ, ರಾಜಪ್ಪ ಕಾಳೆ, ಚಂದ್ರು ಅಮಾತಿ, ಕಲ್ಲಪ್ಪ ಹೊಸಮನಿ, ಕಲ್ಲಪ್ಪ ಖಂಡೇಕರ, ಡಿ. ದೊಡ್ಡಮನಿ, ನಾರಾಯಣ ಕಾಳೆ ಮೊದಲಾದವರು ಇದ್ದರು.