Advertisement

ಬದಲಿ ನಿವೇಶನ ಹಂಚಿ 600 ಕೋಟಿ ಅವ್ಯವಹಾರ

06:35 AM Mar 20, 2019 | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರಾಜಕೀಯ ಪಕ್ಷವೊಂದರ ಮುಖಂಡರಿಗೆ 245 ಬದಲಿ ನಿವೇಶನ ಹಂಚಿಕೆ ಮಾಡಿ 600 ಕೋಟಿ ರೂ.ಗಳ ಅವ್ಯವಹಾರ ನಡೆಸಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

Advertisement

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹಗರಣ ಕುರಿತು 688 ಪುಟಗಳ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಮಾಜಿ ಸದಸ್ಯ ಹನುಮಂತೇಗೌಡ ಹಾಗೂ ಅವರ ಸಂಬಂಧಿಕರಿಗೆ ಬಿಡಿಎ ಆಯುಕ್ತರಾಗಿದ್ದ ಶ್ಯಾಂಭಟ್‌ ಅವರು 600 ಕೋಟಿ ರೂ. ಮೌಲ್ಯದ 245 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ದೂರಿದರು.

ಬಿಡಿಎ ವತಿಯಿಂದ ಎಚ್‌ಎಸ್‌ಆರ್‌ ಬಡಾವಣೆ, ಜ್ಞಾನಭಾರತಿ ಬಡಾವಣೆ, ಬನಶಂಕರಿ 6ನೇ ಹಂತದ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಈ ಬದಲಿ ನಿವೇಶನ ಹಂಚಿಕೆ ಮಾಡುವಾಗ ನಿಯಮ ಪಾಲಲಿಸಿಲ್ಲ. ಬಿಡಿಎ ಎಲ್ಲೆಲ್ಲಿ ಭೂ ಸ್ವಾಧೀನ ಮಾಡಿಕೊಳ್ಳುತ್ತದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದ ಹನುಮಂತೇಗೌಡ,

ಭೂ ಮಾಲೀಕರ ದಿಕ್ಕು ತಪ್ಪಿಸಿ ಜಿಪಿಎ ಮೂಲಕ ಸ್ವತ್ತುಗಳನ್ನು ಪಡೆದುಕೊಂಡು ಅದನ್ನು ತನ್ನ ಸಂಬಂಧಿಕರ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡು ನಂತರ ಆ ಸ್ವತ್ತುಗಳನ್ನು ಬಿಡಿಎಗೆ ನೀಡಿ ಅದರ ಬದಲು ಈಗಾಗಲೇ ಬಿಡಿಎ ಅಭಿವೃದ್ಧಿಪಡಿಸಿದ್ದ ನಿವೇಶನಗಳನ್ನು ಪರಿಹಾರದ ರೂಪದಲ್ಲಿ ಪಡೆದುಕೊಂಡು ಸರ್ಕಾರಕ್ಕೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಎಚ್‌. ಶಶಿಧರ್‌ ವರದಿಯಲ್ಲಿರುವಂತೆ ಬಿಡಿಎಯಿಂದ ಬದಲಿ ನಿವೇಶನ ಪಡೆದುಕೊಳ್ಳಬೇಕಾದಲ್ಲಿ 12 ಅಂಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಅದರಲ್ಲಿ 12 ವರ್ಷಗಳ ಆರ್‌ಟಿಸಿ ಮತ್ತು ಪಹಣಿ, 14 ವರ್ಷಗಳ ಋಣಭಾರ ರಾಹಿತ್ಯ ಪತ್ರ, 12 ವರ್ಷಗಳ ಸಾಗುವಳಿ ಚೀಟಿ, ಆ ಭೂಮಿಗೆ ಸಂಬಂಧಿಸಿದ ಐಎಲ್‌ ಮತ್ತು ಆರ್‌ಆರ್‌ ದಾಖಲೆಗಳು, ದೃಢೀಕೃತ ಮ್ಯುಟೇಷನ್‌ ದಾಖಲೆಗಳು, ಜಮೀನಿನ ಹಿಸ್ಸಾ ನಕ್ಷೆ ಒದಗಿಸುವುದು ಅಗತ್ಯವಾಗಿರುತ್ತದೆ. ಆದರೆ, ಈ ಯಾವುದೇ ನಿಯಮಾವಳಿಯನ್ನು ಪಾಲನೆ ಮಾಡಿಲ್ಲ ಎಂದರು.

Advertisement

ಬಿಡಿಎ 1984ರ 11/ ಎ ಅನುಗುಣವಾಗಿ ಯಾವುದೇ ಬದಲಿ ನಿವೇಶನ ನೀಡಬೇಕಾದರೆ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಸಂಬಂಧಿಸಿದಂತೆ ರಚನೆಯಾಗುವ ಬಡಾವಣೆಯಲ್ಲಿ ಅಥವಾ ಆ ನಂತರ ರಚನೆಯಾಗುವ ಬಡಾವಣೆಗಳಲ್ಲಿ ಮಾತ್ರವೇ ನೀಡಬೇಕು. ಅದಕ್ಕೂ ಹಿಂದೆ ರಚನೆಯಾಗಿರುವ ಬಡಾವಣೆಗಳಲ್ಲಿ ಯಾವುದೇ ಕಾರಣಕ್ಕೂ ಬದಲೀ ನಿವೇಶನ ಹಂಚಿಕೆ ಮಾಡುವಂತಿಲ್ಲ.

ಇನ್ನು ಪ್ರಾಧಿಕಾರವು ಒಂದು ಬಡಾವಣೆಯ ರಚನೆಯ ಬಗ್ಗೆ ಅಧಿಸೂಚನೆ ಹೊರಡಿಸಿದ ನಂತರ ನಿಜವಾದ ಫಲಾನುಭವಿಗಳಿಂದ ಯಾವುದೇ ಪರವ್ಯಕ್ತಿ ಆ ಜಮೀನನ್ನು ಕ್ರಯಕ್ಕೆ ಪಡೆಯುವಂತಿಲ್ಲ ಎಂಬ ನಿಯಮವಿದೆ. ಆದರೆ, ಹನುಮಂತೇಗೌಡ ಎಲ್ಲಾ ನಿಯಮ, ಭೂ ಸ್ವಾಧೀನ ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಈ ಸಂಬಂಧ ಎಸಿಬಿ, ಬಿಎಂಟಿಎಫ್, ಲೋಕಾಯುಕ್ತದಲ್ಲಿ ದೂರು ದಾಖಲೆ ಮಾಡಲಾಗಿದ್ದು, ಹಗರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next