ಬೆಂಗಳೂರು: ನಗರದ ಚಿತ್ರಕಲಾ ಪರಿಷತ್ತಿನಲ್ಲಿ 2007ರಿಂದ 2009ರವರೆಗೆ ಸುಮಾರು 60 ಲಕ್ಷ ರೂ. ಅವ್ಯವಹಾರ ನಡೆದಿರುವ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಪರಿಷತ್ತಿನ ಟಿಎಂವಿ ಗೌಡ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಈ ಅವಧಿಯಲ್ಲಿ (2007-2009) ಸದಸ್ಯರಾಗಿದ್ದ ಟಿ.ಪ್ರಭಾಕರ್, ಎಂ.ಜೆ.ಕಮಲಾಕ್ಷಿ, ಹರೀಶ್ ಜೆ.ಪದ್ಮನಾಭ, ಕೆ.ಎಸ್.ಅಪ್ಪಾಜಯ್ಯ ವಿರುದ್ಧ ಹೈಗ್ರೌಂಡ್ಸ್ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿತ್ರಕಲಾ ಪರಿಷತ್ತಿನ 2007 ನ.12ರಿಂದ 2009 ಏ.20ರವರೆಗೆ ನಡೆದಿರುವ ಅವ್ಯವಹಾರದ ಬಗ್ಗೆ ಪರಿಷತ್ತಿನ ಅಜೀವ ಸದಸ್ಯರಾದ ರಾಜೇಶೇಖರ್, ಬಾಬು ಈಶ್ವರ್ ಪ್ರಸಾದ್, ಗೋಪಿನಾಥ್ ಎಂಬವರು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಗೆ ದೂರು ನೀಡಿದ್ದರು.
ಈ ಸಂಬಂಧ ತನಿಖೆ ನಡೆಸಿದ ಜಿಲ್ಲಾ ನೊಂದಣಾಧಿಕಾರಿ ಕಚೇರಿಯ ಅಧಿಕಾರಿಗಳು 2009 ಜೂ.29ರಂದು ತನಿಖಾ ವರದಿಯನ್ನು ಜಿಲ್ಲಾ ನೊಂದಾಣಾಧಿಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ 2015 ಅ.21 ರಂದು ಆರೋಪಿಗಳಿಂದ 60,62, 648 ರೂ. ವಸೂಲಿ ಮಾಡುವಂತೆ ಆದೇಶಿಸಿತ್ತು.
ಪರಿಷತ್ತಿಗೆ ನಷ್ಟ: ವಿಕಾಸಸೌಧದಲ್ಲಿ ಬಿತ್ತಿಚಿತ್ರ ನಿರ್ಮಿಸಲು ಸರ್ಕಾರ ನೀಡಿದ್ದ 80 ಲಕ್ಷ ರೂ. ಹಣದಲ್ಲಿ ಅಕ್ರಮ ಎಸಗಿರುವುದರ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ಈ ಅವಧಿಯಲ್ಲಿ ಪರಿಷತ್ತಿನ ಆಡಳಿತ ನಡೆಸುತ್ತಿದ್ದ ಪ್ರಭಾಕರ್, ಕಮಲಾಕ್ಷಿ, ಹರೀಶ್, ವಿದ್ಯಾರ್ಹತೆ ಹೊಂದಿಲ್ಲ ಎಂಬ ಆರೋಪವಿದ್ದ ಕೆ.ಎಸ್.ಅಪ್ಪಾಜಯ್ಯ ಅವರನ್ನು ಪರಿಷತ್ ಕಾಲೇಜಿನ ಪ್ರಾಂಶುಪಾಲರನ್ನಾಗಿ ನೇಮಿಸಿದ್ದರು. ಅಲ್ಲದೆ, ನಿಯಮ ಉಲ್ಲಂಘಿಸಿ ಅಪ್ಪಾಜಯ್ಯಗೆ 1,27,853 ರೂ. ನೀಡಿದ್ದರು.
ಜತೆಗೆ ಪರಿಷತ್ತಿನ ಕಾಲೇಜಿನಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಶಿಕ್ಷಕರ ನೇಮಕ, ಸಭೆ ಸಮಾರಂಭಗಳಲ್ಲಿ ಅನಾವಾಶ್ಯಕ ವೆಚ್ಚ, ಕಾನೂನು ಬಾಹಿರ ತೀರ್ಮಾನಗಳು, ಪರಿಷತ್ತಿನ ಕಾಮಗಾರಿಗಳು ಮತ್ತು ಇತರೆ ಕೆಲಸಗಳಿಗೆ ಗುತ್ತಿಗೆ ನೀಡುವುದು, ಶಿಲಾಮೂರ್ತಿಗಳ ಕೆತ್ತನೆ ಹಾಗೂ ಇತರೆ ಕಾರ್ಯಗಳಿಗೆ ಕಾರ್ಯಾದೇಶ ನೀಡದೆ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಮೂಲಕ ಪರಿಷತ್ತಿನ 60,62, 648 ರೂ.ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಟಿ.ಎಂ.ವಿ.ಗೌಡ ಹಾಗೂ ಡಾ ಲಕ್ಷ್ಮೀಪತಿ ಬಾಬು ಎಂಬವರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಚಿತ್ರಕಲಾ ಪರಿಷತ್ತಿಗೆ ಆರ್ಥಿಕ ನಷ್ಟ ಮತ್ತು ವಂಚನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.