ಉಪ್ಪಿನಂಗಡಿ : ಬಿಳಿಯೂರು- ತೆಕ್ಕಾರು, ಸರಳೀಕಟ್ಟೆ ಸಂಪರ್ಕ ಸೇತುವೆ ಮತ್ತು ಕಿಂಡಿಅಣೆಕಟ್ಟು ನಿರ್ಮಾಣ ಕಾಮಗಾರಿಗಾಗಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ 59 ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಮಾ. 4ರಂದು ಉಪ್ಪಿನಂಗಡಿ ಗ್ರಾಮದ ನಾಲಾಯಗುಂಡಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ 1 ಕೋಟಿ ರೂ.
ಅನುದಾನದಲ್ಲಿ ನಿರ್ಮಾಣವಾಗಲಿರುವ ಸೇತುವೆ ಸಮೇತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬಿಳಿಯೂರು – ತೆಕ್ಕಾರು ಸಂಪರ್ಕ ಸೇತುವೆ ನಿರ್ಮಾಣವಾದರೆ ಈ ಭಾಗದಲ್ಲಿ ಸುಮಾರು 7 ಕಿ.ಮೀ. ತನಕ ಹಲವು ಗ್ರಾಮಗಳ ರೈತರಿಗೆ ಜಲಧಾರೆ ಮೂಲಕ ನೀರಾವರಿ ವ್ಯವಸ್ಥೆ ಆಗಲಿದೆ. ಆ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದ ಅವರು, ಕೆದಿಲ- ಕಾಂತುಕೋಡಿಯಲ್ಲಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಮಂಜೂರಾತಿ ದೊರೆತಿದೆ. ಆರ್ಥಿಕ ಮಂಜೂರಾತಿ ಹಂತದಲ್ಲಿದೆ.
ದಾರಂದಕುಕ್ಕು-ಕಠಾರ-ಹಿರೇಬಂಡಾಡಿ ಸಂಪರ್ಕ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಈ ಭಾಗದಲ್ಲಿ ಪಶ್ಚಿಮವಾಹಿನಿ ಯೋಜನೆ ಮೂಲಕ ಹಲವು ಸೇತುವೆ ಮತ್ತು ಅಣೆಕಟ್ಟು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಿ.ಪಂ. ಸದಸ್ಯೆ ಶಯನಾ ಜಯಾನಂದ ಮಾತನಾಡಿದರು. ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ, ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರಾದ ಸುರೇಶ್ ಅತ್ರಮಜಲು, ಚಂದ್ರಶೇಖರ ಮಡಿವಾಳ, ಗೋಪಾಲ ಹೆಗ್ಡೆ, ರಮೇಶ್ ಬಂಡಾರಿ, ಸುಶೀಲಾ, ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಹಮ್ಮಬ್ಬ ಶೌಕತ್ ಆಲಿ, ತಾ.ಪಂ. ಮಾಜಿ ಸದಸ್ಯ ಎನ್. ಉಮೇಶ್ ಶೆಣೈ, ಗ್ರಾ.ಪಂ. ಮಾಜಿ ಸದಸ್ಯೆ ಮಾಲತಿ, ಗ್ರಾಮಸ್ಥರಾದ ಶೀನಪ್ಪ, ವಿಶ್ವನಾಥ ಕಂಗ್ವೆ, ಕೃಷ್ಣಪ್ಪ ಗೌಡ, ಕೇಶವ ರಂಗಾಜೆ, ಜಗದೀಶ ಶೆಟ್ಟಿ, ರಾಜೀವ್ ಹೆಗ್ಡೆ, ಶ್ರೀರಾಮ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯ ಸುನೀಲ್ ಕುಮಾರ್ ದಡ್ಡು ಸ್ವಾಗತಿಸಿ, ವಂದಿಸಿದರು.
ಮುಕ್ತಾಯ ಹಂತದಲ್ಲಿ ಟೆಂಡರ್
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಎಂಜಿನಿಯರ್ ಆನಂದ ಬಂಜನ ಅವರು ಮಾಹಿತಿ ನೀಡಿ, ಸುಮಾರು 31.70 ಮೀಟರ್ ಉದ್ದ ಮತ್ತು 3 ಮೀಟರ್ ಅಗಲದ ಸೇತುವೆ ನಿರ್ಮಾಣ ಆಗಲಿದ್ದು, ಈ ವಾರದಲ್ಲಿ ಟೆಂಡರು ಪ್ರಕ್ರಿಯೆ ಮುಗಿಯಲಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗದೇ ಇದ್ದರೆ ಶೀಘ್ರ ಕಾಮಗಾರಿ ಆರಂಭಿಸಿ, ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.