ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಸೇರಿದಂತೆ ಕೃಷಿ ಉತ್ಪನ್ನಗಳ ಬೆಲೆ ನಿಗದಿ ಮಾಡಲಾಗಿದೆ.
ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ನಿಗದಿಗೊಳಿಸಲಾಗಿದೆ.
ತೊಗರಿಗೆ ಕ್ವಿಂಟಾಲ್ ಗೆ 7500 ಬೆಂಬಲ ಬೆಲೆ ನಿಗದಿ ಮಾಡಲಾಗಿದ್ದು, ಕಳೆದ ವರ್ಷ 7000 ಬೆಂಬಲ ಬೆಲೆ ಇತ್ತು. ಈಗ 550 ರೂ ಹೆಚ್ವಳ ಮಾಡಲಾಗಿದೆ. ವರ್ಷಂಪ್ರತಿ 300 ಇಲ್ಲವೇ 400 ರೂ ಬೆಂಬಲ ಬೆಲೆ ಹೆಚ್ಚಳ ಮಾಡಲಾಗುತ್ತಿತ್ತು. ಆದರೆ ಈಗ 550 ರೂ ಹೆಚ್ಚಿಸಲಾಗಿದೆ. ಕಳೆದ ಹಾಗೂ ಅದರ ಹಿಂದಿನ ವರ್ಷ 400 ರೂ ಹೆಚ್ಚಿಸಲಾಗಿತ್ತು. ಆದರೆ ಪ್ರಸಕ್ತವಾಗಿ 550 ರೂ ಹೆಚ್ಚಳ ಮಾಡಿರುವುದು ಸಮಾಧಾನ ತರುವಂತಿದೆ. ಕಳೆದ ಹತ್ತು ವರ್ಷಗಳಿಂದ ತೊಗರಿಗೆ 250 ರೂ ದಿಂದ ಕೇವಲ 400 ಮಾತ್ರ ಹೆಚ್ಚಳ ಮಾಡುತ್ತಾ ಬರಲಾಗಿದೆ.
ಅದೇ ತೆರನಾಗಿ ಹೆಸರಿಗೆ 124 ರೂ ಬೆಂಬಲ ಬೆಲೆ ಹೆಚ್ಚಿಸಿ ಕ್ವಿಂಟಾಲ್ ಗೆ 8682 ರೂ ಗೆ ನಿಗದಿ ಮಾಡಲಾಗಿದೆ. ಕಳೆದ ವರ್ಷ 8558 ರೂ ಬೆಂಬಲ ಬೆಲೆವಿತ್ತು. ಉದ್ದುಗೆ 450 ರೂ ಬೆಲೆ ಹೆಚ್ಚಳದೊಂದಿಗೆ 7400 ರೂ ನಿಗದಿ ಮಾಡಲಾಗಿದೆ. ಸೂರ್ಯಕಾಂತಿಗೆ 520 ರೂ ಹೆಚ್ಚಿಸಿ ಕ್ವಿಂಟಾಲ್ ಗೆ 7280 ರೂ ನಿಗದಿ ಮಾಡಲಾಗಿದೆ. ಹತ್ತಿಗೆ 7121 ರೂ, ನೆಲಗಡಲೆ (ಸೇಂಗಾ) 6783 ರೂ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ.
ಮೂರು ತಿಂಗಳಿನ ಹೆಸರುಗಿಂತ ಆರು ತಿಂಗಳು ಅವಧಿಯಲ್ಲಿ ಬರುವ ತೊಗರಿ ಬೆಂಬಲ ಬೆಲೆ ಹೆಚ್ಚಿಗೆ ಇರಬೇಕೆಂಬ ಬೇಡಿಕೆ ಹಾಗೆ ಉಳಿದು ಬರುತ್ತಿದೆ. ತೊಗರಿಗಿಂತ ಹೆಸರಿಗೆ 1132 ರೂ ಇನ್ನೂ ಹೆಚ್ಚಳ ವಿದೆ.
ಮಾರುಕಟ್ಟೆಯಲ್ಲಿ ಈಗ ತೊಗರಿ ಬೆಲೆ ಕ್ವಿಂಟಾಲ್ ಗೆ 12000 ಸಾವಿರ ರೂ ದರವಿದೆ. ಆದರೆ ತೊಗರಿ ಮಾರುಕಟ್ಟೆ ಗೆ ಬರುತ್ತಿದ್ದಂತೆ ದರ ಕುಸಿತವಾಗುತ್ತದೆ. ಆದರೆ 7500 ರೂ ದರ ಇಳಿಕೆಯಾದರೆ ಬೆಂಬಲ ಬೆಲೆ ಸಹಾಯಕ್ಕೆ ಬರುತ್ತದೆ.
ಇದನ್ನೂ ಓದಿ: Gangolli: ಹಾಲು ಕುಡಿದು ಮಲಗಿದ್ದ ಹಸುಳೆ ಮೃತ್ಯು… ದೂರು ದಾಖಲು