Advertisement

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ 50 ಲಕ್ಷ ರೂ. ಮೀಸಲು

12:30 AM Jan 18, 2019 | |

ಕಾಸರಗೋಡು: ಆರೋಗ್ಯ ವಲಯದಲ್ಲಿ ಸದ್ದಿಲ್ಲದೆ ಕ್ರಾಂತಿ ನಡೆಸುತ್ತಿರುವ ರಾಜ್ಯದ ಏಕೈಕೆ ಯುನಾನಿ ವೈದ್ಯಕೀಯ ಪದ್ಧತಿಯ ಡಿಸ್ಪೆನ್ಸರಿ ಜನತೆಯ ಆಶಾಕಿರಣವಾಗಿದೆ.

Advertisement

ಜಿಲ್ಲೆಯ ಮೊಗ್ರಾಲ್‌ನಲ್ಲಿರುವ ಈ ಸರಕಾರಿ ಡಿಸ್ಪೆನ್ಸರಿ ಅನೇಕ ರೋಗಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತಿರುವುದು ಮತ್ತು ಉಚಿತವಾಗಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿರುವುದು ಜನರ ನಂಬುಗೆಗೆ ಕಾರಣವಾಗಿದೆ. ಸಂಸ್ಥೆಯ ಕಟ್ಟಡದಲ್ಲಿ ಭೌತಿಕವಾದ ಕೊರತೆಗಳಿವೆಯಾದರೂ, ದಿನಕ್ಕೆ 80ರಿಂದ 100 ಮಂದಿ ರೋಗಿಗಳು ಬರುತ್ತಾರೆ. ಕೇರಳ ಮತ್ತು ಕರ್ನಾಟಕದ ಮಂದಿಯೂ ಚಿಕಿತ್ಸೆಗಾಗಿ ಈ ಆಸ್ಪತ್ರೆಯನ್ನು ಆಶ್ರಯಿಸುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಕೆ.ಎ. ಶಕೀರಾಲಿ ತಿಳಿಸುತ್ತಾರೆ.

ಭಾರತೀಯ ಚಿಕಿತ್ಸಾ ಇಲಾಖೆಯ ವ್ಯಾಪ್ತಿಯಲ್ಲಿರುವ ಈ ಯುನಾನಿ ಡಿಸ್ಪೆನ್ಸರಿ ಕುಂಬಳೆ ಗ್ರಾಮ ಪಂಚಾಯತ್‌ನ ಮೇಲ್ನೋಟದಲ್ಲಿ ಚಟುವಟಿಕೆ ನಡೆಸುತ್ತಿದೆ.

1991ರಲ್ಲಿ  ಸ್ಥಾಪನೆ 
ಸ್ಥಳೀಯ ನಿವಾಸಿಗಳ ಸತತ ಮನವಿಗಳ ಹಿನ್ನೆಲೆಯಲ್ಲಿ 1991ರಲ್ಲಿ ಅಂದಿನ ರಾಜ್ಯ ಸರಕಾರ ಈ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಿತ್ತು. ಸರಿಸುಮಾರು ಹನ್ನೊಂದು ಭಾಷೆಗಳ ಮಂದಿ ವಾಸಿಸುತ್ತಿರುವ ಮೊಗ್ರಾಲ್‌ ಪ್ರದೇಶದಲ್ಲಿ ಉರ್ದು ಭಾಷಿಗರು ಅಧಿಕವಾಗಿದ್ದು,ಅವರ ಕೋರಿಕೆಯ ಹಿನ್ನೆಲೆಯಲ್ಲಿ ಯುನಾನಿ ಡಿಸ್ಪೆನ್ಸರಿ ಆರಂಭಿಸಲಾಗಿತ್ತು.

ಗ್ರೀಕ್‌ ಸಂಪ್ರದಾಯಕ್ಕೆ ಸೇರಿದ್ದು 
ಪ್ರಾಚೀನ ಗ್ರೀಕ್‌ ಚಿಕಿತ್ಸಾ ಸಂಪ್ರ ದಾಯದಲ್ಲಿ ಸೇರುವ ಯುನಾನಿ ಚಿಕಿತ್ಸಾ ಪದ್ಧತಿಯನ್ನು ಅರಬ್‌ ದೇಶದ ವ್ಯಾಪಾರಿಗಳು ಏಷ್ಯಾಕ್ಕೆ ಪರಿಚಯಿಸಿ, ವ್ಯಾಪಕಗೊಳ್ಳಲು ಕಾರಣರಾಗಿದ್ದರು. ಅನಂತರ ಮೊಘಲ ರಾಜವಂಶೀಯರು ಭಾರತದಲ್ಲಿ ಆಯುರ್ವೇದದೊಂದಿಗೆ ಯುನಾನಿ ಚಿಕಿತ್ಸೆಗೂ ಪ್ರಚಾರ ಒದಗಿಸಿದ್ದರು. ಯುನಾನಿ ಚಿಕಿತ್ಸೆಯ ಪ್ರಮುಖ ಗ್ರಂಥಗಳೆಲ್ಲವೂ ಉರ್ದು ಭಾಷೆಯಲ್ಲಿರುವುದು ಕೇರಳಕ್ಕೆ ಈ ಚಿಕಿತ್ಸಾ ರೀತಿಯ ಆಗಮನ ವಿಳಂಬವಾಗಲು ಪ್ರಧಾನ ಕಾರಣ ಎಂದು ಡಾ| ಶಕೀರಾಲಿ ತಿಳಿಸುತ್ತಾರೆ.

Advertisement

ಬೇರೆ ರಾಜ್ಯಗಳಿಂದ ಔಷಧ ರವಾನೆ 
ರಾಜ್ಯದಲ್ಲಿ ಅಂಗೀಕೃತ ಯುನಾನಿ ಫಾರ್ಮಸಿಗಳು ಕಡಿಮೆಯಾಗಿರುವ ಹಿನ್ನೆಲೆಯಿಂದ ಬೇರೆ ರಾಜ್ಯಗಳಿಂದ ಯುನಾನಿ ಔಷಧಗಳು ಈ ಡಿಸ್ಪನ್ಸರಿಗೆ ರವಾನೆಗೊಳ್ಳುತ್ತವೆ. ಉಚಿತವಾಗಿ ಇಲ್ಲಿ ಚಿಕಿತ್ಸೆ ಮತ್ತು ಔಷಧ ವಿತರಣೆ ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ವೆಚ್ಚ ಹೊರಬೇಕಾಗಿ ಬರುತ್ತಿದೆ ಎಂದು ಸಂಬಂಧಪಟ್ಟವರು ತಿಳಿಸುತ್ತಾರೆ.

ವೈದ್ಯಾಧಿಕಾರಿ ಅಲ್ಲದೆ ಓರ್ವ ಫಾರ್ಮಸಿ ಅಟೆಂಡರ್‌, ತಾತ್ಕಾಲಿಕ ನೇಮಕಾತಿಯ  ಓರ್ವ ಸ್ವೀಪರ್‌ ಈ ಡಿಸ್ಪೆನ್ಸರಿಯಲ್ಲಿದ್ದಾರೆ. ಕಪ್ಲಿಂಗ್‌ ಥೆರಪಿಗಾಗಿ ಮಾತ್ರ ದಿನಂಪ್ರತಿ ಕನಿಷ್ಠ ಹತ್ತು ಮಂದಿ ಬರುತ್ತಿದ್ದಾರೆ. ಈ ಬಗ್ಗೆ ಅಂಗೀಕಾರ ಇರುವ ಚಿಕಿತ್ಸಾಲಯಗಳು ಕಡಿಮೆಯಾಗಿರುವುದರಿಂದ ಜನ ನಕಲಿ ವೈದ್ಯರ ಬಲೆಗೆ ಬೀಳುವ ಭೀತಿಯಿರುತ್ತದೆ ಎಂದು ಅವರು ಕಳಕಳಿ ವ್ಯಕ್ತಪಡಿಸಿದರು.

ಡಿಸ್ಪನ್ಸರಿಗೆ ನ್ಯಾಶನಲ್‌ ಅಕ್ರಡಿಷನ್‌ ಬೋರ್ಡ್‌ ಫಾರ್‌ ಹಾಸ್ಪಿಟಲ್‌ ಅಂಗೀಕಾರ ಲಭ್ಯತೆ ಸಂಬಂಧ ಚಟುವಟಿಕೆಗಳೂ ನಡೆಯುತ್ತಿವೆ. ಇದರ ಪ್ರಾಥಮಿಕ ಹಂತದ ಚಟುವಟಿಕೆಗಳ ಅವಲೋಕನ ಸಂಬಂಧ ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ| ಅಜಿತ್‌ ಕುಮಾರ್‌ ಅವರ ನೇತೃತ್ವದ ತಂಡ ಈ ಸಂಸ್ಥೆಗೆ ಭೇಟಿ ನೀಡಿತ್ತು. ಸಂಸ್ಥೆಯ ಭೌತಿಕ ಸೌಲಭ್ಯ ಹೆಚ್ಚಳ ಸಂಬಂಧ ಆಯುಷ್‌ ಮಿಷನ್‌ 23.25 ಲಕ್ಷ ರೂ. ಮಂಜೂರು ಮಾಡಿದೆ. ಈ ಕುರಿತು ಚಟುವಟಿಕೆ ಈ ವರ್ಷ ಮಾರ್ಚ್‌ ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ವಿವಿಧ ಇಲಾಖೆಗಳ ಮೂಲಕ ಘೋಷಿಸಲಾದ ಯೋಜನೆಗಳಿಗೆ ಮಂಜೂರಾತಿ ಲಭಿಸಿದರೆ ರಾಜ್ಯದ ಏಕೈಕ  ಯು ನಾನಿ ಸಂಸ್ಥೆ ಅತ್ಯಾಧುನಿಕ ಚಿಕಿತ್ಸಾ ಕೇಂದ್ರವಾಗಿ ಮಾರ್ಪಡಲಿದೆ ಎಂದು ಅವರು ನಿರೀಕ್ಷಿಸಿದ್ದಾರೆ.

ತಗಲುತ್ತಿರುವುದು ಭಾರೀ ವೆಚ್ಚ 
ಕುಂಬಳೆ ಗ್ರಾಮ ಪಂಚಾಯತ್‌ ಅನೇಕ ವರ್ಷಗಳಿಂದ ಲಕ್ಷಾಂತರ ರೂ. ವೆಚ್ಚ ಮಾಡುತ್ತಾ ಬಂದಿದೆ. ಈ ಬಾರಿ 12 ಲಕ್ಷರೂ. ಮೀಸಲಿರಿಸಿದೆ. ವರ್ಷದಿಂದ ವರ್ಷಕ್ಕೆ ಯುನಾನಿ ಚಿಕಿತ್ಸೆ ಬಯಸಿ ಬರುವವರ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದು, ಡಿಸ್ಪೆನ್ಸರಿಯ ಸಿಬಂದಿ ಸಂಖ್ಯೆಯನ್ನೂ ಹೆಚ್ಚಳಗೊಳಿಸುವ ಅಗತ್ಯವಿದ್ದು, ಈ ಸಂಬಂಧ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಚಟುವಟಿಕೆ ಶೀಘ್ರ ಆರಂಭ
ಕಾಸರಗೋಡು ಅಭಿವೃದ್ಧಿಯ ವಿಶೇಷ ಪ್ಯಾಕೇಜ್‌ನಲ್ಲಿ ಅಳವಡಿಸಿ, ದಾಖಲಾತಿ ಚಿಕಿತ್ಸೆ  ಸಹಿತ ಸೌಲಭ್ಯಗಳಿರುವ ನೂತನ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ರೂ. ಮೀಸಲಿರಿಸಲಾಗಿದೆ. ಮಕ್ಕಳ ಚಿಕಿತ್ಸೆ, ಪುರುಷರ ವಿಭಾಗ, ಫಾರ್ಮಸಿ ಸ್ಟೋರ್‌,ವಿಶ್ರಾಂತಿ ಕೊಠಡಿ ಇತ್ಯಾದಿ ಸೌಲಭ್ಯಗಳಿರುವ ಕಟ್ಟಡ ನಿರ್ಮಾಣ ಈ ಯೋಜನೆಯಲ್ಲಿದೆ. ಈ ಕುರಿತು ಮಂಜೂರಾತಿಗಾಗಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಪ್ರಯೋಗಾಲಯ ಸ್ಥಾಪನೆಗೆ ಸಿದ್ಧತೆ ನಡೆದಿದ್ದು, ಉಪಕರಣಗಳು ತಲಪಿದ ತತ್‌ಕ್ಷಣ ಪ್ರಯೋಗಾಲಯ ಪರಿಣತರ ಹುದ್ದೆಗೆ ನೇಮಕಾತಿ ನಡೆಸಿ ಚಟುವಟಿಕೆ ಆರಂಭಿಸಲಾಗುವುದು.
– ಡಾ| ಶಕೀರಾಲಿ, ಆಸ್ಪತ್ರೆಯ ವೈದ್ಯಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next