Advertisement

ಗೋಲ್ಡನ್‌ ಡೇರಿಗೆ 50 ಕೋಟಿ ಅನುದಾನ

07:25 AM Mar 06, 2019 | |

ಕೋಲಾರ: ಕೋಲಾರ -ಚಿಕ್ಕಬಳ್ಳಾಪುರದ ಹಾಲು ಉತ್ಪಾದಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನಿರ್ಮಿಸುತ್ತಿರುವ ಗೋಲ್ಡನ್‌ ಡೇರಿಗೆ ರಾಜ್ಯ ಸರ್ಕಾರದಿಂದ 50 ಕೋಟಿ ರೂ., ಒದಗಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದರು. ನಗರ ಹೊರವಲಯದ ಕೋಚಿಮುಲ್‌ ಆವರಣದಲ್ಲಿ ಮಂಗಳವಾರ 160 ಕೋಟಿ ರೂ.ವೆಚ್ಚದ ಗೋಲ್ಡನ್‌ ಡೇರಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

Advertisement

ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೇರಿ ನಿರ್ಮಾಣಕ್ಕೆ ರಾಷ್ಟ್ರೀಯ ಹೈನೋದ್ಯಮ ಮಂಡಳಿಯಿಂದ  50 ಕೋಟಿ ರೂ. ಸಾಲ ಪಡೆದು ಕಟ್ಟಡ ಮುಗಿಸಿದ್ದಾರೆ. ಅದೇ ರೀತಿ ಕೋಲಾರದಲ್ಲಿ ಗೋಲ್ಡನ್‌ ಡೇರಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂ. ನೀಡಲಿದೆ ಎಂದು ತಿಳಿಸಿದರು. 

ಬೆಂಬಲ ಬೆಲೆ ನಿಗದಿಗೆ ಬಸವರಾಜು ವರದಿ: ರೇಷ್ಮೆ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಬಸವರಾಜು ವರದಿ ವೈಜ್ಞಾನಿಕವಾಗಿರುವ ಬಗ್ಗೆ ರೈತರು ತನ್ನ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಫೆ.6 ರಂದು ರೈತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾಲ ಮನ್ನಾ ಪಾಪದ ಕೆಲಸ: ಕೇಂದ್ರ ಸರ್ಕಾರದ ಅಧೀನದಲ್ಲಿ ವಾಣಿಜ್ಯ ಬ್ಯಾಂಕ್‌ ಬರುತ್ತವೆ. 4 ವರ್ಷದಿಂದ ರೈತರ ಪರ ಧ್ವನಿ ಎತ್ತದ ಪ್ರಧಾನ ಮಂತ್ರಿ ಈಗ ಮಾತನಾಡುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಿದರೆ ಪಾಪದ ಕೆಲಸ ಅಂತ ಮೋದಿ ಹೇಳಿದ್ದಾರೆ. ಆದರೆ, ಈಗಾಗಲೇ ತಾನು 6.40 ಲಕ್ಷ ರೈತರು ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲ ಮನ್ನಾ ಮಾಡಿರುವುದಾಗಿ ತಿಳಿಸಿದರು. 

ಜಿಲ್ಲೆಯಲ್ಲಿ ಮುಂಗಾರು ಮಳೆ ಅವಧಿಯಲ್ಲಿ 26ಕೋಟಿರೂ, ಹಿಂಗಾರಿನಲ್ಲಿ 13 ಕೋಟಿ ಸೇರಿ ಒಟ್ಟು 33 ಕೋಟಿ ರೂ. ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರದಿಂದ 900 ಕೋಟಿ ಕೋಡ್ತಿವಿ ಎಂದು ಹೇಳಿದವರು 400 ಕೋಟಿ ರೂ. ಕೊಟ್ಟಿದ್ದಾರೆಂದರು.

Advertisement

ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹ ಧನವನ್ನು 2008ರಲ್ಲಿ 2 ರೂ, 2014ರಲ್ಲಿ 4ರೂ, 2015 ರಲ್ಲಿ 5, ಈಗ 6ಕ್ಕೆ ಏರಿಕೆ ಮಾಡಲಾಗಿದೆ. ಹಾಲನ್ನು ಒಕ್ಕೂಟಗಳು ಮಾರಾಟ ಮಾಡುವ ಸ್ಥಿತಿಯಲ್ಲಿ ಇಲ್ಲ. ಪೌಡರ್‌ ಮಾಡಿ ಮಾರಾಟ ಮಾಡಲು ಕಷ್ಟ ಇದೆ. ಹೀಗಾಗಿ ಕ್ಷೀರಭಾಗ್ಯ ಯೋಜನೆ ಜಾರಿಗೆ ತರಲಾಯಿತು. ಹಾಲಿನ ಪ್ರೋತ್ಸಾಹಧನ 2500 ಕೋಟಿ ರೂ. ದಾಟುತ್ತೆ, ಕೇಂದ್ರ ಸರ್ಕಾರ ಏನೂ ಕೊಡಲ್ಲ ಎಂದರು. 

ರಾಜ್ಯದ ರೈತರಿಗೆ ಸಿರಿ ಧಾನ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗಿದೆ. ಸಿದ್ದರಾಮಯ್ಯ ಕಾಲದಲ್ಲಿ ಮಾಡಿದ ಸಾಲ ಮನ್ನಾದಲ್ಲಿ 3500 ಕೋಟಿರೂ. ಸೇರಿ, ಈಗ 1300 ಕೋಟಿ ಕಲ್ಪಿಸಲಾಗಿದೆ. ಇನ್ನು ಸಹಕಾರಿ ಬ್ಯಾಂಕುಗಳಿಂದ ಶೇ.3 ಬಡ್ಡಿಯಲ್ಲಿ ಒಡವೆ ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.  

ಅವಿಭಜಿತ ಜಿಲ್ಲೆಗೆ ನೀಡಿರುವ ಹೊಸ ಉತ್ತರ ವಿವಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು. ಚಿಕ್ಕಬಳ್ಳಾಪುರದಲ್ಲಿ ತಾಂತ್ರಿಕ ಕಾಲೇಜು ಆಡಳಿತ ಮಂಡಳಿ ಸ್ಥಾಪನೆಗೆ ಕ್ರಮ, ಕೋಲಾರದ ರಿಂಗ್‌ ರೋಡ್‌ ನಿರ್ಮಾಣಕ್ಕೆ ತೀರ್ಮಾನ, ಕೆಸಿ ರೆಡ್ಡಿ ಸ್ಮಾರಕ ಭವನ ನಿರ್ಮಾಣಕ್ಕೆ ಮುಂದಿನ ಅಧಿವೇಶನದಲ್ಲಿ ಅನುಮೋದನೆ ನೀಡಲಾಗುವುದು ಎಂದು ಬಹುತೇಕ ಬಜೆಟ್‌ ಘೋಷಣೆಗಳನ್ನು ಪುನರುಚ್ಚರಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಸಮ್ಮಿಶ್ರ ಸರ್ಕಾರದ ಯೋಜನೆಗಳನ್ನು ನೋಡಿ ಸಹಿಸಿಕೊಳ್ಳಲಾಗದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು. ಹೈನುಗಾರಿಕೆಯನ್ನು ವ್ಯವಸ್ಥಿತವಾಗಿ ಜಿಲ್ಲೆಗೆ ಪರಿಚಯಿಸಿದ ಎಂ.ವಿ.ಕೃಷ್ಣಪ್ಪ ಅವರ ಹೆಸರಿನಲ್ಲಿ ಮೆಗಾ ಡೇರಿ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಮೆಗಾ ಡೇರಿ ಸ್ಥಾಪನೆಗೆ 50 ಕೋಟಿ ರೂ. ಸಹಾಯ ಧನ ನೀಡುವುದಾಗಿ ತಿಳಿಸಿರುವುದು ಸಂತೋಷ ತಂದಿದೆ ಎಂದರು. 

ಈ ಜಾಗದಲ್ಲಿ ಡೇರಿ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಹಿರಿಯ ಐಎಎಸ್‌ ಅಧಿಕಾರಿ ಮುನಿಸ್ವಾಮಿ ಅವರನ್ನು ಸ್ಮರಿಸಬೇಕಿದೆ. ಅಧ್ಯಕ್ಷತೆ ವಹಿಸಿದ್ದ ಕೋಚಿಮುಲ್‌ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ, ರಾಜ್ಯದಲ್ಲೇ ಅತಿ ಆಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯಗಳುಳ್ಳ ಮೊದಲ ಡೇರಿಯಾಗಿ ಗೋಲ್ಡನ್‌ ಡೇರಿ ನಿರ್ಮಾಣವಾಗಲಿದೆ ಎಂದರು. 

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಲು ಉತ್ಪಾದಕರ ಉನ್ನತ ಶಿಕ್ಷಣಕ್ಕೆ ನೆರವಾಗುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 500 ಮಂದಿ ವಿದ್ಯಾರ್ಥಿನಿಯರಿಗೆ ಅವಕಾಶವಿರುವ ಹಾಸ್ಟೆಲ್‌ ನಿರ್ಮಿಸಲು ನಿರ್ಧರಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು. 

ಕೃಷಿ ಸಚಿವ ಶಿವಶಂಕರರೆಡ್ಡಿ, ಎಂಎಲ್‌ಸಿ ಚೌಡರೆಡ್ಡಿ, ಜಿಪಂ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋಧ, ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಸಿಇಒ ಜಿ.ಜಗದೀಶ್‌, ಎಸ್ಪಿ ರೋಹಿಣಿ ಕಟೋಚ್‌ ಸೆಪಟ್‌, ಉಪಸಭಾಪತಿ ಎಂ.ಕೃಷ್ಣಾರೆಡ್ಡಿ, ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ, ಕೆ.ಶ್ರೀನಿವಾಸಗೌಡ, ರೂಪಾ, ವಿ.ಮುನಿಯಪ್ಪ, ಎಚ್‌.ನಾಗೇಶ್‌, ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌,

ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಎಂ.ವಿ ಕೃಷ್ಣಪ್ಪ ಅವರ ಧರ್ಮಪತ್ನಿ ಪ್ರಮೀಳಮ್ಮ, ವಡಗೂರು ಗ್ರಾಪಂ ಅಧ್ಯಕ್ಷರಾದ ಪ್ರಭಾವತಿ, ಕೋಚಿಮುಲ್‌ ನಿರ್ದೇಶಕರಾದ ರಾಮಕೃಷ್ಣೇಗೌಡ, ಕೆ.ವಿ.ನಾಗರಾಜ್‌, ಜಯಸಿಂಹ ಕೃಷ್ಣಪ್ಪ, ಮಾಜಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಮತ್ತಿತರರಿದ್ದರು.

4ಸಾವಿರ ಕೋಟಿರೂ. ವೆಚ್ಚದಲ್ಲಿ ಪೈಲಟ್‌ ಯೋಜನೆ: ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಪುನಶ್ಚೇತನಕ್ಕೆ100 ಕೋಟಿ ರೂ., ಮಂಜೂರು ಮಾಡಿದ್ದು ಬಯಲು ಸೀಮೆ ಜಿಲ್ಲೆಗೆ ಎತ್ತಿನ ಹೊಳೆ, ಮೇಕೆದಾಟು ಯೋಜನೆಯಡಿ ನೀರು ಹರಿಸಲಾಗುವುದು. ಕೋಲಾರ, ಬಿಜಾಪುರ, ಚಿಕ್ಕಬಳ್ಳಾಪುರ ಜಿಲ್ಲೆಗೆ ನದಿ ನೀರು ಹರಿಸಲು 4000 ಕೋಟಿ ರೂ. ವೆಚ್ಚದ ಪೈಲೆಟ್‌ ಪ್ರಾಜೆಕ್ಟ್ಗೆ ಶೀಘ್ರ ಚಾಲನೆ ನೀಡುತ್ತಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next