ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ (IPL) ಮೆಗಾ ಹರಾಜು (Mega Auction) ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ. ಈ ವೇಳೆ ಎಲ್ಲಾ ತಂಡಗಳಲ್ಲಿ ಭಾರಿ ಬದಲಾವಣೆಗಳು ಆಗಲಿದೆ. ಪ್ರಮುಖ ಕೆಲವೇ ಆಟಗಾರರನ್ನು ಫ್ರಾಂಚೈಸಿಗಳು ತಮ್ಮಲ್ಲಿ ಇರಿಸಿಕೊಂಡು ಉಳಿದ ಆಟಗಾರರನ್ನು ಕೈಬಿಡಬೇಕಾಗುತ್ತದೆ. ಈ ಬಗ್ಗೆ ಈಗಾಗಲೇ ಹಲವು ಊಹಾಪೋಹ ಪ್ರೇರಿತ ಸುದ್ದಿಗಳು ಹರಿದಾಡುತ್ತಿದೆ.
ಬಹುತೇಕ ಎಲ್ಲಾ ಫ್ರಾಂಚೈಸಿಗಳು ಮುಂಬೈ ಇಂಡಿಯನ್ಸ್ ನ (Mumbai Indians) ರಿಟೆನ್ಶನ್ ಲಿಸ್ಟ್ ಮೇಲೆ ಕಣ್ಣಿಟ್ಟಿದೆ. ಮುಂಬೈ ತಂಡದಲ್ಲಿ ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್, ಟಿ20 ವಿಶ್ವಕಪ್ ಗೆದ್ದ ನಾಯಕ ರೋಹಿತ್ ಶರ್ಮಾ, ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ, ವಿಶ್ವದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬುಮ್ರಾ ಇದ್ದಾರೆ, ಇವರಲ್ಲಿ ಯಾರನ್ನೆಲ್ಲಾ ಮುಂಬೈ ಉಳಿಸಿಕೊಳ್ಳುತ್ತದೆ, ಯಾರನ್ನು ಬಿಡಲಿದೆ ಎಂಬ ಕುತೂಹಲ ಮೂಡಿದೆ.
ಇದರ ನಡುವೆ ಲಕ್ನೋ ಸೂಪರ್ ಜೈಂಟ್ಸ್ ಮಾಲಿಕ ಸಂಜೀವ್ ಗೋಯೆಂಕಾ (Sanjiv Goenka) ಅವರು ರೋಹಿತ್ ಶರ್ಮಾ (Rohit Sharma) ಅವರನ್ನು ಖರೀದಿಸಲೆಂದೇ 50 ಕೋಟಿ ರೂ ಪ್ರತ್ಯೇಕವಾಗಿರಿಸಿದ್ದಾರೆ ಎಂದು ಸುದ್ದಿಯೊಂದು ಹರಿದಾಡಿತ್ತು. ಇದೀಗ ಈ ವದಂತಿಗೆ ಗೋಯೆಂಕಾ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಪೋರ್ಟ್ಸ್ ತಕ್ ಗೆ ನೀಡಿದ ಸಂದರ್ಶನದ ವೇಳೆ ನಿರೂಪಕ ಈ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗೋಯೆಂಕಾ, “ರೋಹಿತ್ ಶರ್ಮಾ ಹರಾಜಿಗೆ ಬರುತ್ತಾರೆ ಎಂದು ನಿಮಗೆ ಗೊತ್ತಾ? ಅಥವಾ ಯಾರಿಗಾದರೂ ಗೊತ್ತಾ? ಮುಂಬೈ ಇಂಡಿಯನ್ಸ್ ಅವರನ್ನು ರಿಲೀಸ್ ಮಾಡುತ್ತಾ? ರೋಹಿತ್ ಹರಾಜಿನ ಭಾಗವಾಗುತ್ತಾರಾ? ಒಂದು ವೇಳೆ ಅವರು ಹರಾಜಿಗೆ ಬಂದರೂ ಕೇವಲ ಒಬ್ಬ ಆಟಗಾರನಿಗೆ ನಿಮ್ಮ ಬಜೆಟ್ ನ ಶೇ.50ರಷ್ಟು ಬಳಸಲು ಸಾಧ್ಯವಿಲ್ಲ. ಹಾಗಾದರೆ ಉಳಿದ 22 ಆಟಗಾರರನ್ನು ತೆಗೆದುಕೊಳ್ಳುವುದು ಹೇಗೆ” ಎಂದರು.
ಹಾಗಾದರೆ ಅವರು ನೀವು ಖರೀದಿಸಲು ಬಯಸುವ ಆಟಗಾರರ ಪಟ್ಟಿಯಲ್ಲಿದ್ದಾರಾ ಎಂದು ಸಂದರ್ಶನಕಾರ ಕೇಳಿದರು.
“ಪ್ರತಿಯೊಬ್ಬರನ್ನು ಒಂದು ವಿಶ್ ಲಿಸ್ಟ್ ಇರುತ್ತದೆ. ಉತ್ತಮ ಆಟಗಾರ, ಉತ್ತಮ ನಾಯಕ ನಿಮ್ಮ ತಂಡದಲ್ಲಿ ಇರಬೇಕು ಎಂದು ನೀವು ಬಯಸುತ್ತೀರಿ. ಆದರೆ ಇದು ಕೇವಲ ಬಯಕೆಯ ವಿಚಾರವಲ್ಲ. ಯಾರೆಲ್ಲಾ ಲಭ್ಯರಿದ್ದಾರೆ, ಯಾರೆಲ್ಲಾ ನಿಮಗೆ ಸಿಕ್ಕರು ಅಷ್ಟೇ ವಿಚಾರ ಇರುವುದು. ನಾನು ಯಾರನ್ನೂ ಬಯಸಬಹುದು, ಆದರೆ ಎಲ್ಲಾ ಫ್ರಾಂಚೈಸಿಗಳಲ್ಲೂ ಇದೇ ರೀತಿ ನಡೆಯುತ್ತದೆ. ನೀವು ಬಯಸಿದ ಎಲ್ಲರೂ ನಿಮಗೆ ಸಿಗುವುದಿಲ್ಲ” ಎಂದು ಸಂಜೀವ್ ಗೋಯೆಂಕಾ ಹೇಳಿದರು.