ಹರಪನಹಳ್ಳಿ: ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಪುರಸಭೆಯ 2017-18ನೇ ಸಾಲಿನ ಆಯ-ವ್ಯಯವನ್ನು ಮಂಡಿಸಲಾಯಿತು. ಆರಂಭಿಕ ನಗದು ಮತ್ತು ಬ್ಯಾಂಕ್ ಶಿಲ್ಕು 2,78,73,972 ಕೋಟಿರೂ ಸೇರಿದಂತೆ ಒಟ್ಟು ನಿರೀಕ್ಷಿತ ಆದಾಯ 49,61,15,282 ಕೋಟಿ ರೂ. ನಿರೀಕ್ಷಿತ ಖರ್ಚು 51,91,18,585 ಕೋಟಿ ರೂ.ಗಳಾಗಿದ್ದು, ಒಟ್ಟು 48.70 ಲಕ್ಷರೂ.ಗಳ ಉಳಿತಾಯ ಬಜೆಟ್‌ಗೆ ಸಭೆ ಅನುಮೋದನೆ ನೀಡಿತು.
ಬಜೆಟ್ ಪ್ರತಿ ಓದಿದ ನಂತರ ಅಧ್ಯಕ್ಷ ಎಚ್. ಕೆ.ಹಾಲೇಶ್ ಮಾತನಾಡಿ, ಪಟ್ಟಣದ ಜನತೆಗೆ ಸಮರ್ಪಕ ಕಡಿಯುವ ನೀರು, ನಗರ ನೈರ್ಮಲ್ಯ, ಬೀದಿ ದೀಪಗಳ ವ್ಯವಸ್ಥಿತ ನಿರ್ವಹಣೆ, ಸಾರ್ವಜನಿಕ ಕೆಲಸಗಳಿಗೆ ಕಾಲಮಿತಿ ನಿಗಧಿದಿ, ತ್ವರಿತವಾಗಿ ಕಡತಗಳ ವಿಲೇವಾರಿಗೆ ಕ್ರಮ, ಪುರಸಭೆ ಆಸ್ತಿಗಳ ಲೆಕ್ಕ ಹಾಗೂ ವ್ಯವಸ್ಥಿತ ನಿರ್ವಹಣೆ, ದಾಖಲೀಕರಣ ಮತ್ತು ಗಣಕೀಕರಣ, ಪಟ್ಟಣದ ಸೌಂದರ್ಯಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಜೆಟ್ ಅಂಶಗಳ ಕುರಿತ ಚರ್ಚೆ ಸಂದರ್ಭದಲ್ಲಿ ಸದಸ್ಯ ಬಿ.ಮಹಬೂಬ್‌ಸಾಬ್ ಅವರು, ಪಟ್ಟಣದ ವಾರ್ಡ್‌ಗಳಲ್ಲಿ ಸ್ಥಳ ಗುರುತಿಸುವ ಬಗ್ಗೆ ನಾಮಫಲಕ ಅಳವಡಿಕೆ, ಡಿವೈಡರ್ ನಿರ್ಮಾಣ ಮತ್ತು ಗ್ರಿಲ್ ಅಳವಡಿಸುವ ಕಾರ್ಯ ತ್ವರಿತವಾಗಿ ಆಗಬೇಕೆಂದರು. ಅನೇಕ ಸಾರ್ವಜನಿಕ ಶೌಚಾಲಯಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಕೂಡಲೇ ಸಂಪರ್ಕ ಕಲ್ಪಿಸಿ ಎಂದು ಸದಸ್ಯರಾದ ಕವಿತಾವಾಗೀಶ್, ವಿಜಯಲಕ್ಷಿ ಕೋರಿದರು.
ಘನತಾಜ್ಯ ವಿಲೇವಾರಿಗೆ ತಕ್ಷಣವೇ ಕ್ರಮ ಜರುಗಿಸಬೇಕೆಂದು ಸದಸ್ಯ ಬೂದಿ ನವೀನ್ ಹೇಳಿದರು. ಸದಸ್ಯ ವೆಂಕಟೇಶ್ ಅವರು, ಬೇಸಿಗೆ ಆಗಮಿಸಿರುವುದರಿಂದ ಕುಡಿಯುವ ನೀರಿಗೆ ಅದ್ಯತೆ ಕೊಡಬೇಕು. ಓವರ್ ಟ್ಯಾಂಕರ್ ನಿರ್ಮಿಸಿ ಎಂದಾಗ ಈಗಾಗಲೇ ಆಶ್ರಯ ಕಾಲೋನಿಗೆ ನದಿ ನೀರು ಕಲ್ಪಿಸಲು ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಾಪೂಜಿ ನಗರ ಸೇರಿದಂತೆ ಅಗತ್ಯವಿರುವೆಡೆ ಪೈಪ್‌ಲೈನ್ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಎಚ್. ಕೆ.ಹಾಲೇಶ್ ಉತ್ತರಿಸಿದರು.
ಪಟ್ಟಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಎಂದು ಸದಸ್ಯೆ ಪ್ರಭಾಅಜ್ಜಣ್ಣ, ವೆಂಕಟೇಶ್ ಹೇಳಿದಾಗ ನದಿ ನೀರು ಸರಬರಾಜು ಆಗುತ್ತಿರುವ ಪಟ್ಟಣಕ್ಕೆ ಶುದ್ದ ನೀರಿನ ಘಟಕ ತೆರೆಯುವಂತಿಲ್ಲ. ಏಕೆಂದರೆ ನೀರಿನ ಗುಣಮಟ್ಟದ ಬಗ್ಗೆ ಅನುಮಾನ ಮೂಡುತ್ತದೆ. ಅದ್ದರಿಂದ ಪುರಸಭೆ ಅನುದಾನದಲ್ಲಿ ಸಾಧ್ಯವಿಲ್ಲ. ಖಾಸಗಿಯವರು ನಿರ್ಮಾಣ ಮಾಡಿದ್ದಲ್ಲಿ ಸಹಕಾರ ನೀಡಿವುದಾಗಿ ಅಧ್ಯಕ್ಷ ಎಚ್. ಕೆ.ಹಾಲೇಶ್, ಮುಖ್ಯಾಧಿಧಿಕಾರಿ ಐ.ಬಸವರಾಜ್ ಪ್ರತಿಕ್ರಿಯಿಸಿದರು.
ಸದಸ್ಯ ಡಂಕಿ ಇಮ್ರಾನ್ ಅವರು, ಪಟ್ಟಣದ ಬಾವಿಗಳನ್ನು ಸ್ವತ್ಛಗೊಳಿಸಿ, ಅವುಗಳಿಗೆ ಮೋಟರ್ ಅಳವಡಿಸಿ ಜನರಿಗೆ ನೀರು ಒದಗಿಸುವ ಕುರಿತು ಬಜೆಟ್‌ನಲ್ಲಿ ಹಣ ಮೀಸಲಿಡಿ ಎಂದಾಗ ಅಂದಾಜು 33 ಬಾವಿಗಳಿದ್ದು, 13 ಬಾವಿಗಳಲ್ಲಿ ನೀರಿದೆ. ಇಂತಹ ಬಾವಿಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಧಿಕಾರಿಗಳಿಗೆ ಪ್ರಸ್ತಾವನೆ ಕಳಿಸಲಾಗಿದೆ. ಹಣ ಬಿಡುಗಡೆಯಾದ ನಂತರ ಕ್ರಮ ಜರುಗಿಸುವುದಾಗಿ ಅಧ್ಯಕ್ಷ ಎಚ್.ಕೆ.ಹಾಲೇಶ್ ತಿಳಿಸಿದರು.
ಒಟ್ಟು 2.1 ಕೋಟಿರೂ ಅನುದಾನಕ್ಕೆ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ, ಒಳ ಚರಂಡಿ, ಘನ ತಾಜ್ಯ ವಿಲೇವಾರಿ, ಚರಂಡಿ ಕಾಮಗಾರಿ, ಉದ್ಯನವನ ಅಭಿವೃದ್ದಿ, ರಸ್ತೆ ಕಾಮಗಾರಿ, ಬೀದಿ ದೀಪ ನಿರ್ವಹಣೆ, ಸನ್ಮಾನ ನವೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಬೇಕಿದೆ. ಹಾಗಾಗಿ ಇನ್ನೆರಡು ದಿನಗಳಲ್ಲಿ ಸದಸ್ಯರು ತಮ್ಮ ವಾರ್ಡ್‌ಗಳ ಕಾಮಗಾರಿ ಪಟ್ಟಿ ನೀಡಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳಿಸಲಾಗುವುದು ಎಂದು ಮುಖ್ಯಾಧಿಕಾರಿ ಐ.ಬಸವರಾಜ್ ತಿಳಿಸಿದರು. ಉಪಾಧ್ಯಕ್ಷ ಸತ್ಯನಾರಾಯಣ ಉಪಸ್ಥಿತರಿದ್ದರು.