ಹೊಸದಿಲ್ಲಿ: ಹಲವು ಭೂ ಅಕ್ರಮ ಪ್ರಕರಣಗಳಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್ ವಾದ್ರಾಗೆ ಸಂಬಂಧಿಸಿದ ಬಿಕಾನೇರ್‌ನಲ್ಲಿರುವ ಭೂಮಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಈ ಸ್ವತ್ತಿನ ಮೌಲ್ಯ 4.62 ಕೋ. ರೂ. ಎಂದು ಜಾರಿ ನಿರ್ದೇಶನಾಲಯ ಹೇಳಿದೆ. 2015ರಲ್ಲಿ ನಡೆದ ವಹಿವಾಟಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕ್ರಿಮಿನಲ್ ಕೇಸ್ ಅನ್ನು ನೋಂದಾಯಿಸಿಕೊಂಡಿತ್ತು. ಭೂಮಿಯನ್ನು ಮಂಜೂರು ಮಾಡುವಲ್ಲಿ ಅಕ್ರಮ ನಡೆದಿರಬಹುದಾದ ಸಾಧ್ಯತೆಯಿದೆ ಎಂದು ಅಲ್ಲಿನ ತಹಶೀಲ್ದಾರ್ ರಾಜಸ್ಥಾನ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ. ಈ ಪ್ರದೇಶ ಭಾರತ-ಪಾಕಿಸ್ತಾನ ಗಡಿಯಲ್ಲಿರುವುದರಿಂದ ಸಹಜವಾಗಿಯೇ ಈ ಪ್ರಕರಣ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಮಂಗಳವಾರ ಜೈಪುರದಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ವಾದ್ರಾ ಮತ್ತವರ ತಾಯಿ ಮೌರೀನ್ ಹಾಜರಾಗಿದ್ದರು. ಪತ್ನಿ ಪ್ರಿಯಾಂಕಾ ವಾದ್ರಾ ಕೂಡ ಜಾರಿ ನಿರ್ದೇಶನಾಲಯದವರೆಗೆ ಆಗಮಿಸಿ ಪತಿ ರಾಬರ್ಟ್‌ರನ್ನು ಕಳುಹಿಸಿಕೊಟ್ಟಿದ್ದರು.