ಹುಬ್ಬಳ್ಳಿ: ಮಹಾನಗರ ಪಾಲಿಕೆಯ 2017-18ನೇ ಸಾಲಿಗೆ ಒಟ್ಟಾರೆ 4.30ಕೋಟಿ ರೂ.ಗಳ ಉಳಿತಾಯ ಆಯ-ವ್ಯಯವನ್ನು ಮಂಡಿಸಲಾಗಿದ್ದು, ತೆರಿಗೆ ಹೊರೆ ಇಲ್ಲದೆ ವಿವಿಧ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಒಟ್ಟು 548.26 ಕೋಟಿ ರೂ.ಗಳ ಆದಾಯ ನಿರೀಕ್ಷೆ, 543.95 ಕೋಟಿ ರೂ.ಗಳ ಅಂದಾಜು ವೆಚ್ಚದ ಮುಂಗಡಪತ್ರವನ್ನು ತೆರಿಗೆ ನಿರ್ಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ವೀರಣ್ಣ ಸವಡಿ ಸೋಮವಾರ ಮಂಡನೆ ಮಾಡಿದರು.
ಆದಾಯ ಮೂಲ: ಪಾಲಿಕೆಗೆ ಆದಾಯ ಮೂಲವಾಗಿ ಆಸ್ತಿ ತೆರಿಗೆಯಿಂದ 2017-18ನೇ ಸಾಲಿಗೆ ಅಂದಾಜು 38.70ಕೋಟಿ ರೂ. ಹಾಗೂ ಆಸ್ತಿ ತೆರಿಗೆ ದಂಡವಾಗಿ 6 ಕೋಟಿ ರೂ. ಗಳನ್ನು ನಿರೀಕ್ಷಿಸಲಾಗಿದೆ. ಸ್ಥಿರಾಸ್ತಿ ವರ್ಗಾವಣೆ ಅದಿಭಾರ ಶುಲ್ಕದಿಂದ ಸುಮಾರು 1.40 ಕೋಟಿ ರೂ., ಖಾತೆ ಬದಲಾವಣೆ ಶುಲ್ಕವಾಗಿ 95ಲಕ್ಷ ರೂ., ಉಪಕರಣ ಸೇವಾ ಶುಲ್ಕವಾಗಿ 96ಲಕ್ಷ ರೂ., ವಾಣಿಜ್ಯ ಸಂಕೀರ್ಣ ಬಾಡಿಗೆ ರೂಪದಲ್ಲಿ 4.06 ಕೋಟಿ ರೂ.,
ಕೈಗಾರಿಕೆ ಉದ್ದಿಮೆ ಪರವಾನಗಿಯಿಂದ 5.16ಕೋಟಿ ರೂ., ಸಾರ್ವಜನಿಕ ಕಾಮಗಾರಿ-ರಸ್ತೆ ಕಡಿಯುವುದು, ಭೂಗತ ತಂತಿಗಳ ಬಾಡಿಗೆಯಾಗಿ 13.70 ಕೋಟಿ ರೂ., ಜನನ ಮರಣ ಪ್ರಮಾಣ ಪತ್ರ ಮತ್ತು ಸಾರ್ವಜನಿಕ ಆರೋಗ್ಯದಿಂದ 1.16ಕೋಟಿ ರೂ., ಘನ ತ್ಯಾಜ್ಯ ನಿರ್ವಹಣೆ ಶುಲ್ಕ, ಗೊಬ್ಬರ ಮಾರಾಟದಿಂದ 16.91ಕೋಟಿ ರೂ. ಗಳನ್ನು ನಿರೀಕ್ಷಿಸಲಾಗಿದೆ. ಸಾರ್ವಜನಿಕ ಸೌಲಭ್ಯಗಳು, ನೆಹರು ಮೈದಾನ ಶುಲ್ಕದಿಂದ 21.45ಲಕ್ಷ ರೂ.,
ಮಾರುಕಟ್ಟೆ ಶುಲ್ಕಗಳಿಂದ 1.31ಕೋಟಿ ರೂ., ಜಾಹೀರಾತು ಶುಲ್ಕವಾಗಿ 2.19ಕೋಟಿ ರೂ., ಇತರೆ ರಾಜಸ್ವ ಸ್ವೀಕೃತಿಗಳು, ಒಳಚರಂಡಿ ಶುಲ್ಕ, ಬ್ಯಾಂಕ್ ಬಡ್ಡಿ ಇತ್ಯಾದಿಯಾಗಿ 7ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ. ಅದೇ ರೀತಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿವಿಧ ರೀತಿಯ ಅನುದಾನ ರೂಪದಲ್ಲಿ ಸುಮಾರು 255.23 ಕೋಟಿ ರೂ. ಗಳನ್ನು ನಿರೀಕ್ಷಿಸಲಾಗಿದೆ.
ವೆಚ್ಚದ ಬಾಬತ್ತು: ಪಾಲಿಕೆಯಲ್ಲಿನ ವಿವಿಧ ಕಾರ್ಯಗಳಿಗೆ ವೆಚ್ಚದ ಬಾಬತ್ತಿನಡಿ ಸಿಬ್ಬಂದಿ ವೇತನ, ಸೌಲಭ್ಯಗಳಿಗೆ 57.76ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದೆ. ಹೊರಗುತ್ತಿಗೆ ಮಾನವ ಸಂಪನ್ಮೂಲಕ್ಕೆ 5.62 ಕೋಟಿ ರೂ., ಪಾಲಿಕೆಯಿಂದ ಯೋಜನಾ ವಂತಿಕೆಯಾಗಿ 5ಕೋಟಿ ರೂ., ಘನ ತ್ಯಾಜ್ಯ ನಿರ್ವಹಣೆಗೆ 36 ಕೋಟಿ ರೂ.,
ಸಾರ್ವಜನಿಕ ಬೀದಿ ದೀಪ ನಿರ್ವಹಣೆ ಹಾಗೂ ಅಭಿವೃದ್ಧಿಗೆ 27.81ಕೋಟಿ ರೂ., ಉದ್ಯಾನವನ ಅಭಿವೃದ್ಧಿಗೆ 11.83ಕೋಟಿ ರೂ., ಒಳಚರಂಡಿ ಮತ್ತು ನಾಲಾಗಳ ಅಭಿವೃದ್ಧಿಗೆ 24.06ಕೋಟಿ ರೂ., ಕಂಪ್ಯೂಟರ್ ಇತರೆ ಸಲಕರಣೆಗಳಿಗೆ 1.65 ಕೋಟಿ ರೂ., ಸಾರ್ವಜನಿಕ ಮೂಲಭೂತ ಆಸ್ತಿಗಳ ನಿರ್ವಹಣೆಗೆ 14.26 ಕೋಟಿ ರೂ.,
ಸಾರ್ವಜನಿಕ ಮೂಲಭೂತ ಆಸ್ತಿಗಳ ನಿರ್ಮಾಣ, ಬಂಡವಾಳ ಲೆಕ್ಕ ಶೀರ್ಷಿಕೆಯಡಿ 22.22ಕೋಟಿ ರೂ., ಸಾರ್ವಜನಿಕ ರಸ್ತೆಗಳು, ಕಲ್ಲು ಹಾಸು, ಪಾದಚಾರಿ ರಸ್ತೆ, ರಸ್ತೆಬದಿ ಚರಂಡಿಗೆ 60.77ಕೋಟಿ ರೂ., ನೀರು ಸರಬರಾಜುವಿಗೆ 16.21ಕೋಟಿ ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿದೆ.