Advertisement

ದೇಶಸೇವೆಗೆ ದಾರಿ ತೋರಿದ ಗೆಳೆಯನ 30 ರೂ.! 

10:20 AM Feb 09, 2018 | Team Udayavani |

ಅವರ ಮನಸ್ಸಿನಲ್ಲಿದ್ದದ್ದು ದೇಶಪ್ರೇಮವೊಂದೇ. ಕೈಯಲ್ಲಿ ಕಾಸಿಲ್ಲದಿದ್ದರೂ ಸೇನೆ ಸೇರಲೇಬೇಕೆಂಬ ಉತ್ಕಟ ಆಕಾಂಕ್ಷೆ ಅವರದ್ದಾಗಿತ್ತು. ಇದಕ್ಕೆ ಗೆಳೆಯ ನೆರವಾದರು. ಪರಿಣಾಮ ಅವರು ದೇಶವೇ ಹೆಮ್ಮೆ ಪಡುವ ವೀರ ಸೈನಿಕರಾದರು. 

Advertisement

ಮನೆಯಲ್ಲಿ ತೀರದ ಬಡತನ. ಆದರೂ ಆ ದಂಪತಿ ಕೂಲಿ ಮಾಡಿ 7 ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸಿದ್ದಲ್ಲದೆ ಓರ್ವನನ್ನು ಯೋಧನನ್ನಾಗಿಸಲೂ ಸಫ‌ಲರಾದರು. ಹೆತ್ತವರು, ಸೋದರನ ಬೆಂಬಲದೊಂದಿಗೆ ಸೇನೆ ಸೇರಬೇಕೆಂಬ ತೀರದ ತುಡಿತದಿಂದ ಸಾಧಿಸಿ ಯಶಸ್ವಿಯಾದದ್ದು ಸುಬ್ರಹ್ಮಣ್ಯ ಕುಲ್ಕುಂದದ ಹವಾಲ್ದಾರ್‌ ಸಿ.ಡಿ. ದಿನೇಶ್‌ ಚಿಮ್ನೂರು.

30 ರೂ. ಸೇನೆಗೆ ಸೇರಿಸಿತು
ಮಡಿಕೇರಿಯಲ್ಲಿ ನಿರ್ವಾಹಕರಾಗಿ ದುಡಿಯುತ್ತಿದ್ದ ಸಿ.ಡಿ. ತೀರ್ಥರಾಮ ಪತ್ರಿಕೆಯಲ್ಲಿ ಸೇನಾ ನೇಮಕಾತಿ ಬಗ್ಗೆ ಕಂಡು
ತಮ್ಮ ದಿನೇಶ್‌ಗೆ ಕರೆ ಮಾಡಿ, ಅರ್ಜಿ ಸಲ್ಲಿಸಲು ಸಲಹೆ ನೀಡಿದ್ದರು. ಬಳಿಕ ದಿನೇಶ್‌ ಅವರು ಸಂದರ್ಶನಕ್ಕೆ ತೆರಳಿದ್ದರು. ಆದರೆ ನಾಪೋಕ್ಲುವಿನಲ್ಲಿ ನಡೆದ ನೇಮಕಾತಿಗೆ ತೆರಳಲು ಹಣವಿರಲಿಲ್ಲ. ಹೀಗಾಗಿ ಅಣ್ಣ ಮಡಿಕೇರಿ ಪೇಟೆಗೆ ಬರಲು ಹೇಳಿದ್ದರು. ಅಲ್ಲಿಗೂ ತೆರಳಲು ಹಣವಿರಲಿಲ್ಲ. ಆ ಹೊತ್ತಿಗೆ ದಿನೇಶ್‌ ಅವರ ನೆರವಿಗೆ ಬಂದಿದ್ದು ಗೆಳಯ ಶೇಖರ. ದಿನೇಶರ ಆಸಕ್ತಿ ಕಂಡು 30 ರೂ. ನೀಡಿದ್ದರು. ಬಳಿಕ ನೇಮಕಾತಿಗೆ ಹಾಜರಾಗಿ 1994ರಲ್ಲಿ ಬಿಎಸ್‌ಎಫ್ ಸೇರಿದ್ದರು.

ಪಶ್ಚಿಮ ಬಂಗಾಲದ ಡಾರ್ಜಿಲಿಂಗ್‌ನ ಬೈಕಾರಪುರದಲ್ಲಿ ತರಬೇತಿ ಪಡೆದು ಬಳಿಕ ಶ್ರೀನಗರದ ಬಿಎಸ್‌ಎಫ್ ನ 34ನೇ ಬೆಟಾಲಿಯನ್‌ಗೆ ನಿಯೋಜನೆಯಾದರು. ಬಳಿಕ ಪಶ್ಚಿಮ ಬಂಗಾಲ ಯೂನಿಟ್‌ನಲ್ಲಿ ಕರ್ತವ್ಯ ನಿರ್ವಹಿಸಿದರು. ಬಾಂಗ್ಲಾ-ಭಾರತ ಗಡಿಯ ಸಿಲಿಗುರಿಯಲ್ಲಿ 1999ರವರೆಗೆ ಕರ್ತವ್ಯ ನಿರ್ವಹಿಸಿದ್ದರು.

ವಿದ್ಯಾಭ್ಯಾಸ, ಕುಟುಂಬ 
ಪಶ್ಚಿಮ ಬಂಗಾಲದಲ್ಲಿ ಬಿಎಸ್‌ಎಫ್ (ಗಡಿಭದ್ರತಾ ಪಡೆ)ನ 24ನೇ ಬೆಟಾಲಿಯನ್‌ನ ಯೋಧರಾಗಿರುವ ದಿನೇಶ್‌ ಮೂಲತಃ ಕೊಡಗಿನವರು. ಮರ್ಗೋಡು ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಬಳಿಕ ಭಾರತೀಯ ಪ್ರೌಢಶಾಲೆಯಲ್ಲಿ ಹೈಸ್ಕೂಲ್‌ ವಿದ್ಯಾಭ್ಯಾಸ ನಡೆಸಿದರು. ಅಲ್ಲೇ ಪಿಯುಸಿ ಓದುತ್ತಿದ್ದಾಗ ಬಿಎಸ್‌ಎಫ್ ಗೆ ಆಯ್ಕೆಯಾದರು. ದುಗ್ಗಪ್ಪ-ದೇವಕಿ ದಂಪತಿ ಪುತ್ರರಾದ ದಿನೇಶ್‌ರ ಸೋದರಿ ಕೂಡ ಸಿಆರ್‌ಪಿಎಎಫ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ದಿನೇಶ್‌ ಅವರ ಪತ್ನಿ ವಾಣಿ ಅವರು ಸುಬ್ರಹ್ಮಣ್ಯ ಸ.ಹಿ.ಪ್ರಾ. ಶಾಲಾ ಶಿಕ್ಷಕಿಯಾಗಿದ್ದಾರೆ. ಪುತ್ರಿ ತೃಪ್ತಿ ಕುಮಾರಸ್ವಾಮಿ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
 

Advertisement

ಪ್ರಧಾನಿಗಳಿಗೆ ಭದ್ರತೆ
2006ರಲ್ಲಿ ಭಡ್ತಿ ಹೊಂದಿದ ಬಳಿ ವಿಶೇಷ ರಕ್ಷಣಾ ದಳದ ದಿಲ್ಲಿ ಕಮಾಂಡೋ ಆಗಿ ದಿನೇಶ್‌ ನಿಯೋಜನೆಯಾಗಿದ್ದರು. ಈ ವೇಳೆ ಮಾಜಿ ಪ್ರಧಾನಿಗಳಾದ ಅಟಲ್‌ಬಿಹಾರಿ ವಾಜಪೇಯಿ, ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲೂ ಕಮಾಂಡೋ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಮಡಿಲಲ್ಲೇ ಪ್ರಾಣ ಬಿಟ್ಟ ಗೆಳೆಯ
‘ಶ್ರೀನಗರಕ್ಕೆ ನಿಯೋಜನೆಗೊಂಡಿದ್ದಾಗ ಉಗ್ರರ ಉಪಟಳ ವಿಪರೀತವಿತ್ತು. ಉಗ್ರರು ನೆಲಬಾಂಬ್‌ ಸ್ಫೋಟಿಸಿ ಯೋಧರ ಹತ್ಯೆಗೈಯುತ್ತಿದ್ದರು. ಉಗ್ರರು ಸ್ಫೋಟಿಸಿದ್ದ ಬಾಂಬ್‌ಗ ಸ್ನೇಹಿತ ಯೋಧನೊಬ್ಬ ತೀವ್ರ ಗಾಯಗೊಂಡಿದ್ದ. ಆತನನ್ನು ಎತ್ತಿ ತೊಡೆ ಮೇಲೆ ಮಲಗಿಸಿಕೊಂಡಿದ್ದೆ. ಆತ ಅಲ್ಲೇ ವೀರ ಮರಣವನ್ನಪ್ಪಿದ’ ಎಂದು ಗದ್ಗದಿತರಾಗುತ್ತಾರೆ ದಿನೇಶ್‌. ನಿಯೋಜನೆಗೊಂಡಿದ್ದ ಸ್ಥಳದ ಪಕ್ಕದಲ್ಲೇ ನಿರಂತರ ಫೈರಿಂಗ್‌ ನಡೆಯುತ್ತಿತ್ತು. ಉಗ್ರರು ಪಕ್ಕದ ಗುಡ್ಡಗಳಲ್ಲಿ ಅವಿತು ನೆಲ ಕೊರೆದು ಅದರೊಳಗೆ ಬಾಂಬ್‌ ಇರಿಸುತ್ತಿದ್ದರು. ಆಧುನಿಕ ಬ್ಯಾಟರಿ ಚಾಲಿತ ಉಪಕರಣ ಬಳಸಿ ಬಾಂಬ್‌ ಸ್ಫೋಟಿಸುತ್ತಿದ್ದರು. ಇದರಿಂದ ಕಣ್ಣೆದುರೇ ಅನೇಕ ಯೋಧರು ಪ್ರಾಣತೆತ್ತರು ಎಂದು ಹೇಳುತ್ತಾರೆ.

ವಿಶೇಷ ಪ್ರಶಸ್ತಿ 
2016ರಲ್ಲಿ ಸ್ಪೆಷಲ್‌ ಪೊಲೀಸ್‌ ಮೆಡಲ್‌ ದಿನೇಶ್‌ ಅವರಿಗೆ ಸಿಕ್ಕಿತ್ತು. ಅವರೀಗ ಪಶ್ಚಿಮ ಬಂಗಾಲದ ಕುಚುಬಿಹಾರ್‌ನಲ್ಲಿ
ಹವಾಲ್ದಾರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಸೈನಿಕರಿಗೆ ಸ್ಥಾನಮಾನ ಸಿಗಬೇಕು
ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವುದು ಅಷ್ಟು ಸುಲಭವಲ್ಲ. ದೇಶದ ಜನತೆ ಇಂದು ನೆಮ್ಮದಿಯಾಗಿ ನಿದ್ರಿಸಲು ಗಡಿಯಲ್ಲಿ ಇರುವ ಸೈನಿಕರೇ ಕಾರಣ. ಹೀಗಾಗಿ ದೇಶ ಕಾಯುವ ಸೈನಿಕರಿಗೆ ಗೌರವ ಸ್ಥಾನಮಾನ, ಎಲ್ಲವೂ ಸಿಗಬೇಕು.
-ಹವಾಲ್ದಾರ್‌ ದಿನೇಶ್‌

ನನಗೂ ಹೆಮ್ಮೆ
ದೇಶ ಕಾಯುವ ಸೈನಿಕನ ಪತ್ನಿ ಎಂಬುದಕ್ಕೆ ನನಗೆ ಅತೀವ ಹೆಮ್ಮೆಯಿದೆ. ಶಿಕ್ಷಕಿಯಾಗಿ ಬೋಧನೆ ಮಾಡುವ ನಾನು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೈಗೂಡಿಸಲು ಅರಿವು ಮೂಡಿಸುತ್ತೇನೆ.
-ವಾಣಿ ದಿನೇಶ್‌ ಸಿ.ಡಿ. (ಪತ್ನಿ)

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next