Advertisement
ಚಿತ್ರ ಕಲಾ ವೈಭವ: ಚಿತ್ರಕಲಾ ಪರಿಷತ್ತಿನ ಆವರಣ ಸೇರಿದಂತೆ ಅಕ್ಕ-ಪಕ್ಕದ ರಸ್ತೆಗಳಲ್ಲಿ ಚಿತ್ರಕಲೆಯ ವೈಭವ ಪ್ರದರ್ಶನಗೊಂಡಿತ್ತು. ಈ ಚಿತ್ರಸಂತೆ ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು. ಚಿತ್ರಸಂತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ಸುದರ್ಶನ ಶೆಟ್ಟಿ, ಸಚಿವರಾದ ಕೆ.ಜೆ.ಜಾರ್ಜ್, ಎಚ್.ಆಂಜನೇಯ, ಮೇಯರ್ ಪದ್ಮಾವತಿ ಇದಕ್ಕೆ ಸಾಕ್ಷಿಯಾಗಿದ್ದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Related Articles
Advertisement
20 ಕೋಟಿ ವೆಚ್ಚದಲ್ಲಿ ಚಿತ್ರಕಲಾ ಮಹಾವಿದ್ಯಾಲಯ: ಸಿಎಂ ಸಿದ್ದುಬೆಂಗಳೂರು: ಚಿತ್ರಕಲೆ ಹಾಗೂ ಚಿತ್ರಕಲಾವಿದರಿಗೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ನಗರದ ರಾಜರಾಜೇಶ್ವರಿನಗರದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಚಿತ್ರಕಲಾ ಮಹಾವಿದ್ಯಾಲಯ ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 14ನೇ ಚಿತ್ರಸಂತೆ ಉದ್ಘಾಟಿಸಿ ಮಾತನಾಡಿದರು. ಈ ಚಿತ್ರಕಲಾ ಮಹಾವಿದ್ಯಾಲಯದ ಸ್ಥಾಪನೆಯಿಂದ ಚಿತ್ರಕಲೆ ಹಾಗೂ ಚಿತ್ರಕಲಾವಿದರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು. ಒಟ್ಟು 20 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗುತ್ತಿರುವ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಪ್ರತಿ ವರ್ಷ 4 ಕೋಟಿ ರೂ. ಅನುದಾನ ನೀಡಲಾಗುವುದು. ಇಡೀ ದೇಶಕ್ಕೆ ಮಾದರಿ ವಿಶ್ವವಿದ್ಯಾಲಯ ಇದಾಗಬೇಕಾಗಿದ್ದು, ಚಿತ್ರಕಲಾವಿದರಿಗೆ ತರಬೇತಿ ಹಾಗೂ ಪ್ರೋತ್ಸಾಹ ಇಲ್ಲಿಂದ ಸಿಗಬೇಕು ಎಂದರು. ಇದೇ ವೇಳೆ ಮಾತನಾಡಿದ ಚಿತ್ರಕಲಾಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಹಿಂದಿನ ಎಲ್ಲ ಸರ್ಕಾರಗಳು ಚಿತ್ರಕಲಾ ಪರಿಷತ್ತಿಗೆ ಉತ್ತಮ ಸಹಕಾರ ನೀಡುತ್ತಲೇ ಬಂದಿವೆ. ಚಿತ್ರಸಂತೆಗೆ ಈಗಿನ ಸರ್ಕಾರ 1.50 ಕೋಟಿ ರೂ. ಅನುದಾನ ನೀಡಿದೆ. ಅದೇ ರೀತಿ ಚಿತ್ರಕಲಾ ಮಹಾವಿದ್ಯಾಲಯ ಸ್ಥಾಪನೆಗೆ 20 ಕೋಟಿ ರೂ. ಪೈಕಿ ಈಗಾಗಲೇ 8 ಕೋಟಿ ರೂ. ಬಿಡುಗಡೆ ಮಾಡಿದೆ. ಈ ವರ್ಷ ಮತ್ತೇ 4 ಕೋಟಿ ರೂ. ಬರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲೇ ಮೊದಲ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು. 3 ಕೋಟಿ ಮೊತ್ತದ ಕಲಾಕೃತಿಗಳ ಮಾರಾಟ
ಬೆಂಗಳೂರು: ಭಾನುವಾರ ನಡೆದ 14ನೇ ಚಿತ್ರಸಂತೆಯಲ್ಲಿ ಸುಮಾರು 3 ಕೋಟಿ ರೂ. ಮೊತ್ತದ ಕಲಾಕೃತಿಗಳ ಮಾರಾಟವಾಗಿವೆ. ಇದರಲ್ಲಿ 100 ರೂ.ನಿಂದ ಹಿಡಿದು ಒಂದು ಲಕ್ಷ ರೂ. ಮೊತ್ತದ ಕಲಾಕೃತಿಗಳಿವೆ. ಮುಂಬೈ ಮೂಲದ ಕಲಾವಿದರೊಬ್ಬರ ಕಲಾಕೃತಿ 2.5 ಲಕ್ಷ ರೂ. ಮೊತ್ತಕ್ಕೆ ಮಾರಾಟವಾಗಿದ್ದು, ಈ ಬಾರಿಯ ಚಿತ್ರಸಂತೆಯಲ್ಲಿ ಕಲಾಕೃತಿ ಮಾರಾಟ ಆದ ಗರಿಷ್ಠ ಮೊತ್ತ ಇದಾಗಿದೆ. ಕಳೆದ ವರ್ಷದ ಚಿತ್ರಸಂತೆ ವೇಳೆ 2 ಕೋಟಿ ರೂ. ಮೊತ್ತದ ಕಲಾಕೃತಿಗಳ ಮಾರಾಟ ಆಗಿತ್ತು. ಈ ಬಾರಿ ಅದಕ್ಕಿಂತ ಒಂದು ಕೋಟಿ ರೂ. ಹೆಚ್ಚು ವಹಿವಾಟು ನಡೆದಿದೆ ಎಂದು ಚಿತ್ರಕಲಾ ಪರಿಷತ್ತಿನ ಮೂಲಗಳು ತಿಳಿಸಿವೆ. ಅಂಗವೈಕಲ್ಯತೆ ಮೆಟ್ಟಿ ನಿಂತ ಕಲಾವಿದೆ
ಬೆಂಗಳೂರು: ಕೇರಳ ಮೂಲದ ಅಂಗವಿಕಲ ಕಲಾವಿದೆ ಸುನೀತಾ ಥಾರಿಪಣಿಕ್ಕರ್ ಈ ಬಾರಿಯ ಚಿತ್ರಸಂತೆಯ ಆಕರ್ಷಣೆಯಾಗಿದ್ದಳು. ಈಕೆಯ ಪ್ರತಿಭೆ ಕಂಡು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆರಗಾಗಿ ಶಹಬಾಸ್‌ಗಿರಿ ನೀಡಿದರು. ತನ್ನೆರಡು ಕೈಗಳ ಸ್ವಾಧೀನ ಕಳೆದುಕೊಂಡಿರುವ ಸುನೀತಾ ಬಾಯಲ್ಲಿ ಕುಂಚ ಹಿಡಿದು ಕಲಾಕೃತಿ ಬಿಡುಸುತ್ತಿದ್ದ ದೃಶ್ಯ ನೆರೆದವರನ್ನು ಹುಬ್ಬೇರಿಸುವಂತೆ ಮಾಡಿತ್ತು. ದೇಶ-ವಿದೇಶಗಳ ಹಲವು ಚಿತ್ರಕಲಾ ಪ್ರದರ್ಶನಗಳಲ್ಲಿ ಸುನೀತಾ ತನ್ನ ಪ್ರತಿಭೆಯ ಪ್ರದರ್ಶನ ಮಾಡಿದ್ದಾಳೆ. ಸ್ಥಳದಲ್ಲೇ ಬಿಡಿಸಿದ ಇವರ ಕಲಾಕೃತಿಗಳು ಲಕ್ಷಾಂತರ ರೂ.ಗಳಲ್ಲಿ ಮಾರಾಟ ಆಗಿವೆ. ಚಿತ್ರಸಂತೆಯಲ್ಲಿ ಸಂಕ್ರಾಂತಿಯ ಶುಭಾಶಯ ಹೇಳಿದ್ದು ವಿಶೇಷವಾಗಿತ್ತು. 15ನೇ ಚಿತ್ರಸಂತೆಗೆ ದಿನಾಂಕ ನಿಗದಿ
ಬೆಂಗಳೂರು: 15ನೇ ಚಿತ್ರಸಂತೆಗೆ ದಿನಾಂಕ ನಿಗದಿಯಾಗಿದೆ. 15ನೇ ಚಿತ್ರಸಂತೆಯನ್ನು 2018ರ ಜನವರಿ 7ರಂದು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಇದೇ ವೇಳೆ ಪ್ರಕಟಿಸಿದರು. ಎಟಿಎಂ, ಸ್ವೆ„ಪ್ ಮಶಿನ್ ವ್ಯವಸ್ಥೆ
ಬೆಂಗಳೂರು: ಚಿತ್ರಸಂತೆಗೆ ಬರುವ ಕಲಾಪ್ರಿಯರು ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚಿತ್ರಕಲಾ ಪರಿಷತ್ತಿನ ಕೋರಿಕೆಯಂತೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಕೆನರಾ ಬ್ಯಾಂಕ್ ವತಿಯಿಂದ ಚಿತ್ರಸಂತೆ ಜಾಗದಲ್ಲಿ ಎಟಿಎಂ ಹಾಗೂ ಸ್ವೆ„ಪ್ ಮಶಿನ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಎಸ್‌ಬಿಎಂ ಹಾಗೂ ಕೆನರಾ ಬ್ಯಾಂಕಿನವರು ತಲಾ ಒಂದು ಸ್ವೆ„ಪಿಂಗ್ ಮಶಿನ್ ಹಾಗೂ ಒಂದೊಂದು ಎಟಿಎಂಗಳ ವ್ಯವಸ್ಥೆ ಮಾಡಿದ್ದರು. ಒಂದು ಬಾರಿಗೆ 75 ಲಕ್ಷ ರೂ.ನಂತೆ ಇಡೀ ದಿನದಲ್ಲಿ ಮೂರು ಬಾರಿ ಒಟ್ಟು 2.5 ಕೋಟಿ ರೂ. ಅದಕ್ಕೆ ಜಮೆ ಮಾಡಲಾಯಿತು. ಈ ವ್ಯವಸ್ಥೆ ಬಗ್ಗೆ ಗ್ರಾಹಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು.